ಮುಂಬಯಿ, ಆ. 3: ನಮ್ಮ ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹೊಟ್ಟೆಪಾಡಿಗಾಗಿ ಉದ್ಯೋಗವನ್ನು ಅರಸುತ್ತಾ ಮುಂಬಯಿಗೆ ವಲಸೆ ಬಂದಿರುವ ತುಳುವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮರೆಯದೆ ಇಲ್ಲಿಯೂ ಅದರ ಬೆಳವಣಿಗಾಗಿ ಶ್ರಮಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಆದರೆ ನಮ್ಮ ಕರ್ತವ್ಯ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ನಮ್ಮ ಮಕ್ಕಳಿಗೂ ತುಳುಭಾಷೆ ಹಾಗೂ ಸಂಸ್ಕೃತಿಯ ಅರಿವು ಮೂಡಿಸುವುದು ಹಿರಿಯರ ಜವಾಬ್ದಾರಿಯಾಗಿದೆ ಎಂದು ಮೊಗವೀರ ವ್ಯವಸ್ಥಾಪಕ ಮಂಡಳಿ ನವಿಮುಂಬಯಿ ಶಾಖೆಯ ಗೌರವಾಧ್ಯಕ್ಷ ಕೆ. ಬಿ. ಸಾಲ್ಯಾನ್ ನುಡಿದರು.
ಮೊಗವೀರ ವ್ಯವಸ್ಥಾಪಕ ಮಂಡಳಿ ನವಿಮುಂಬಯಿ ಶಾಖೆಯ ವತಿಯಿಂದ ಜು. 28ರಂದು ಪನ್ವೆಲ್ ಕರ್ನಾಟಕ ಸಂಘದ ಸಭಾ ಗೃಹದಲ್ಲಿ ಆಯೋಜಿಸಲಾಗಿದ್ದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮೊಗವೀರ ವ್ಯವಸ್ಥಾಪಕ ಮಂಡಳಿ ನವಿಮುಂಬಯಿ ಶಾಖೆಯ ವತಿಯಿಂದ ಪ್ರತಿ ವರ್ಷವೂ ನಡೆಸಲಾಗುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರಲ್ಲದೆ, ನವಿಮುಂಬಯಿಯಲ್ಲಿ ನೆಲೆಸಿರುವ ಎಲ್ಲ ಮೊಗವೀರ ಬಂಧುಗಳೂ ಸದಸ್ಯರಾಗಿ ಈ ಶಾಖೆಯನ್ನು ಅದರ ಜತೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಲೇಖಕ ಸೋಮನಾಥ ಎಸ್. ಕರ್ಕೇರ ಅವರು ಆಟಿಡೊಂಜಿ ತಿಂಗಳ ವಿಶೇಷತೆಯ ಬಗ್ಗೆ ತಿಳಿಸಿ ಕೆಲವು ಸ್ವರಚಿತ ತುಳು ಹಾಸ್ಯ ಕವನಗಳ ಮೂಲಕ ಸಭಿಕರ ಮನ ರಂಜಿಸಿದರು. ವೇದಿಕೆಯಲ್ಲಿದ್ದ ಇನ್ನೋರ್ವ ಸದಸ್ಯ ಸಿದ್ಧಾರ್ಥ್ ಕೋಟ್ಯಾನ್ ಅವರು ತುಳು ಗೀತೆಯನ್ನು ಹಾಡಿ ಎಲ್ಲರ ಮೆಚ್ಚುಗೆ ಪಡೆದರು.
ಶಾಖೆಯ ಕಾರ್ಯಾಧ್ಯಕ್ಷರಾದ ಪುರುಷೋತ್ತಮ ಎಲ್ ಪುತ್ರನ್ ಅವರು ಮಾತನಾಡಿ, ಆಗಾಗ ನಡೆಸಲಾಗುತ್ತಿರುವ ಕಾರ್ಯಕ್ರಮಗಳಿಗೆ ಸದಸ್ಯರು ಹಾಗೂ ಪರಿಸರದ ತುಳು-ಕನ್ನಡಿಗರಿಂದ ಸಿಗುತ್ತಿರುವ ಪ್ರೋತ್ಸಾಹದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭ ದಲ್ಲಿ ಶಾಖೆಯ ಉಪಾಧ್ಯಕ್ಷ ಲೋಕೇಶ್ ಎಂ. ಕರ್ಕೇರ ಅವರು ಮಾತನಾಡಿದರು. ಶಾಖೆಯ ಕಾರ್ಯದರ್ಶಿ ಪುಷ್ಪರಾಜ್ ಮೆಂಡನ್ ಮತ್ತು ಕೋಶಾಧಿಕಾರಿ ಸಾಧನಾ ಮೆಂಡನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೋಹನ್ ಸುವರ್ಣರ ಮೇಲ್ವಿಚಾರಣೆಯಲ್ಲಿ ಸದಸ್ಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿ ಸಲಾಗಿತ್ತು. ಇದರಲ್ಲಿ ತಿಲಕ್ ಮೆಂಡನ್, ಉಮೇಶ್ ಕರ್ಕೇರ, ಸೂರಜ್ ಕರ್ಕೇರ, ಬಬಿತಾ ಕಾಂಚನ್, ಹೇಮಾ ಕೋಟ್ಯಾನ್, ಸಾನ್ವಿ, ಸೋಹನ್, ಪಾರ್ಥ್ ಹಾಗೂ ಸಮೀಕ್ಷಾ ಇವರು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶೇಜಲ್, ಸೋಹನ್, ಸಮೀಕ್ಷಾ, ವಿಹಾಗ್ ಮೆಂಡನ್, ತನ್ವಿ ಇವರಿಂದ ನೃತ್ಯ ವೈವಿಧ್ಯ ನಡೆಯಿತು. ಮಹಿಳಾ ವಿಭಾಗದ ಸದಸ್ಯೆಯರಿಂದ ತಯಾರಿಸಲಾದ ತುಳುನಾಡಿನ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ದಿವ್ಯಾ ಮೆಂಡನ್ ವಂದಿಸಿದರು. ಶಾಖೆಯ ಜತೆ ಕಾರ್ಯದರ್ಶಿ ತೇಜಸ್ವಿ ಮಲ್ಪೆ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.