Advertisement
ಆದರ್ಶ ವ್ಯಕ್ತಿತ್ವ ರೂಪಿತಗೊಳ್ಳಲು ಸಂಸ್ಕಾರ ಮುಖ್ಯ. ಮಾತು, ಮನ, ಕೃತಿಗಳು ಒಂದಾಗಿದ್ದರೆ ನಿಜವಾದ ಗೌರವ, ಘನತೆ ಸಿಗುತ್ತದೆ. ಮಾತಿಗೂ ಕೃತಿಗೂ ಅಜಗಜಾಂತರದಿಂದಾಗಿ ಸಮಾಜದಲ್ಲಿ ಸತ್ಯ ಸಂಸ್ಕೃತಿ ಆದರ್ಶಗಳು ಕಡಿಮೆಯಾಗುತ್ತಿವೆ. ಉತ್ತಮ ಸಂಸ್ಕಾರ ಪಡೆದು ಬಾಳಿದರೆ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ.
ಸಮಸ್ಯೆಗಳ ನಡುವೆಯೂ ಸಹನೆ, ತಾಳ್ಮೆ ನಿರೀಕ್ಷೆಗಳನ್ನಿಟ್ಟುಕೊಂಡು ಬಾಳುವ ಗುಣ ಉತ್ತಮ ಸಂಸ್ಕಾರದಿಂದ ಪಡೆಯಬಹುದು. ವ್ಯಕ್ತಿ ಯಾವ ಮಟ್ಟಕ್ಕೆ ಬೆಳೆಯುತ್ತಾನೆ ಎಂಬುದು ಆತನಲ್ಲಿರುವ ಸಂಸ್ಕಾರವೇ ಪುಷ್ಟಿಕರಿಸುತ್ತದೆ. ಅಹಂಕಾರ, ಕ್ರೌರ್ಯ, ಹಿಂಸೆ ಬಿಟ್ಟು ಶಾಂತಿ, ಸಮಾಧಾನದಿಂದ ಬದುಕುವ, ವ್ಯವಹರಿಸುವ ಗುಣ ಹೊಂದಲು ಉತ್ತಮ ಸಂಸ್ಕಾರ ಪೂರಕ. ಹಾಗೇ ಮಾನವೀಯ ಮೌಲ್ಯ, ನೈತಿಕ ಗುಣಗಳನ್ನು ಅಳವಡಿಸಿಕೊಂಡು ವ್ಯಕ್ತಿಯು ಸಮಾಜ, ದೇಶದ ಒಳಿತಿಗೆ ದುಡಿಯುವಂತಾಗಲು ಚಿಕ್ಕಂದಿನಲ್ಲೇ ಶ್ರೇಷ್ಠ ಸಂಸ್ಕಾರ ನೀಡಬೇಕಾದದ್ದು ಅತೀ ಅಗತ್ಯ. ಸಂಸ್ಕಾರದಿಂದ ವ್ಯಕ್ತಿತ್ವ
ಪ್ರಕೃತಿ ರೂಪದಲ್ಲಿರುವ ಕಲ್ಲು, ಮಣ್ಣು, ಕಟ್ಟಿಗೆ, ಕಾಗದ ಯಾವುದೇ ವಸ್ತುಗಳನ್ನು ನಾವು ತುಳಿಯುತ್ತೇವೆ. ಆದರೆ ಅದೇ ವಸ್ತುವಿಗೆ ಒಂದು ಉತ್ತಮ ರೂಪ ಕೊಟ್ಟಾಗ ಅದನ್ನು ನಾವು ಗೌರವಿಸುತ್ತೇವೆ. ಮಣ್ಣು ನೀರಿನಲ್ಲಿ ಕರಗಿ ಹೋಗುತ್ತದೆ. ಆದರೆ ಮಣ್ಣನ್ನು ಸಂಸ್ಕರಿಸಿ ಮಾಡಿದ ಮಡಿಕೆ ನೀರಿನಲ್ಲಿ ತೇಲುತ್ತದೆ. ಅಷ್ಟೇ ಅಲ್ಲ ಅದರಲ್ಲಿ ಮಣ್ಣು ಹಾಕಿದರೂ ಅದನ್ನು ಹೊತ್ತುಕೊಂಡು ಹೋಗುವ ಶಕ್ತಿ ಆ ಮಡಿಕೆಗೆ ಇರುತ್ತದೆ. ಅಂದರೆ ಮಣ್ಣಿಗೆ ಮಡಿಕೆ ರೂಪದ ಸಂಸ್ಕಾರ ಕೊಟ್ಟಾಗ ಅದಕ್ಕೆ ಆ ಶಕ್ತಿ ಬರುತ್ತದೆ. ಬದುಕಿನ ರೀತಿ, ವೇಷ ಭೂಷಣ, ನಮ್ಮ ನಡೆ ನುಡಿ ಆಧರಿಸಿ ವ್ಯಕ್ತಿತ್ವ ನಿರ್ಧರಿಸಲಾಗುತ್ತದೆ. ಹಾಗಾಗಿ ನಾವು ಅಳವಡಿಸಿಕೊಂಡ ಸಂಸ್ಕಾರದಿಂದ ನಮ್ಮ ವ್ಯಕ್ತಿತ್ವ ರೂಪಿತವಾಗುತ್ತದೆ.
Related Articles
ಪರಿಪೂರ್ಣ ವ್ಯಕ್ತಿತ್ವ ರೂಪಿಸುವ ಶಕ್ತಿ ಸಂಸ್ಕಾರಕ್ಕಿದ್ದು, ಅದನ್ನು ಅಳವಡಿಸಿಕೊಳ್ಳಲು ಮನೆ ಮನೆಗಳಲ್ಲಿ ಹಿರಿಯರು ಪ್ರೇರಣೆ ನೀಡಬೇಕು. ಸಂಸ್ಕಾರವಿಲ್ಲದ ಬದುಕು ಮನುಷ್ಯನನ್ನು ಕೆಳಹಂತಕ್ಕೆ ಕೊಂಡೊಯ್ಯಲಿದೆ. ಆದ್ದರಿಂದ ಉತ್ತಮ ಶಿಕ್ಷಣ, ಅವಕಾಶ ನೀಡುವ ಜತೆಗೆ ಸಂಸ್ಕಾರ ಕೊಡಿಸುವ ಅನಿವಾರ್ಯತೆ ಹೆಚ್ಚಾಗಿದೆ. ಸಮಾಜಕ್ಕೆ ಉಪ್ಪಾಗದೆ, ಮುಪ್ಪಾಗದೆ ಹೆಪ್ಪಾಗುವ ರೀತಿ ಮನುಷ್ಯನ ಬದುಕು ರೂಪುಗೊಳ್ಳಬೇಕು.
Advertisement
ಇಂದು ವ್ಯಕ್ತಿಗಳಿಗೆ ಯೋಗ್ಯ ಸಂಸ್ಕಾರ ದೊರೆಯದ ಕಾರಣ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆ. ಮುಂದಿನ ಜನಾಂಗವನ್ನು ನೈತಿಕವಾಗಿ ಸಬಲರನ್ನಾಗಿಸಬೇಕಾದ, ಅವರಿಗೆ ಸಂಸ್ಕಾರದ ಅರಿವು ಮೂಡಿಸುವ ಅನಿವಾರ್ಯ ನಮ್ಮ ಮುಂದಿದೆ. ಜೀವನವು ಕೇವಲ ಯಾಂತ್ರಿಕ, ವ್ಯಾವಹಾರಿಕವಾಗಬಾರದು. ಆದರೆ, ಇಂದು ಅದೇ ಆಗುತ್ತಿರುವುದು ಖೇದಕರ. ಪರಸ್ಪರರಲ್ಲಿ ವಿಶ್ವಾಸ, ನಂಬಿಕೆ, ಸ್ನೇಹ ಮತ್ತಿತರ ನೈತಿಕ ಮೌಲ್ಯಗಳು ಅಡಕವಾಗಿದ್ದಾಗ ಜೀವನ ಅರ್ಥಪೂರ್ಣವಾಗುವುದು.
ಸಂಸ್ಕಾರದಿಂದ ಜೀವನ ಮೌಲ್ಯ ವೃದ್ಧಿಮನುಷ್ಯರಿಗೆ ಸಂಬಂಧಿಸಿ `ಮೌಲ್ಯ’ ಎಂದರೆ ವ್ಯಕ್ತಿಯೊಬ್ಬನಲ್ಲಿ ಅಪೇಕ್ಷಿತ ಮತ್ತು ನಿರ್ದಿಷ್ಟವಾದ ವರ್ತನೆಯಾಗಿದೆ. ಅದು ಆತನ ವ್ಯಕ್ತಿತ್ವ ವನ್ನು ಸೂಚಿಸುತ್ತದೆ. ಪ್ರತಿಯೊಬ್ಬನ ವರ್ತನೆ, ವ್ಯಕ್ತಿತ್ವದಿಂದ ಆತನ ಜೀವನ ಮೌಲ್ಯ ನಿರ್ಧರಿಸಲಾಗುತ್ತದೆ ಅಥವಾ ವ್ಯಕ್ತವಾಗುತ್ತದೆ. ನಾವು ಮೌಲ್ಯಗಳನ್ನು ಆಚರಣೆಗೆ ತರಬೇಕು. ಆಗ ಮಾತ್ರ ಜನರು ನಮ್ಮನ್ನು ಗುರುತಿಸುತ್ತಾರೆ ಮತ್ತು ಅನುಸರಿಸುತ್ತಾರೆ. ಮೌಲ್ಯಗಳು ನಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸಲು ಮತ್ತು ದುರಭ್ಯಾಸಗಳಿಂದ ದೂರವಿರಲು ಸಹಕಾರಿಯಾಗಿವೆ. ನಮ್ಮ ಜೀವನದಲ್ಲಿ ನಂಬಿಕೆ ಮತ್ತು ಸಿದ್ಧಾಂತಗಳು ಮಹತ್ವ ಪೂರ್ಣ ಸ್ಥಾನಗಳನ್ನು ಹೊಂದಿವೆ. ಅವುಗಳು ವ್ಯಕ್ತಿತ್ವ ಮತ್ತು ಧೋರಣೆಗಳನ್ನು ರೂಪಿಸುತ್ತವೆ. ನಾವು ಸಮಾಜದಲ್ಲಿ ಸುಖವಾಗಿದ್ದೇವೋ ಇಲ್ಲವೋ ಎನ್ನುವುದನ್ನು ನಿರ್ಧರಿಸುವುದು
ನಮ್ಮ ವೈಯಕ್ತಿಕ ಮೌಲ್ಯಗಳೇ.. ಅಷ್ಟೇ ಅಲ್ಲದೆ, ನಮ್ಮನ್ನು ಮತ್ತು ನಮ್ಮ ಸ್ನೇಹಿತರನ್ನೂ ಇತರರು ಅಳೆಯುವುದು ವೈಯಕ್ತಿಕ ಮೌಲ್ಯಗಳ ಆಧಾರದಿಂದಲೇ. ನಮ್ಮ ನೆಲೆ ಮತ್ತು ಒಲವುಗಳನ್ನು ತಿಳಿಯಪಡಿಸುವುದು ಈ ಮೌಲ್ಯಗಳು. ಮೌಲ್ಯಗಳನ್ನು ನಾವು ಅಂತರ್ಗತ ಮಾಡಿಕೊಂಡಾಗ ಅದು ಶಕ್ತಿಯುತವಾಗುವುದು. ಸಂಸ್ಕಾರವು ನಾವು ನಂಬಿದ ಮೌಲ್ಯಗಳನ್ನು ದೃಢ ಪಡಿಸುತ್ತಾ ಹೋಗುತ್ತವೆ. ಗಣೇಶ ಕುಳಮರ್ವ