Advertisement

ಸಾಂಸ್ಕೃತಿಕ ಬಹುತ್ವದ ಸೊಬಗಿನ ಅನಾವರಣ

09:59 AM Dec 02, 2017 | |

ವಿದ್ಯಾಗಿರಿ (ಆಳ್ವಾಸ್‌): ವಿದ್ಯಾಗಿರಿಯಲ್ಲಿ ಶುಕ್ರವಾರ ಪ್ರಾರಂಭವಾದ ಆಳ್ವಾಸ್‌ ನುಡಿಸಿರಿ -2017 ಕನ್ನಡ ನಾಡು, ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ಸಾಂಸ್ಕೃತಿಕ ಮೆರವಣಿಗೆ ಕಲಾ ವೈಭವದ ಬೃಹತ್‌ ಪ್ರಸ್ತುತಿಯಾಗಿ, ನುಡಿಸಿರಿಯ ಭವ್ಯತೆಗೆ ಮುನ್ನುಡಿಯಾಯಿತು ಹಾಗೂ ಸಾಂಸ್ಕೃತಿಕ ಬಹುತ್ವದ ಸೊಬಗಿಗೆ ಸಾಕ್ಷಿಯಾಯಿತು. ಬೆಳಗ್ಗೆ 8.30ಕ್ಕೆ ಮೂಡಬಿದಿರೆಯ ಬಶೀರ್‌ ಅವರು ಸಿಡಿಸಿದ ಗರ್ನಲ್‌, ಕದನಿಗಳ ಸದ್ದಿಗೆ ವಿದ್ಯಾಗಿರಿ ಸಂಭ್ರಮಿಸಿತು. ಮೂಲ್ಕಿ ಚರ್ಚ್‌ನ ರೆ|ಫಾ| ಎಫ್‌.ಎಕ್ಸ್‌. ಗೋಮ್ಸ್‌ ಮೆರವಣಿಗೆಗೆ ಚಾಲನೆ ನೀಡಿದರು.

Advertisement

ಕತ್ತು ಕೊಂಕಿಸುತ್ತ, ಬೆಂಕಿ ಉಗುಳುತ್ತ ಬಂದ ಪೂತನಿ (ರಂಜಿತ್‌ ಕಾರ್ಕಳ)ಯನ್ನು ಹಿಂಬಾಲಿಸಿಕೊಂಡು ಮಂಡ್ಯದ ನಂದಿ ಧ್ವಜ, ಕರಾವಳಿಯ ಪಕ್ಕಿ ನಿಶಾನೆಯವರು ಸಾಗಿದರು. ಪುಂಜಾಲಕಟ್ಟೆಯ ಶ್ರೀನಿವಾಸ್‌ ಮತ್ತು ಬಳಗದವರ ಶಂಖ ವಾದ್ಯ, ಹರೀಶ್‌ ಮೂಡಬಿದಿರೆ ತಂಡದ ಕೊಂಬು, ಚೆಂಡೆ, ಶೃಂಗಾರಿ ಮೇಳ, ಅಶ್ವತ್ಥಪುರದ ನಾದಸ್ವರ, ಆಳ್ವಾಸ್‌ ವಿದ್ಯಾರ್ಥಿಗಳ ತಟ್ಟೀರಾಯ, ಕುದುರೆ ಸವಾರರು, ಕಲ್ಲಡ್ಕ ರಮೇಶ್‌ ಅವರ ಶಿಲ್ಪಾ ಬಳಗದ ದೊಡ್ಡ ವೇಷಗಳ ಗೊಂಬೆಗಳು, ನೋಡುಗರ ಅಚ್ಚರಿಗೆ ಕಾರಣವಾದ ಗೊರಿಲ್ಲಾ, ದೀಪಕ್‌ ಶೆಟ್ಟಿ ಅವರ ಕಿಂಗ್‌ ಕಾಂಗ್‌, ಆಳ್ವಾಸ್‌ನ ರಂಗಿನ ಕೊಡೆಗಳು, ಯಕ್ಷಗಾನ ವೇಷಗಳು, ಗುತ್ತಿಗಾರು ಕರುಣಾಕರ ತಂಡದ ಆಟಿ ಕಳೆಂಜ ಗಮನ ಸೆಳೆದವು. ಕೊರಗರ ಗಜಾ ಮೇಳ, ಚಿಂಪಾಂಜಿ, ಚಿಲಿಪಿಲಿ ಬಂಟ್ವಾಳ ತಂಡದ ಯಕ್ಷಗಾನದ ಗೊಂಬೆಗಳು, ಬ್ಯಾಂಡ್‌ ಸೆಟ್‌, ಕೀಲು ಕುದುರೆ, ರಾಜೇಶ್‌ ಆಳ್ವರ ಪುರುಲಿ ನಲಿಕೆ ಮೆರವಣಿಗೆ ಸೊಬಗು ಹೆಚ್ಚಿಸಿದವು.

ಬೆದ್ರ ಫ್ರೆಂಡ್ಸ್‌ನ ಹುಲಿ ವೇಷಗಳು ಕುಣಿಯುತ್ತ ಪಲ್ಟಿ ಹೊಡೆಯುವಲ್ಲಿ ಪುಟ್ಟ ಸ್ಪರ್ಧೆಯನ್ನೇ ತೋರಿದವು. ಕೊಂಚಾಡಿ, ಕಾರ್ಕಳದ ಚೆಂಡೆ, ಕಾರ್ಕಳದ ಭಾರೀ ಗಾತ್ರದ ಕೋಳಿಗಳು, ಧಾವಿಸಿ ಬಂದ ಉಡುಪಿಯ ಗೂಳಿ, ಬೆಳ್ತಂಗಡಿಯ ರಾಜೀವ್‌ ತಂಡದವರ ಸೃಷ್ಟಿ ಗೊಂಬೆಗಳು, ಹುಸೈನ್‌ ಕಾಟಿಪಳ್ಳ ಅವರ ದಪ್ಪು, ಮಂದಾರ್ತಿಯ ಗುಮ್ಟೆ, ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಡೊಳ್ಳು, ಶ್ರೀಲಂಕಾದ ಮುಖವಾಡಗಳು, ತ್ರಿವರ್ಣ ಧ್ವಜದ ಸಂಯೋಜನೆಯಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳು ಗಮನ ಸೆಳೆದರೆ, ಭಾರೀ ಗಾತ್ರದ ತರಕಾರಿಗಳನ್ನು (ಮಾದರಿ) ಹೊತ್ತು ತಂದ ರೈತರು, ಲಂಗ-ದಾವಣಿ ತೊಟ್ಟು ಕನ್ನಡ ಧ್ವಜಗಳನ್ನು ಬೀಸುತ್ತ ಬಂದ ಆಳ್ವಾಸ್‌ನ 100 ವಿದ್ಯಾರ್ಥಿನಿಯರು ಮನಸೂರೆಗೊಂಡರು. 

ಸಿರಿಗೆರೆಯ ಮಕ್ಕಳ ತಂಡ
ಸಿರಿಗೆರೆಯ ಮಕ್ಕಳ ತಂಡದವರು ಕೀಲು ಕುದುರೆ, ಡೊಳ್ಳು, ಜಾನಪದ ವೇಷಗಳು, ಪ್ರಾಣಿಗಳು, ಪಟದ ಕುಣಿತ, ವೀರಗಾಸೆ, ಮರಗಾಲು ಕುಣಿತ, ನಂದಿ ಧ್ವಜ, ತಾಳ ಗಮನ ಸೆಳೆದರು.

ಹೊರನಾಡುಗಳಿಂದ
ಕೇರಳದ ಪಂಚವಾದ್ಯ, ಅರ್ಜುನ ನೃತ್ಯ, ಅರ್ಧನಾರೀಶ್ವರ, ನವಿಲುಗಳು, ದೇವರ ವೇಷಧಾರಿಗಳು ಆಕರ್ಷಣೀಯವಾಗಿದ್ದವು. ರಾಜಸ್ಥಾನದ ಜಾನಪದ ಕಲಾವಿದರು, ಭೂತಾನ್‌ನ ತಂಡದವರು ತಮ್ಮ ಉಡುಪು ಪ್ರದರ್ಶಿಸುತ್ತ, ವಾದ್ಯಗಳನ್ನು ನುಡಿಸುತ್ತ ಸಾಗಿ ಬಂದರು. ಪುಸ್ತಕಗಳನ್ನಿರಿಸಿದ ಪಲ್ಲಕಿಯನ್ನು ಕನ್ನಡದ ಕಟ್ಟಾಳುಗಳು ಹೊತ್ತು ತಂದರು. ಆಳ್ವಾಸ್‌ ಪ್ರಕಾಶನದ ‘ಕನ್ನಡ ವೈಜಯಂತಿ’ ಮತ್ತು ‘ಕರಾವಳಿ ಕರ್ನಾಟಕ ಹೊತ್ತಗೆ’ಗಳನ್ನಿರಿಸಿದ ರಥವನ್ನು ಕನ್ನಡದ ಸೇವಕರು ಎಳೆದುತಂದರು. ಕೇಶವ ಶೇರಿಗಾರ್‌ ತಂಡದ ಸ್ಯಾಕ್ಸೋಫೋನ್‌ ವಾದನ, ಕಲಶ ಕನ್ನಿಕೆಯರು, ಬೆಳಗಾವಿ ಪೇಟ ಧರಿಸಿದ ಗಣ್ಯರೊಂದಿಗೆ ಸಮ್ಮೇಳನದ ಸರ್ವಾಧ್ಯಕ್ಷ ಡಾ| ನಾಗತಿಹಳ್ಳಿ ಚಂದ್ರಶೇಖರ್‌, ಉದ್ಘಾಟಕ ಡಾ| ಸಿ.ಎನ್‌. ರಾಮಚಂದ್ರನ್‌, ಕ.ಸಾ.ಪ. ಅಧ್ಯಕ್ಷ ಡಾ| ಮನು ಬಳಿಗಾರ್‌, ಸಂಸದ ನಳಿನ್‌ಕುಮಾರ್‌, ಶಾಸಕ ಅಭಯಚಂದ್ರ, ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಎಫ್‌.ಎಕ್ಸ್‌. ಗೋಮ್ಸ್‌, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಐಕಳ ಹರೀಶ್‌ ಶೆಟ್ಟಿ, ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ ಕಲ್ಕೂರ, ಸ್ವಾಗತ ಸಮಿತಿ ಪದಾಧಿಕಾರಿಗಳು, ವಿಶೇಷವಾಗಿ 90ರಷ್ಟಿರುವ ಆಳ್ವಾಸ್‌ ನುಡಿಸಿರಿ ಘಟಕಗಳ ಪ್ರಮುಖರು ಹೆಜ್ಜೆ ಹಾಕಿದರು. ಶಾಸಕ ಕೆ. ಅಭಯಚಂದ್ರ ಅವರು ಧ್ವಜಾರೋಹಣ ಮಾಡಿದರು.

Advertisement

ಹೊರ ಜಿಲ್ಲೆಗಳ ಕಲಾ ತಂಡ
ಚಾಮರಾಜನಗರದ ಗೊರವರ ಕುಣಿತ, ಕೊಡಗಿನ ಸಾಂಪ್ರದಾಯಿಕ ಉಡುಪು ತೊಟ್ಟ ಪುರುಷರು – ಮಹಿಳೆಯರು, ಉಮ್ಮತಾಟ್‌, ಮಂಡ್ಯ ದೇವರಾಜ್‌ ತಂಡದ ಪೂಜಾ ಕುಣಿತ, ವೀರಭದ್ರನ ಕುಣಿತ, ಹಾವೇರಿಯ ಬೆಂಡರ ಕುಣಿತ, ಚಿತ್ರದುರ್ಗದ ಮರಗಾಲು, ಬ್ಯಾಂಡ್‌ ಸೆಟ್‌, ವಿಜಯಪುರದ ಲಂಬಾಣಿ ತಂಡದವರು ನಿಧಾನ ನೃತ್ಯದೊಂದಿಗೆ ಹೆಜ್ಜೆಹಾಕಿದರು. ಬಳ್ಳಾರಿಯ ಸುಡುಗಾಡು ಸಿದ್ಧರು, ಅಶ್ವರಾಮ ತಂಡದ ಹಗಲು ವೇಷಗಳು, ಮೈಸೂರಿನ ನಗಾರಿ, ಮಹಿಳೆಯರ ನಗಾರಿ, ಹಾವೇರಿಯ ಪುರವಂತಿಕೆ, ಧಾರವಾಡದ ಜಗ್ಗಲಿಗೆ ಮೇಳ, ಶಿವಮೊಗ್ಗದ ಬೂದಿಯಪ್ಪ ತಂಡದವರ ಡೊಳ್ಳು ಕುಣಿತ ಜೋರಾಗಿ ನಡೆದಿತ್ತು.

ಧನಂಜಯ ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next