ಶಿರಸಿ: ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಔತಣ ನೀಡಲು ಸರಕಾರೇತರ ದೆಹಲಿ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಕೆಲಸ ಮಾಡುತ್ತಿದ್ದು, ಇದೀಗ ದಕ್ಷಿಣ ಭಾರತದಲ್ಲೇ ಪ್ರಥಮವಾಗಿ ಸರಕಾರಿ ಶಾಲಾ ಮಕ್ಕಳಿಗೂ ಈ ಸೌಲಭ್ಯ ನೀಡಲು ಮುಂದಾಗಿದೆ. ಅದರ ಮೊದಲ ಆರಂಭ ಉತ್ತರ ಕನ್ನಡದ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಚಾಲನೆ ನೀಡಲಿದೆ.
ಈವರೆಗೆ ಭಾರತದ ಹದಿನೈದು ಪಾರಂಪರಿಕ ಕಲೆಗಳ ಸಂರಕ್ಷಣೆಗೆ ಶಾಲಾ ಮಕ್ಕಳಿಗೂ ಕಲಿಸುವ,ಕಲಿಕೆಗೆ ಉತ್ತೇಜಿಸುವ ಪ್ರಯತ್ನದ ಭಾಗವಾಗಿ ರೂಟ್ ಟು ರೂಟ್ ವಿರ್ಸಾ ಫೌಂಡೇಶನ್ ಡಿಜಿಟಲ್ ಕಲಿಕೆಗೆ ಉತ್ತೇಜಿಸಲು ಮುಂದಾಗಿದೆ. ಕೇಂದ್ರೀಯ ಪಠ್ಯಕ್ರಮ, ನವೋದಯದ ಶಾಲೆಗಳಿಗೆ ಆದ್ಯತೆ ನೀಡಿದ್ದ ಈ ಸಂಸ್ಥೆ ಪ್ರಥಮ ಬಾರಿಗೆ ೫೧ ಸರಕಾರಿ ಹಿರಿಯ ಹಾಗೂ ಪ್ರೌಢ ಶಾಲೆಗಳಿಗೆ ಆದ್ಯತೆ ನೀಡಿದೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಫೌಂಡೇಶನ್ ಸಂಸ್ಥಾಪಕ ರಾಕೇಶ ಗುಪ್ತಾ, ರವಿ ವಚನಿ, ಉಪಾಧ್ಯಕ್ಷ ಸುರೇಶ ಕಾರುಣಕ, ಶಿರಸಿ ಶೈಕ್ಷಣಿಕ ಜಿಲ್ಲೆಯ ೫೧ ಶಾಲೆಗಳು ಇದರ ಲಾಭ ಪಡೆದುಕೊಳ್ಳಲಿದೆ. ಮಕ್ಕಳಿಗೆ ಭಾರತದ ಪಾರಂಪರಿಕ ಕಲೆ ತಿಳಿಸಬೇಕು, ಅವರಲ್ಲೂ ಅಂಥ ಅಭಿರುಚಿ ಮೂಡಿಸಬೇಕು ಎಂಬ ಕಾರಣಕ್ಕೆ ವಿರ್ಸಾ ಫೌಂಡೇಶನ್ ರೂಟ್ ಟು ರೂಟ್ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಶಿರಸಿಯ ೧೦, ಸಿದ್ದಾಪುರದ ೯, ಮುಂಡಗೋಡನ ೮, ಹಳಿಯಾಳದ ೯ ಜೋಯಿಡಾದ ೬, ಯಲ್ಲಾಪುರದ ೯ ಶಾಲೆಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲಿವೆ. ಇಂಟರ್‌ನೆಟ್ ನೆಟವರ್ಕ ಬರುವ ಹಾಗೂ ಅಧಿಕ ಮಕ್ಕಳಿರುವ ಶಾಲೆಗೆ ಈ ಸೌಲಭ್ಯ ಪ್ರಥಮ ಹಂತದಲ್ಲಿ ಸಿಗಲಿದೆ. ಕರ್ನಾಟಕೀಯ ಸಂಗೀತ, ಭರತನಾಟ್ಯ ಸೇರಿದಂತೆ ೧೫ ಕಲೆಗಳ ಪರಿಚಯ, ಪದ್ಮಿಶ್ರೀ, ಪದ್ಮಭೂಷಣ ಪುರಸ್ಕೃತ ಕಲಾವಿದರಿಂದ ಕಲಿಸುವಿಕೆ, ನೇರ ಸಂವಾದಗಳನ್ನೂ ನಡೆಸಲು ಇಲ್ಲಿ ಅವಕಾಶ ಇದೆ. ಬೇಡಿಕೆಗೆ ಅನುಗುಣವಾಗಿ ಮಕ್ಕಳಿಗೆ ತಬಲಾ, ಹಾರ್ಮೋನಿಯಂ ಸೇರಿದಂತೆ ಇತರ ಸಂಗೀತ ಉಪಕರಣ ಕೂಡ ಕೊಡುತ್ತೇವೆ ಎಂದು ಹೇಳಿದರು.
ಪ್ರತಿ ದಿನ ಅರ್ಧ ಗಂಟೆ ಕಾರ್ಯಕ್ರಮ ನಡೆಯಲಿದ್ದು, ದೇಶಾದ್ಯಂತ ೨೦ ಸಾವಿರ ಶಾಲೆಗಳ ಸುಮಾರು ೨ ಕೋಟಿ ವಿದ್ಯಾರ್ಥಿಗಳು ಇದರ ಫಲಾನುಭವಿಯಾಗಿದ್ದಾರೆ. ಡಿಕ್ಷನ್ ಟೆಕ್ನಾಲಜೀಸ್‌ನ ಸುನೀಲ ವಚನಿ ಡಿಡಿಪಿಐ ಕಚೇರಿಗೂ ಸೇರಿ ೫೨ ಟಿವಿ, ವೆಬ್ ಕೆಮರಾ ನೀಡುತ್ತಿದ್ದಾರೆ. ವಿರ್ಸಾ ಫೌಂಡೇಶನ್ ಅದಕ್ಕೆ ಸಾಪ್ಟವೇರ್ ಹಾಕಿಕೊಡಲಿದೆ. ತಾಂತ್ರಿಕ ತಂಡವು ವಾರದೊಳಗೆ ಎಲ್ಲ ಶಾಲೆಗಳನ್ನೂ ಸಜ್ಜುಗೊಳಿಸಲಿದೆ. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ತರಗತಿ ವೀಕ್ಷಣೆಗೆ ಅವಕಾಶ ಸಿಗಲಿದೆ ಎಂದೂ ತಿಳಿಸಿದ ಅವರು, ಕರ್ನಾಟಕದ ಯಕ್ಷಗಾನ ಕಲಿಕೆ, ಉತ್ತೇಜನ ಪ್ರಸಾರಕ್ಕೂ ಆದ್ಯತೆ ನೀಡುತ್ತೇವೆ ಎಂದೂ ಹೇಳಿದರು.
ಶಿರಸಿ ಲಯನ್ಸ ಭವನದಲ್ಲಿ ಆ.೨೫ರಂದು ಬೆಳಿಗ್ಗೆ ೧೧ಕ್ಕೆ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಜಿಪಂ ಸಿಇಓ ಪ್ರಿಯಾಂಕಾ ಸೇರಿದಂತೆ ಇತರರು ಪಾಲ್ಗೊಳ್ಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಗುರುಪ್ರೀತ ಕೌರ, ಪ್ರಭಾರಿ ಡಿಡಿಪಿಐ ಸಿ.ಎಸ್.ನಾಯ್ಕ, ಸಿದ್ದಪ್ಪ ಬಿರಾದಾರ ಇದ್ದರು.