Advertisement

ಕನ್ನಡಿಗ ಕಂಡಂತೆ‌ ಸಂಸ್ಕಾರದ ದೃಶ್ಯ

09:36 AM Aug 25, 2019 | mahesh |

“ಶಾಂತಿ ಹುಟ್ಟುವುದೇ ನಗುವಿನಿಂದ’ ಎನ್ನುವ ಜೀವನತತ್ತ್ವದಲ್ಲಿ ನಂಬಿಕೆಯಿಟ್ಟು, ದೀನರ, ರೋಗಿಗಳ, ನಿರ್ಗತಿಕರಿಗೆ ವಾತ್ಸಲ್ಯದ ಚಿಕಿತ್ಸೆ ನೀಡಿದವರು, ಮದರ್‌ ತೆರೇಸಾ. ಕಲ್ಕತ್ತಾದ “ನಿರ್ಮಲ ಹೃದಯ’ದಲ್ಲಿ ರೋಗಿಗಳನ್ನು ಹಗಲುರಾತ್ರಿ ಹೆತ್ತ ಮಕ್ಕಳಂತೆ ಸಲಹುತ್ತಿದ್ದಆ ತಾಯಿಯನ್ನು ಹತ್ತಿರದಿಂದ ದರ್ಶಿಸಿದ ಅನುಭವ ಕಥನವಿದು. ಮದರ್‌ ಅವರ ಜನ್ಮದಿನ (ಆ.26) ಹಿನ್ನೆಲೆಯಲ್ಲಿ ಆ ನೆನಪೊಂದು ಹೀಗೆ ತೇಲಿಬಂದಿದೆ…

Advertisement

1971ರಲ್ಲಿ ನಾನು ಕೆಲಸದ ಮೇಲೆ ಕಲ್ಕತ್ತೆಗೆ ಹೋಗಿದ್ದೆ. ಅಲ್ಲಿ ಆಗ ನಕ್ಸಲೈಟ್‌ ಹಾವಳಿ ಹೆಚ್ಚಾಗಿದ್ದರಿಂದ ನಮಗೆ ಹಾಸ್ಟೆಲ್ಲಿನಲ್ಲಿ ಇರುವುದು ಆಗಲಿಲ್ಲ. ಹೇಗೂ ಮೂರು ದಿವಸ ಅಲ್ಲಿರಬೇಕಾಗಿದ್ದರಿಂದ ನಾನು ಹೋಟೆಲ್ಲಿನಲ್ಲಿ ಇರುವುದಕ್ಕಿಂತ ಯಾವುದಾದರೂ ಸೇವಾಕೇಂದ್ರದಲ್ಲಿದ್ದು ಕೆಲಸ ಮಾಡುವುದು ವಾಸಿ ಎಂದುಕೊಂಡು ಮದರ್‌ ತೆರೇಸಾರವರ ಕಾರ್ಯಕ್ಷೇತ್ರವಾದ “ನಿರ್ಮಲ ಹೃದಯ’ಕ್ಕೆ ಹೋದೆ. ಅಲ್ಲಿದ್ದ ಸಿಸ್ಟರುಗಳಿಗೆ ನನ್ನ ಪರಿಚಯ ಹೇಳಿಕೊಂಡು, “ನಾನು ಅಲ್ಲಿ 3 ದಿನ ಇದ್ದು ಸೇವೆ ಮಾಡಬಹುದೇ?’ ಎಂದು ಕೇಳಿದೆ. ಆಗ ಅವರು, “ಸ್ವಲ್ಪ ಹೊತ್ತು ಕಾಯಿರಿ, ಮದರ್‌ ಬಂದು ನಿರ್ಣಯಿಸುತ್ತಾರೆ’ ಎಂದರು.

ಒಂದು ಗಂಟೆಯ ನಂತರ ಮದರ್‌ ತೆರೇಸಾ ಬಂದರು. ಸುಮಾರು ನಾಲ್ಕು ಅಡಿ ಹತ್ತು ಅಂಗುಲದ ಕುಬ್ಜ ದೇಹ. ಬೆನ್ನು ಬಾಗಿದೆ. ನಾನು ಅವರಿಗಿಂತಲೂ ಹೆಚ್ಚು ಮುಖದ ಮೇಲೆ ನಿರಿಗೆಗಳಿದ್ದ ಮುಖವನ್ನು ನೋಡಿಯೇ ಇರಲಿಲ್ಲ. ಅದಕ್ಕಿಂತ ಹೆಚ್ಚು ತೇಜವುಳ್ಳ ಮುಖವನ್ನೂ ಕಂಡಿರಲಿಲ್ಲ. ನೀಲಿ ಮಿಶ್ರಿತ ಬೂದಿ ಬಣ್ಣದ ತೀಕ್ಷ ಕಣ್ಣುಗಳು ಹೃದಯದೊಳಗೆ ತೂರಿ ಹೋಗುವಂತಿದ್ದವು. ಆಕೆ ಬಂದು ನನ್ನದು ಯಾವ ಜಾತಿ ಎಂಬುದನ್ನೇನೂ ಕೇಳದೇ, “ಆಯ್ತು ಇಲ್ಲಿ ಇರು. ಸಮಯ ಸಿಕ್ಕಾಗ ಫಾರ್ಮಸಿಯಲ್ಲಿ ಔಷಧಿಗಳನ್ನು ನೀಡು’ ಎಂದು ಹೇಳಿ, ಇರಲು ವ್ಯವಸ್ಥೆ ಮಾಡಿದರು. ಆಗ ಇನ್ನೂ ಮದರ್‌ ತೆರೇಸಾ ಜಗತ್ಪ್ರಸಿದ್ಧರಾಗಿರಲಿಲ್ಲ.

ಮರುದಿನ ಮಧ್ಯಾಹ್ನ, ಒಂದು ಘಟನೆ ನಡೆಯಿತು. ಸುಮಾರು ಎರಡು ಗಂಟೆಯ ಹೊತ್ತಿಗೆ ತೆರೇಸಾರವರ ಮಿಶನರೀಸ್‌ ಆಫ್ ಚಾರಿಟೀಸ್‌ನ ಕಾರ್ಯಕರ್ತರು ಒಬ್ಬ ಮುದುಕಿಯನ್ನು ಎತ್ತಿಕೊಂಡು ಬಂದರು. ಆಕೆಗೆ 80ರ ಮೇಲೆ ವಯಸ್ಸಿರಬೇಕು. ಮೈಮೇಲೆ ಎಚ್ಚರವಿಲ್ಲ. ಏನೇನೋ ಬಡಬಡಿಸುತ್ತಿದ್ದಾಳೆ, ಮೈ ಬೆಂಕಿಯಂತೆ ಸುಡುತ್ತಿದೆ. ಆಶ್ರಮದ ಒಂದಿಬ್ಬರು ಸಿಸ್ಟರ್‌ಗಳು ಆಕೆಯನ್ನು ಕರೆದೊಯ್ದು, ಮೈ ಒರೆಸಿ, ವೈದ್ಯರನ್ನು ಕರೆಸಿ ಚಿಕಿತ್ಸೆ ಆರಂಭಿಸಿದರು. ಮದರ್‌ ಆಕೆಯ ಕಾಲು ಒತ್ತುತ್ತಾ, ಬೆನ್ನ ಮೇಲೆ ಕೈ ಆಡಿಸುತ್ತಾ ಸಾಂತ್ವನ ಹೇಳುತ್ತಿದ್ದರು. ನನಗೆ ಬಂಗಾಲೀ ಭಾಷೆ ಬರುವುದಿಲ್ಲವಾದ್ದರಿಂದ ಆ ಮುದುಕಿಯ ಬಡಬಡಿಕೆ, ಮದರ್‌ ಸಾಂತ್ವನ ಅರ್ಥವಾಗಲಿಲ್ಲ.

ಮತ್ತೂಬ್ಬ ಸಿಸ್ಟರ್‌ಗೆ ಕೇಳಿದೆ. ಅವರು ಹೇಳಿದ್ದಿಷ್ಟು, “ಸಂಪ್ರದಾಯಸ್ಥ ಬ್ರಾಹ್ಮಣ ಮನೆತನಕ್ಕೆ ಸೇರಿದ ಮುದುಕಿ. ಬಹಳ ಬಡತನ. ಆಕೆಯ ಮಗ ಒಂದು ವರ್ಷದವನಿದ್ದಾಗ ಗಂಡ ತೀರಿಹೋದ. ಬಂಧುಗಳು ಆಕೆಯ ತಲೆಬೋಳಿಸಿ, ಕೆಂಪು ಸೀರೆ ಉಡಿಸಿ ಹೋದರೇ ವಿನಃ ಬೇರೇನೂ ಸಹಾಯ ಮಾಡಲಿಲ್ಲ. ಆಕೆ ಮತ್ತೂಬ್ಬರ ಮನೆಯಲ್ಲಿ ಅಡುಗೆ, ಕಸ ಮುಸುರೆ ಮಾಡಿ ಮಗನನ್ನು ಬೆಳೆಸಿ, ಶಿಕ್ಷಣ ಕೊಟ್ಟು ಮದುವೆಯನ್ನು ಮಾಡಿದಳು. ನಂತರ ಏನೋ ತಕರಾರು ಬಂದು ಮಗ ಇವಳನ್ನು ಮನೆಯಿಂದ ಹೊರಹಾಕಿದ. ದೇಹದಲ್ಲಿ ಶಕ್ತಿ ಇರುವವರೆಗೂ ಕೆಲಸ ಮಾಡಿ ಬದುಕು ಸಾಗಿಸಿದಳು. ನಂತರ ಭಿಕ್ಷೆಯೇ ದಾರಿಯಾಯಿತು. ಎರಡು ದಿನಗಳಿಂದ ತಿನ್ನಲಿಕ್ಕೆ ಏನೂ ಸಿಕ್ಕಿಲ್ಲ, ಜ್ವರ ಬೇರೆ. ಕಂಗಾಲಾಗಿ ಕಾಳೀ ದೇವಸ್ಥಾನದ ಹತ್ತಿರ ಎಚ್ಚರ ತಪ್ಪಿ ಬಿದ್ದಿದ್ದಾಳೆ. ಈಗ ಬಡಬಡಿಸುತ್ತ ಮಗನಿಗೆ ಶಾಪ ಹಾಕುತ್ತಿದ್ದಾಳೆ. ಮದರ್‌, ಆಕೆಗೆ “ಛೇ, ಮಗನಿಗೆ ಶಾಪ ಹಾಕುತ್ತಾರೆಯೇ? ಬಿಡು, ಆತ ಬಂದು ನಿನ್ನನ್ನು ಮನೆಗೆ ಕರಕೊಂಡು ಹೋಗುತ್ತಾನೆ. ಯಾರನ್ನೂ ಬೈಯ್ಯಬೇಡ’ ಎಂದು ಸಮಾಧಾನ ಹೇಳುತ್ತಿದ್ದಾರೆ’ ಎಂದರು.

Advertisement

ನಾಲ್ಕು ಗಂಟೆಯ ಹೊತ್ತಿಗೆ ಔಷಧಿಯಿಂದಾಗಿಯೋ, ಆರೈಕೆಯಿಂದಾಗಿಯೋ ಆಕೆಗೆ ಎಚ್ಚರ ಬಂದಿತು. ತಕ್ಷಣ ಕಾರ್ಯಕರ್ತರು ಆಕೆಯಿಂದ ಮಗನ ಮನೆಯ ಅಡ್ರೆಸ್‌ ಪಡೆದು ಪತ್ರ ಕಳುಹಿಸಿದರು. ಆತ ಅವರೊಂದಿಗೆ ಹೇಳಿ ಕಳುಹಿಸಿದ, ನನಗೂ ನಮ್ಮ ತಾಯಿಗೂ ಯಾವ ಸಂಬಂಧವೂ ಇಲ್ಲ ಅದನ್ನು ಮುದುಕಿಗೆ ಹೇಳಲಿಲ್ಲ. ಸಂಜೆಯ ಹೊತ್ತಿಗೆ ಮುದುಕಿ ಪೂರ್ತಿ ಹುಷಾರಾದಂತೆ ಕಂಡಿತು. ಆಕೆ ನಗುನಗುತ್ತಾ, “ನನ್ನ ಮಗ ಬಹಳ ಒಳ್ಳೆಯವನು. ಒಂದು ದಿನ ಬಂದು ನನ್ನನ್ನು ಕರಕೊಂಡು ಹೋಗುತ್ತಾನೆ’ ಎಂದು ಹೇಳತೊಡಗಿದಳು. ರಾತ್ರಿ ಸುಮಾರು ಒಂದು ಗಂಟೆಗೆ ಮತ್ತೆ ಗದ್ದಲ ಪ್ರಾರಂಭವಾಯಿತು. ಮುದುಕಿಯ ರಕ್ತದೊತ್ತಡ ತೀವ್ರ ಕಡಿಮೆಯಾಗುತ್ತಿತ್ತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ, ಸಾಧ್ಯವಾಗದೇ ಆಕೆ ಎರಡು ಗಂಟೆಗೆ ತೀರಿಹೋದಳು. ಮತ್ತೆ ಮಗನಿಗೆ ಸುದ್ದಿ ಹೋಯಿತು. ಆತ, “ಬದುಕಿದ್ದಾಗಲೇ ಯಾವ ಸಂಬಂಧವೂ ಇರಲಿಲ್ಲ. ದೇಹಕ್ಕೆ ನೀವು ಏನಾದರೂ ಮಾಡಿಕೊಳ್ಳಿ’ ಎಂದು ಉತ್ತರ ಕಳುಹಿಸಿದ.

ಆಗ ಮದರ್‌ ನನ್ನ ಕಡೆಗೆ ತಿರುಗಿ, “ನೀನು ಬ್ರಾಹ್ಮಣರ ಹುಡುಗ ಅಲ್ವಾ? ಈ ಮುದುಕಿಗೆ ಕ್ರಿಯೆ ಮಾಡುತ್ತೀಯಾ?’ ಎಂದರು. ನನಗೆ ಎದೆ ಝಲ್ಲೆಂದಿತು! ಒಂದು ಕ್ಷಣ ಯೋಚಿಸಿದೆ, ನಾನು ಹೋದದ್ದು ಸ್ವಯಂಸೇವಕನಾಗಿ, ಸ್ವಯಂಸೇವಕರಿಗೆ ಆಯ್ಕೆಗಳಿಲ್ಲ. “ಆಯ್ತು’ ಎಂದು ಎಲ್ಲ ಕ್ರಿಯೆಗಳನ್ನು ಮಾಡಿ ಬಂದೆ. ಯಾವ ಜನ್ಮದಲ್ಲಿ ನನಗೆ ಆಕೆ ತಾಯಿ ಆಗಿದ್ದಳ್ಳೋ?

“ನಿರ್ಮಲ ಹೃದಯ’ ಕ್ಕೆ ಬಂದು ಸ್ನಾನ ಮಾಡಿ ಕುಳಿತೆ. ಮನಸ್ಸು ಭಾರವಾಗಿತ್ತು. ಮದರ್‌ ಪಕ್ಕದಲ್ಲಿ ಕುಳಿತು, “ಯಾಕೆ ಮಗೂ, ಬೇಜಾರಾಯ್ತಾ?’ ಎಂದರು. ನಾನು, “ಮದರ್‌, ನೀವು ಇಷ್ಟೆಲ್ಲ ಪ್ರಯತ್ನ ಮಾಡಿದರೂ ಆಕೆ ಬದುಕಲಿಲ್ಲವಲ್ಲ?’ ಎಂದೆ. ಆಗವರು, “ಇಲ್ಲ ಮಗೂ, ದುಃಖೀಸಬಾರದು. ಆಕೆ ಸಾವಿನಲ್ಲಿ ಘನತೆ ಪಡೆದಿದ್ದಳು’ ಎಂದರು! ನಾನು ಬದುಕಿನಲ್ಲಿ ಘನತೆಯ ಬಗ್ಗೆ ಕೇಳಿದ್ದೆ. ಆದರೆ, “ಸಾವಿನಲ್ಲಿ ಘನತೆ ಎಂದರೇನು’ ಅಂತ ತಿಳಿದಿರಲಿಲ್ಲ. ಅವರನ್ನೇ ಕೇಳಿದೆ. ಅವರು ಹೇಳಿದ ಮಾತನ್ನು ನಾನೆಂದಿಗೂ ಮರೆಯಲಾರೆ. “ಮಗೂ, ನಿನ್ನ ಹೃದಯ, ಭಗವಂತನ ಮಂದಿರ. ಅದು ಯಾವಾಗಲೂ ಶುದ್ಧವಾಗಿರಬೇಕು. ನಿನ್ನೆ ಮಧ್ಯಾಹ್ನ ಆ ಹೆಂಗಸು ಇಲ್ಲಿ ಬಂದಾಗ ಆಕೆಯ ಹೃದಯದಲ್ಲಿ ಕೋಪ, ತಾಪ, ದ್ವೇಷ, ಹಟ ತುಂಬಿಕೊಂಡಿತ್ತು. ರಾತ್ರಿಯ ಹೊತ್ತಿಗೆ ಅದೆಲ್ಲ ಕಳೆದು ಹೃದಯದಲ್ಲಿ ಮಗನ ಬಗ್ಗೆಯೂ ಪ್ರೀತಿ ಬಂದಿತ್ತು. ಸಾವಿನ ಕ್ಷಣದಲ್ಲಿ ಹೃದಯ ಶುದ್ಧವಾಗಿದ್ದಾಗ, ಆಕೆ ಭಗವಂತನ ಮುಂದೆ ನಿಂತು, ಭಗವಂತಾ, ನೀನು ಭೂಮಿಗೆ ನನ್ನನ್ನು ಕಳುಹಿಸಿದಾಗ ಹೃದಯ ಯಾವ ಪರಿಶುದ್ಧತೆಯಲ್ಲಿತ್ತೋ, ಅದೇ ಪರಿಶುದ್ಧತೆ ಈಗಲೂ ಇದೆ, ಸ್ವೀಕರಿಸು ಎನ್ನುತ್ತಾಳೆ. ಇದೇ ಸಾವಿನಲ್ಲಿನ ಘನತೆ’. ಆ ಮಾತೆಯ ಮುಂದೆ ನನಗೆ ಮಾತೇ ಹೊರಡದಾಗಿತ್ತು.

– ಡಾ. ಗುರುರಾಜ ಕರ್ಜಗಿ

Advertisement

Udayavani is now on Telegram. Click here to join our channel and stay updated with the latest news.

Next