ಹುಬ್ಬಳ್ಳಿ: ಜೀವನದಲ್ಲಿ ಮೈತ್ರಿಭಾವ, ಸದ್ಭಾವನೆ, ಸಹಬಾಳ್ವೆಯೊಂದಿಗೆ ಪರೋಪಕಾರ ಗುಣಗಳು ಅವಶ್ಯ ಎಂದು ಆಚಾರ್ಯ ಶ್ರೀ ಮಹಾಶ್ರಮಣಜಿ ಹೇಳಿದರು.
ಕುಸುಗಲ್ಲ ರಸ್ತೆಯ ಸಂಸ್ಕಾರ ಶಾಲೆಯ ಸಮೀಪ ನಡೆಯುತ್ತಿರುವ 156ನೇ ಮರ್ಯಾದಾ ಮಹೋತ್ಸವದಲ್ಲಿ ಮಾತನಾಡಿದರು. ಜೀವನದಲ್ಲಿ ಸಂಸ್ಕಾರ ನಿರ್ಮಾಣವಾಗುವುದು ಮುಖ್ಯ. ಸಂಸ್ಕಾರ ಇಲ್ಲದಿದ್ದರೆ ಜೀವನ ಪರಿಪೂರ್ಣವಾಗುವುದಿಲ್ಲ ಎಂದರು.
ತ್ಯಾಗ ಧರ್ಮ, ಭೋಗ ಅಧರ್ಮ. ತ್ಯಾಗವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಜೈನ ಧರ್ಮದಲ್ಲಿ ತ್ಯಾಗಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಅಸಂಯಮದ ಜೀವನ ಸಾಮಾನ್ಯ. ಯಾರಾದರೂ ಈ ರೀತಿಬದುಕಬಹುದು. ಆದರೆ ಸಂಯಮಯುತ ಜೀವನ ವಿಶೇಷವಾಗಿದೆ. ಸಂಯಮವಿಲ್ಲದೇ ಜೀವನ ಕಲ್ಯಾಣವಾಗಲಾರದು. ಜನಕಲ್ಯಾಣ ನಮ್ಮ ಉದ್ದೇಶವಾಗಿರಬೇಕು ಎಂದು ತಿಳಿಸಿದರು.
ಸಾಧುಗಳು ಹಾಗೂ ಸಾಧ್ವಿಗಳು ಒಬ್ಬರೇ ಗುರುವಿನ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ಉತ್ತರಾಧಿಕಾರಿ ನೇಮಕವಾದಾಗ ಎಲ್ಲರೂ ಅದನ್ನು ಮುಕ್ತ ಮನಸಿನಿಂದ ಒಪ್ಪಿಕೊಳ್ಳಬೇಕು. ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಪಾಲನೆ ಮಾಡುವುದು ಮುಖ್ಯ ಎಂದರು. ನಮ್ಮ ಕೈಲಾದ ಸಂಘ ಸೇವೆ ಮಾಡಬೇಕು. ವೃದ್ಧರ ಸೇವೆ ಮಾಡಬೇಕು. ಇನ್ನೊಬ್ಬರ ಸೇವೆಗೆ ಸದಾ ಮುಂದಾಗಬೇಕು. ಸಂಘದಲ್ಲಿ ನಮ್ಮ ನಿಷ್ಠೆ ಇರಬೇಕು. ಭಿಕ್ಷು ಗಣದಲ್ಲಿ ನಿಷ್ಠೆ ಇರಬೇಕು. ಸತ್ಯವನ್ನು ಸ್ವೀಕಾರ ಮಾಡುವ ಸಾಹಸ ಕೂಡ ಶ್ರೇಷ್ಠವಾಗಿದೆ ಎಂದು ಹೇಳಿದರು.
ಸಣ್ಣ ವಿಷಯಕ್ಕೆ ಸಂಬಂಧ ಕಡಿದುಕೊಳ್ಳುವುದು ಸರಿಯಲ್ಲ. ಸಮಯ ಎನ್ನುವುದು ಧನವಿದ್ದಂತೆ. ಅದನ್ನು ನಾವು ಸದ್ವಿನಿಯೋಗ ಮಾಡುವುದು ಅಗತ್ಯವಾಗಿದೆ. ಅನವಶ್ಯಕವಾಗಿ ಮಾತನಾಡದಿರುವುದು ಉತ್ತಮರ ರಹಸ್ಯಗಳಲ್ಲೊಂದಾಗಿದೆ ಎಂದರು. ಸಾಧ್ವಿ ಪ್ರಮುಖಾಜಿ ಮಾತನಾಡಿ, ಸಮಾಜದಲ್ಲಿ ಸದ್ಭಾವನಾ ವಾತಾವರಣ ಇರುವುದು ಅವಶ್ಯಕವಾಗಿದೆ. ನೈತಿಕತೆಯ ಜ್ಯೋತಿ ನಿರಂತರವಾಗಿ ಬೆಳಗುತ್ತಿರಬೇಕು. ಪರೋಪಕಾರ ಜೀವನ ನಮ್ಮದಾಗಬೇಕು. ಮನುಷ್ಯ ಜೀವನದಲ್ಲಿ ಸಾಧನೆಗೆ ಪ್ರಾಧಾನ್ಯತೆ ನೀಡಬೇಕು ಎಂದು ಹೇಳಿದರು