Advertisement

ಸಂಸ್ಕೃತಿ ಉಳಿವಿಗೆ ಮಾತೃಭಾಷೆಯ ಬೋಧನೆ ಅಗತ್ಯ: ಫಾ|ಮಾರ್ಟಿಸ್‌

01:30 PM Feb 07, 2018 | Team Udayavani |

ಕೊಡಿಯಾಲ್‌ಬೈಲ್‌ : ನಮ್ಮ ಸಂಸ್ಕೃತಿಯ ಉಳಿವಿಗೆ ಭಾಷೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ಶಾಲೆ- ಕಾಲೇಜುಗಳಲ್ಲಿ
ಮಾತೃಭಾಷೆಯ ಬೋಧನೆ ಅಗತ್ಯವಾಗಿದೆ. ಕರಾವಳಿ ಭಾಗದ ಮಣ್ಣಿನ ಭಾಷೆಯಾಗಿರುವ ತುಳುವನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ನಗರದ ಸಂತ ಅಲೋಶಿಯಸ್‌ ಕಾಲೇಜಿನ ಪ್ರಾಂಶುಪಾಲ ಫಾ| ಪ್ರವೀಣ್‌ ಮಾರ್ಟಿಸ್‌ ಹೇಳಿದರು.

Advertisement

ಅಲೋಶಿಯಸ್‌ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಶಾಲಾ ಮುಖ್ಯಶಿಕ್ಷಕರಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ‘ತುಳು ಭಾಷಾ ಬೋಧನೆ ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿದರು.

ತುಳುವರನ್ನು ಕಂಡಾಗ ಆತ್ಮೀಯತೆ
ಒಬ್ಬ ವ್ಯಕ್ತಿಯ ಸಾಧನೆಗೆ ದೃಷ್ಟಿಗಿಂತಲೂ ದೃಷ್ಟಿಕೋನ ಅತಿ ಮುಖ್ಯ. ಇದಕ್ಕೆ ಪೂರಕವಾಗಿ ಜೀವನ ರೂಪಿಸಿಕೊಳ್ಳಬೇಕು. ಕರಾವಳಿ ಭಾಗದ ನಾವು ತುಳು ಭಾಷೆಯನ್ನು ಆಡುತ್ತಲೇ ಬೆಳೆದಿದ್ದೇವೆ. ಹೀಗಾಗಿ ನಾವು ದೂರದೂರುಗಳಿಗೆ ಹೋದಾಗ ತುಳುವರನ್ನು ಕಂಡಾಗ ನಮ್ಮವರು ಎಂಬ ಆತ್ಮೀಯತೆ ಬೆಳೆಯುತ್ತದೆ. ನಮ್ಮ ಮಕ್ಕಳು ಕೂಡ ತುಳು ಭಾಷೆಯನ್ನು ಅರಿಯುವ ನಿಟ್ಟಿನಲ್ಲಿ ಅವರಿಗೆ ತುಳು ಬೋಧನೆ ಮಾಡಬೇಕಿದೆ ಎಂದು ಅವರು ಹೇಳಿದರು. 

ತುಳು ಪಠ್ಯವಾಗಿ ಕಲಿಯಲು ಆದೇಶ
ಕಾಲೇಜಿನ ಕುಲಸಚಿವ ಪ್ರೊ| ಪಿ.ನರಹರಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್‌ ಚಂದ್ರಹಾಸ ರೈ ಬಿ.ಮಾತನಾಡಿ, ತುಳುಯೇತರ ಸಚಿವರು ಹಾಗೂ ಅಧಿಕಾರಿಗಳು 2010ರಲ್ಲಿ ತುಳುವನ್ನು ಪಠ್ಯವಾಗಿ ಕಲಿಯಲು ಆದೇಶ ನೀಡಿದ್ದು, ಅದನ್ನು ಅನುಷ್ಠಾನಗೊಳಿಸಲು ತುಳುವರೇ ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ ಕೇವಲ 35 ಶಾಲೆಗಳಲ್ಲಿ 1647 ವಿದ್ಯಾರ್ಥಿಗಳು ಮಾತ್ರ ತುಳು ಅಧ್ಯಯನ ಮಾಡುತ್ತಿದ್ದು, ಅದನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲು ಶಿಕ್ಷಕರು ಮನಸ್ಸು ಮಾಡಬೇಕಿದೆ ಎಂದರು.

ಡಿಡಿಪಿಐ ವೈ.ಶಿವರಾಮಯ್ಯ, ತುಳು ಅಕಾಡೆಮಿ ಸದಸ್ಯ ಶಿವಾನಂದ ಕರ್ಕೇರ, ಸದಸ್ಯ ಸಂಚಾಲಕಿ ದುರ್ಗಾ ಮೆನನ್‌,
ಕಾಲೇಜಿನ ತುಳುಕೂಟದ ಸಂಯೋಜಕಿ ರಶ್ಮಿ ಅಮೀನ್‌ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯ ಪ್ರಭಾಕರ ನೀರುಮಾರ್ಗ ಸ್ವಾಗತಿಸಿದರು.

Advertisement

ತುಳು ವಿಭಾಗ ಸ್ಥಾಪನೆ  
ಸಂತ ಅಲೋಶಿಯಸ್‌ ಕಾಲೇಜು ಡೀಮ್ಡ್ ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರುವ ಸಂದರ್ಭದಲ್ಲಿ ಸ್ಥಳೀಯ ಕಲೆ-ಸಂಸ್ಕೃತಿಯ ಬೆಳೆವಣಿಗೆಗೆ ಪೂರಕ ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿವಿಯಲ್ಲಿ ತುಳು ವಿಭಾಗವನ್ನು ಆರಂಭಿಸುವುದಾಗಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಫಾ| ಪ್ರವೀಣ್‌ ಮಾರ್ಟಿಸ್‌ ಅವರು ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next