Advertisement

ಸಂಸ್ಕೃತಿ ಪ್ರಚುರಪಡಿಸುವ ಚಿತ್ರ ಚಿತ್ತಾರ!

10:19 AM Nov 09, 2018 | |

ಮಹಾನಗರ: ಕರಾವಳಿಯ ಸಂಸ್ಕೃತಿ, ಆಚಾರ- ವಿಚಾರಗಳನ್ನು ಪ್ರಯಾಣಿಕರಿಗೆ ಪ್ರಸ್ತುತಪಡಿಸುವ ಉದ್ದೇಶದಿಂದ ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದ ಗೋಡೆಗಳು ಕೆಲವೇ ದಿನಗಳಲ್ಲಿ ಬಗೆ ಬಗೆಯ ಚಿತ್ರ- ಚಿತ್ತಾರಗಳಿಂದ ಕಂಗೊಳಿಸಲಿವೆ. ಈಗಾಗಲೇ ನಿಲ್ದಾಣದ ಗೋಡೆಯಲ್ಲಿ ಒಂದು ಚಿತ್ರ ಬಿಡಿಸಲಾಗಿದೆ.

Advertisement

ನಿಲ್ದಾಣದ ರಿಸರ್ವೇಶನ್‌ ಕೌಂಟರ್‌ ಮುಂಭಾಗದ ಒಂದು ಗೋಡೆಯಲ್ಲಿ ಮಂಗಳೂರಿನ ಕೇಂದ್ರೀಯ ವಿದ್ಯಾಲಯದ ಮಕ್ಕಳು ಈಗಾಗಲೇ ಕರಾವಳಿಯ ಕಡಲ ಕಿನಾರೆಯನ್ನು ಪ್ರತಿಬಿಂಬಿಸುವ ಚಿತ್ರ ಬಿಡಿಸಿದ್ದಾರೆ. ಕಡಲ ತೀರದಲ್ಲಿ ಆಟವಾಡುವ ಮಕ್ಕಳು, ಬೋಟುಗಳನ್ನು ಒಳಗೊಂಡ ಸುಂದರ ಕರಾವಳಿಯ ಕಲ್ಪನೆಯನ್ನು ಚಿತ್ರದ ಮೂಲಕ ಜೀವಂತಿಕೆ ನೀಡಲಾಗಿದೆ. ಇದೇ ಪರಿಕಲ್ಪನೆಯಲ್ಲಿ ರೈಲು ನಿಲ್ದಾಣ, ರೈಲ್ವೇ ಪೊಲೀಸ್‌ ಠಾಣೆಯ ಮುಂಭಾಗದ ಗೋಡೆಗಳಿಗೆ ಚಿತ್ರಬಿಡಿಸಿ, ಕರಾವಳಿಯ ಸಂಸ್ಕೃತಿ, ಸಂಸ್ಕಾರವನ್ನು ಪ್ರಯಾಣಿಕರಿಗೆ ಉಣಬಡಿಸಲು ರೈಲ್ವೇ ಇಲಾಖೆ ಮುಂದಾಗಿದೆ.

ಆಸಕ್ತ ಕಲಾವಿದರು, ಸಂಘ-ಸಂಸ್ಥೆಗಳು ಕೂಡ ಈ ಯೋಜನೆಯಲ್ಲಿ ರೈಲ್ವೇ ಇಲಾಖೆಯ ಜತೆಗೆ ಕೈಜೋಡಿಸಲು ಅವಕಾಶವಿದೆ. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌ ಅವರನ್ನು ಈ ಕುರಿತಂತೆ ಸಂಪರ್ಕಿಸಬಹುದು.

ಸುಂದರೀಕರಣಕ್ಕೆ ಒತ್ತು
ದೇಶದ ರೈಲು ನಿಲ್ದಾಣವನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಗೊಳಿಸುವ ಇರಾದೆ ಇತ್ತು. ಚಿತ್ರಕಲಾವಿದರ ಕೈಚಳಕದೊಂದಿಗೆ ಸುಂದರೀಕರಣಗೊಳಿಸಿ ‘ಸೌಂದರ್ಯ ಸ್ಪರ್ಧೆ’ಗೆ ತೆರೆದುಕೊಳ್ಳುವಂತೆ ಮಾಡುವ ವಿನೂತನ ಯೋಜನೆಗೆ ಕೇಂದ್ರ ರೈಲ್ವೇ ಮಂಡಲಿ ಈ ಹಿಂದೆ ನಿರ್ಧರಿಸಿತ್ತು. ಆದರೆ, ಇದಕ್ಕೆ ನಿರೀಕ್ಷಿತ ಸ್ಪಂದನೆ ದೊರೆಯದ ಕಾರಣದಿಂದ ಸ್ಪರ್ಧೆ ಕೈಬಿಟ್ಟು ರೈಲು ನಿಲ್ದಾಣ ಸುಂದರೀಕರಣಗೊಳಿಸಲು ಮಾತ್ರ ಇದೀಗ ಒತ್ತು ನೀಡಲಾಗಿದೆ. ಇದರಂತೆ ದಕ್ಷಿಣ ರೈಲ್ವೇ ಪಾಲ್ಘಾಟ್‌ ವಿಭಾಗ ನೇತೃತ್ವದಲ್ಲಿ ತಮ್ಮ ವ್ಯಾಪ್ತಿಯ ರೈಲು ನಿಲ್ದಾಣವನ್ನು ಸುಂದರೀಕರಣಗೊಳಿಸಲು ಉದ್ದೇಶಿಸಲಾಗಿದೆ.

ಹೊಳೆಯುವ ರೈಲು ನಿಲ್ದಾಣಗಳು
ದೇಶದ ಹಳೆಯ ರೈಲು ನಿಲ್ದಾಣವಾದ ಬಿಹಾರದ ಮಧುಬನಿಯು ಮಧುಬನಿ ಶೈಲಿಯ ಚಿತ್ರಕಲೆಗಳ ಮೂಲಕ ದೇಶವ್ಯಾಪಿ ಗಮನಸೆಳೆದಿದೆ. ರಾಮಾಯಣದ ವಿವಿಧ ಕಥಾವಸ್ತುಗಳನ್ನು ಆಧಾರವಾಗಿರಿಸಿ ಸ್ಥಳೀಯ ಚಿತ್ರಕಲಾವಿದರು ನಿಲ್ದಾಣವನ್ನು ಸುಂದರೀಕರಣಗೊಳಿಸಿದ್ದರು. ದೇಶದ ಚಿಕ್ಕ ರೈಲ್ವೇ ನಿಲ್ದಾಣವಾದ ಸವಾಯಿ ಮಧೋಪುರ್‌ನ ಗೋಡೆಗಳಲ್ಲಿ ಸ್ಥಳೀಯ ಸ್ಕೂಲ್‌ ಆಫ್‌ ಆರ್ಟ್ಸ್ ನ 
ವಿದ್ಯಾರ್ಥಿಗಳ ತಂಡ ವಿನೂತನ ರೀತಿಯಲ್ಲಿ ಚಿತ್ರ ಬರೆದಿದ್ದಾರೆ. ಪರಿಸರ ಸಂಬಂಧಿತ ವಿಚಾರಗಳನ್ನು ಮುಂದಿಟ್ಟು ಆ ರೈಲ್ವೇ ನಿಲ್ದಾಣದ ವ್ಯಾಪ್ತಿಯಲ್ಲಿ ಹುಲಿ, ಸಿಂಹ, ಮರ, ಗಿಡಗಳು ಆಕರ್ಷಕವಾಗಿ ಮೂಡಿಬಂದಿದ್ದು, ದೇಶವ್ಯಾಪಿ ಗಮನಸೆಳೆದಿತ್ತು. ಜೋಧ್‌ ಪುರ್‌ ರೈಲು ನಿಲ್ದಾಣವನ್ನು ಕೂಡ ಜೋಧ್‌ಪುರ ಶೈಲಿಯಲ್ಲಿ ಕಲಾತ್ಮಕ ರೀತಿಯಲ್ಲಿ ಶೃಂಗರಿಸಲಾಗಿದೆ. ಇದೇ ಮಾದರಿಯಲ್ಲಿ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಕೂಡ ಆಕರ್ಷಕವಾಗಿ ಬದಲಾವಣೆಯಾಗುವ ನಿರೀಕ್ಷೆಯಿದೆ.

Advertisement

ಗೋಡೆಯಲ್ಲಿ ಚಿತ್ರ: ಅನುಮತಿ ಅಗತ್ಯ
ರೈಲು ನಿಲ್ದಾಣದ ಗೋಡೆಗಳನ್ನು ಸುಂದರೀಕರಣಗೊಳಿ ಸಲು ಆಯಾ ಭಾಗದ ಚಿತ್ರ ಕಲಾವಿದರು, ಸಂಘಟಕರು, ಸ್ವಯಂ ಸೇವಾ ಸಂಸ್ಥೆಗಳು ಇದರ ಜವಾಬ್ದಾರಿ ವಹಿಸಬಹುದು. ಇದಕ್ಕಾಗಿ, ರೈಲು ನಿಲ್ದಾಣದ ಪ್ರಮುಖರಲ್ಲಿ ಅನುಮತಿ ಪಡೆದಿರಬೇಕು ಹಾಗೂ ಬರೆಯುವ ಚಿತ್ರಗಳ ವಿವರ ಹಾಗೂ ಮ್ಯಾಪ್‌ ಅನ್ನು ಸಲ್ಲಿಸಬೇಕು. ಇಂತಹ ದಾಖಲೆಗಳನ್ನು ಪಡೆದುಕೊಂಡ ಅಧಿಕಾರಿಗಳು ಅದನ್ನು ಸಂಬಂಧಿತ ರೈಲ್ವೇ ವಿಭಾಗಕ್ಕೆ ಒಪ್ಪಿಗೆಗಾಗಿ ಕಳುಹಿಸುತ್ತಾರೆ. ಅಲ್ಲಿ ಅನುಮತಿ ದೊರೆತ ಅನಂತರ ಸಂಬಂಧಿತ ಚಿತ್ರ ಕಲಾವಿದರು/ಸ್ವಯಂ ಸೇವಾ ಸಂಸ್ಥೆಗಳು ರೈಲು ನಿಲ್ದಾಣದ ನಿಗದಿತ ಗೋಡೆಗಳಲ್ಲಿ ಚಿತ್ರ ಬರೆಯಬಹುದು ಎಂದು ರೈಲ್ವೇ ಇಲಾಖೆಯ ಮೂಲಗಳು ತಿಳಿಸಿವೆ.

ರೈಲು ನಿಲ್ದಾಣ ಸೌಂದರ್ಯ ವರ್ಧನೆ
ಸೆಂಟ್ರಲ್‌ ರೈಲು ನಿಲ್ದಾಣವನ್ನು ಚಿತ್ರಕಲಾವಿದರ ಮುಖೇನ ಕರಾವಳಿಯ ಸಂಸ್ಕೃತಿ ಸಾರುವ ಚಿತ್ರಗಳನ್ನು ಬರೆಯುವ ಮೂಲಕ ಸುಂದರಗೊಳಿಸಬಹುದು. ಆಸಕ್ತ ಚಿತ್ರಕಲಾವಿದರಿಂದ ಈ ಕುರಿತಂತೆ ಸ್ಪಂದನೆಯನ್ನು ನಿರೀಕ್ಷಿಸಲಾಗಿದೆ.
– ಕಿಶನ್‌ ಕುಮಾರ್‌ ಎಂ.ಎಸ್‌.,
ಡೆಪ್ಯುಟಿ ಸ್ಟೇಷನ್‌ ಮ್ಯಾನೇಜರ್‌ (ವಾಣಿಜ್ಯ)
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next