ಬಂಟ್ವಾಳ : ನಮ್ಮ ಸಾಮಾಜಿಕ, ಸಾಂಸ್ಕೃತಿಕ, ಪಾರಂಪರಿಕ ಕಟ್ಟುಕಟ್ಟಲೆಗಳನ್ನು ತಿಳಿಯಲು ಆಟಿದ ಕೂಟ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಹಿರಿಯರ ವಿಚಾರಧಾರೆಗಳನ್ನು ತಿಳಿಯಬೇಕು. ಶೈಕ್ಷಣಿಕವಾಗಿ ನಾವು ಮುಂದೆ ಬಂದಂತೆ ಹಿಂದಿನ ಸಂಪ್ರದಾಯಗಳನ್ನು ಮರೆಯಕೂಡದು ಎಂದು ಉದ್ಯಮಿ ಡಾ| ಪ್ರಶಾಂತ್ ಮಾರ್ಲ ಹೇಳಿದರು.
ಅವರು ಆ. 6ರಂದು ಬಂಟರ ಸಂಘ ಕಲ್ಲಡ್ಕ ವಲಯ ಆಶ್ರಯದಲ್ಲಿ ಕೆಲಿಂಜ ಹಿ.ಪ್ರಾ. ಶಾಲೆಯಲ್ಲಿ ನಡೆದ 4ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಸಹಾಯಕ ಯೋಜನಾಧಿಕಾರಿ ಚಂದ್ರಹಾಸ ಅಡಪ ನಡುವಳಚ್ಚಿಲು ಆಟಿದ ವಿಶೇಷತೆಗಳ ಮಾತನಾಡುತ್ತಾ ನಮ್ಮ ಪಾರಂಪರಿಕ ಕ್ರಮದಲ್ಲಿ ಆಟಿ ತಿಂಗಳಲ್ಲಿ ನೈಸರ್ಗಿಕ ತಿಂಡಿ ತಿನಿಸು ನೀಡುತ್ತಿದ್ದರು. ಅದು ಆರೋಗ್ಯಕ್ಕೆ ಒಳ್ಳೆಯದಾಗಿತ್ತು.ಅಂದಿನ ಆಟಗಳಾದ ಚೆನ್ನೆಮನೆ, ಕಬಡ್ಡಿ ಮೊದಲಾದವುಗಳು ದೈಹಿಕವಾಗಿ ಮನುಷ್ಯನನ್ನು ಪ್ರಕೃತಿ ಸಹಜವಾಗಿ ಬದುಕಲು ಪ್ರಚೋದನೆ ನೀಡುತ್ತಿದ್ದವು ಎಂದರು.
ಬಂಟರ ಸಂಘ ಕಲ್ಲಡ್ಕ ವಲಯ ಅಧ್ಯಕ್ಷ ಕೆ.ಪದ್ಮನಾಭ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘದ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಅವರು ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆRಯಾದ ಹಿನ್ನೆಲೆಯಲ್ಲಿ ಅವರನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಬಂಟರ ಸಂಘ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರತಿಭಾ ಎ. ರೈ, ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ ರೈ , ಮಹಾಬಲ ರೈ ಬೋಳಂತೂರು, ಪ್ರ.ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು ಉಪಸ್ಥಿತರಿದ್ದರು.
ಸಾಧಕರಾದ ಪೂವಪ್ಪ ಶೆಟ್ಟಿ ಕಲ್ಲಡ್ಕ, ಹರೀಶ್ ಪೆರ್ಗಡೆ, ತಿಮ್ಮಪ್ಪ ಶೆಟ್ಟಿ ವೀರಕಂಭ ಈ ಮೂವರಿಗೆ ವೇದಿಕೆಯಲ್ಲಿ ಸಮ್ಮಾನಿಸಲಾಯಿತು.
ರಾಮಣ್ಣ ಶೆಟ್ಟಿ ಸುಧೆಕಾರ್ ಸ್ವಾಗತಿಸಿ, ಪ್ರೇಮನಾಥ ಶೆಟ್ಟಿ ನರಿಕೊಂಬು ವಂದಿಸಿದರು. ನಡುಳಚ್ಚಿಲು ಜಗದೀಶ ರೈ ಕಾರ್ಯಕ್ರಮ ನಿರ್ವಹಿಸಿದರು.