Advertisement

ವೈಚಾರಿಕತೆ ಹೆಸರಲ್ಲಿ  ಸಂಸ್ಕೃತಿ ನಾಶ ಸಲ್ಲ: ರಂಭಾಪುರಿ ಶ್ರೀ

03:41 PM Sep 15, 2017 | |

ಶಿವಮೊಗ್ಗ: ಮೂಲ ನಂಬಿಕೆಯನ್ನು ಮೂಢನಂಬಿಕೆಗಳೆಂದು ನಿರ್ಲಕ್ಷಿಸಬಾರದು. ವೈಚಾರಿಕತೆ ಮತ್ತು ಆಧುನಿಕತೆಯ ಹೆಸರಿನಲ್ಲಿ ಉತ್ಕೃಷ್ಠ ಸಂಸ್ಕೃತಿ ನಾಶಗೊಳ್ಳಬಾರದು. ಮೌಲ್ಯಾಧಾರಿತ ಚಿಂತನಗಳು ಬಾಳಿಗೆ ಆಶಾದೀಪ ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ನೀತಿ ನಿಯಮ ಇಲ್ಲದೇ ಸಮಾಜ-ನಾಡು ಬೆಳೆಯದು. ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನ. ಪೂರ್ವಜರ ಮೌಲ್ಯಾಧಾರಿತ ಚಿಂತನಗಳು ಬಾಳಿಗೆ ಆಶಾದೀಪ ಎಂದು ಹೇಳಿದರು.

ಮಾತಿಗೆ ತೂಕ ಬರುವುದು ಸತ್ಯದಿಂದಲ್ಲದೇ ಹೊರತು ಅಸತ್ಯದಿಂದಲ್ಲ. ಧರ್ಮದಿಂದ ಮನುಷ್ಯ ವಿಮುಖನಾದರೆ ಜೀವನ ಅಶಾಂತಿಯ ಕಡಲಾಗುತ್ತದೆ. ಸಿದ್ಧಾಂತ ರಹಿತ ಜೀವನ ದಿಕ್ಸೂಚಿ ಇಲ್ಲದ ನೌಕೆಯಂತೆ. ನಮ್ಮ ಬಾಳಬದುಕು
ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು ಎಂದರು.

ಸುಳ್ಳಿಗೆ ಹಲವು ದಾರಿ. ಆದರೆ ಸತ್ಯಕ್ಕೆ, ಧರ್ಮಕ್ಕೆ ಒಂದೇ ದಾರಿ. ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವ ಬದುಕಿನ ಉತ್ಕರ್ಷತೆಗೆ ತತ್ವತ್ರಯಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಮಾನವ ಜೀವನ ಮೌಲ್ಯಗಳು ಅಂತ್ಯಗೊಂಡರೆ ಅದರೊಂದಿಗೆ ಮಾನವೀಯತೆ ಅಂತ್ಯವಾಗುತ್ತದೆಂದು ಎಚ್ಚರಿಸಿದರು.

ಮಳಲಿಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನಸ್ಸು, ಬುದ್ಧಿ ಮತ್ತು ಸದ್ವಿಚಾರ ಬೆಳೆಸಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ವ್ಯಕ್ತಿ ಹಿತಕ್ಕಿಂತ
ಸಾಮಾಜಿಕ ಹಿತ ಮುಖ್ಯ. ಸತ್ಯ ಶಾಂತಿ ಎಲ್ಲರ ಬಾಳಿಗೆ ಅಗತ್ಯವೆಂದರು.

Advertisement

ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ಭಾರತ ಧರ್ಮಭೂಮಿ. ಸರ್ವ ಜನಾಂಗದ ಶಾಂತಿಯ ತೋಟ. ಪ್ರತಿಯೊಬ್ಬರಲ್ಲಿ ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಬೆಳೆಸಬೇಕು. ಈ ದೆಸೆಯಲ್ಲಿ ರಂಭಾಪುರಿ ಪೀಠ
ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದರು.

ಮಕ್ಕಳತಜ್ಞ ಡಾ| ಧನಂಜಯ ಸರ್ಜಿ, ಮಹೇಶ್ವರಪ್ಪ, ಚಂದನ ಪಟೇಲ್‌, ನಿಂಬೆಗೊಂದಿ ಷಣ್ಮುಖಪ್ಪ, ನಂಜುಂಡಸ್ವಾಮಿ, ಡಿ.ವಿ. ಬಸವಲಿಂಗಪ್ಪ ಇದ್ದರು. ವಿಶಾಲಾಕ್ಷಿ ಮಂಜುನಾಥ ಅವರಿಂದ ಸಂಗೀತ ಜರುಗಿತು. ಜ್ಯೋತಿಪ್ರಕಾಶ ಸ್ವಾಗತಿಸಿದರು. ಎಸ್‌. ಪಿ. ದಿನೇಶ ನಿರೂಪಿಸಿದರು. ಎಚ್‌. ಜಿ. ಚಂದ್ರಶೇಖರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next