ಮಂಜೇಶ್ವರ: ವಿಶ್ವ ಶಿಲ್ಪ ಸಂಘ ಕೊಯಮತ್ತೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಕನ್ನಡ ಸಂಸ್ಕೃತಿ ವೈಭವ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಯಕ್ಷ ಸಂಭ್ರಮ ಕಾರ್ಯಕ್ರಮ ಕೊಯಮತ್ತೂರಿನ ಅಶೋಕ ನಗರದಲ್ಲಿರುವ ಆರ್.ಟಿ.ಎಂ. ತಿರುಮಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಚಿತ್ರ ಕಲಾವಿದ ಮನೋಹರ ಆಚಾರ್ಯ ಬೆಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ “ದೇವಾಲಯ ಶಿಲ್ಪ ತೌಲುಕ ನೋಟ’ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮವನ್ನು ವಾಸ್ತು ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ ನೆರವೇರಿಸಿ ಕೊಟ್ಟರು. ಈ ವೇಳೆ ವೇದಿಕೆಯಲ್ಲಿ ಚಿತ್ರ ಕಲಾವಿದರಾದ ಮನೋಹರ ಆಚಾರ್ಯ ಬೆಂಗಳೂರು, ಕರಣ್ ಆಚಾರ್ಯ ಬೆಂಗಳೂರು, ಪ್ರವೀಣಾ ದಯಾನಂದ ಆಚಾರ್ಯ ಬೀರಿ ಕೋಟೆಕ್ಕಾರ್, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಬಾಲಕೃಷ್ಣ ಹೊಸಂಗಡಿ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವ ಶಿಲ್ಪ ಸಂಘದ ಅಧ್ಯಕ್ಷ ಯೋಗೇಶ್ ವಿ. ಆಚಾರ್ಯ ವಹಿಸಿದರು. ಸಂಘದ ಕಾರ್ಯದರ್ಶಿ ಕೆ. ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿದರು. ಬಬಿತಾ ಸತೀಶ್ ಆಚಾರ್ಯ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಕಲಾ ಸಂಘದ ಹರಿಶ್ಚಂದ್ರ ಆಚಾರ್ಯ ಕೊಯಮತ್ತೂರು ವಂದಿಸಿದರು.
ಬಳಿಕ ಪುರೋಹಿತ ಧರ್ಮೇಂದ್ರ ಆಚಾರ್ಯ ಮಧೂರು ಅವರ ಪೌರೋಹಿತ್ಯದಲ್ಲಿ ಶ್ರೀ ವಿಶ್ವಕರ್ಮ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಬಳಿಕ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಯಕ್ಷ ಸಂಭ್ರಮದ ಉದ್ಘಾಟನೆ ನಡೆಯಿತು. ಕಾರ್ಯಕ್ರಮವನ್ನು ವಾಸ್ತು ಶಿಲ್ಪ ಸತೀಶ್ ಆಚಾರ್ಯ ಚೆಂಡೆ ನುಡಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರಿನ ರಿಜಿಸ್ಟರ್ ಶಿವರುದ್ರಪ್ಪ ಎಸ್.ಎಚ್, ಪಾರ್ತಿ ಸುಬ್ಬ ಯಕ್ಷಗಾನ ಅಕಾಡೆಮಿ ಕೇರಳ ಸರಕಾರ ಕಾರ್ಯದರ್ಶಿ ಸಂಕಬೈಲು ಸತೀಶ್ ಅಡಪ, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಹೊಸಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಯಕ್ಷ ಬಳಗ ಹೊಸಂಗಡಿ ಇವರಿಂದ “ಅಂಗಧ ಸಂಧಾನ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.