Advertisement

ಸಾಂಸ್ಕೃತಿಕ ಹರಿಕಾರ ಶ್ರೀವಿಶ್ವೇಶತೀರ್ಥರು

10:17 AM Jan 10, 2020 | mahesh |

ಉಡುಪಿ ಕರ್ನಾಟಕದ ಸಾಂಸ್ಕೃತಿಕ ನಗರವೆಂದೇ ಪ್ರಸಿದ್ಧಿ. ಹಾಗಾಗುವಲ್ಲಿ ಉಡುಪಿ ಶ್ರೀಕೃಷ್ಣ ಮಠ ಮತ್ತು ಅಷ್ಟ ಮಠಗಳ ಕೊಡುಗೆ ಗಮನಾರ್ಹ. ಯತಿಶ್ರೇಷ್ಠರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ಸಾಂಸ್ಕೃತಿಕ ಕಲಾಕಾರ್ಯ ಕ್ರಮಗಳ ಹರಿಕಾರ. ಕಲೆ, ಸಂಸ್ಕೃತಿ ಕುರಿತ ಅವರ ಪ್ರೀತಿ ಅನನ್ಯವಾಗಿತ್ತು.

Advertisement

ಪರ್ಯಾಯದ ಸಾಂಸ್ಕೃತಿಕ ವೈಭವ
ಉಡುಪಿಯ ವೈಶಿಷ್ಟ್ಯಗಳಲ್ಲಿ ಪರ್ಯಾಯ ಮಹೋ ತ್ಸವವು ಒಂದು. 1968ರಲ್ಲಿ ನಡೆದ ಅವರ ಎರಡನೆಯ ಪರ್ಯಾಯದ ಸಂದರ್ಭ ಪರ್ಯಾಯ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ವಿಶಿಷ್ಟವಾಗಿ ಸಂಯೋಜಿಸಿ ಸ್ವಾಮೀಜಿಯವರ ಸಂಕಲ್ಪದಂತೆ ಇಡೀ ಪರ್ಯಾಯ ಉತ್ಸವವನ್ನು ಮೈಸೂರಿನ ದಸರಾ ಪರಿಕಲ್ಪನೆಯಲ್ಲಿ ಸಂಘಟಿಸಿದವರು ಡಾ| ವಿಜಯನಾಥ ಶೆಣೈ. ಮುಂದೆ ಇದು ಪರಂಪರೆಯಾಗಿ ಪರ್ಯಾಯ ಹೊಸ ಮೆರಗಿನೊಂದಿಗೆ ಸಾಗಿ ಬರುವಂತಾಗಿದೆ. ಅನಂತರ 1984 ಮತ್ತು 2000ದಲ್ಲಿ ಸಂಪನ್ನಗೊಂಡ ಅವರ ಮೂರು ಮತ್ತು ನಾಲ್ಕನೇ ಪರ್ಯಾಯದುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಕಷ್ಟು ನಡೆದವು. ನಾಲ್ಕನೇ ಪರ್ಯಾಯವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ರಾಜಾಂಗಣವನ್ನು ನೂತನವಾಗಿ ನಿರ್ಮಿ ಸಿದರು. 2016ರಲ್ಲಿ ನಡೆದ ಐತಿಹಾಸಿಕ ಪರ್ಯಾ ಯವಂತೂ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳಿಂದ ವಿಜೃಂಭಿಸಿತು. ಈ ಪರ್ಯಾಯ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಕ್ಕಾಗಿಯೇ ಮೂರು ಪ್ರತ್ಯೇಕ ವೇದಿಕೆಗಳಲ್ಲಿ 15 ದಿವಸ ಕಲಾಕಾರ್ಯಕ್ರಮ ಸಂಘಟಿಸಲಾಯಿತು.

ಕಲಾವಿದರಿಗೆ ಪ್ರಶಸ್ತಿ
ಪರ್ಯಾಯ ದರ್ಬಾರಿನಲ್ಲಿ ಶ್ರೇಷ್ಠ ಕಲಾವಿದರನ್ನು ಗುರುತಿಸಿ ಆಸ್ಥಾನ ಕಲಾವಿದ ಪ್ರಶಸ್ತಿಯೊಂದಿಗೆ ಗೌರವಿಸು ವುದನ್ನು ಉಪಕ್ರಮಿಸಿದವರು ಶ್ರೀ ವಿಶ್ವೇಶತೀರ್ಥ ಶ್ರೀಪಾದರು. ಪರ್ಯಯ ದುದ್ದಕ್ಕೂ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳಿಗೆ ಆಶ್ರಯ ನೀಡುವುದು ಈಗ ಪದ್ಧತಿ ಯಾಗಿದೆ. ಶ್ರೀಕೃಷ್ಣ ಮಠದ ರಾಜಾಂಗಣ ಸಾಂಸ್ಕೃತಿಕ ನಿತ್ಯೋತ್ಸವವಾಗಿ ರೂಪುಗೊಂಡಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸ್ವಾಮೀಜಿಯವರು ಶ್ರೀರಾಮ ವಿಠಲ ಪ್ರಶಸ್ತಿ ಆರಂಭಿಸಿ ಪ್ರತಿ ವರ್ಷ 15 ರಿಂದ 20 ಕಲಾವಿದರಿಗೆ ದೊಡ್ಡ ಮೊತ್ತದ ನಗದು ಪುರಸ್ಕಾರ ದೊಂದಿಗೆ ಅನುಗ್ರಹಿಸುತ್ತಾ ಬಂದಿದ್ದಾರೆ. ಅವರ ಗೌರ ವಾರ್ಥ ಯಕ್ಷಗಾನ ಕಲಾರಂಗ ಸ್ಥಾಪಿಸಿ ಯಕ್ಷಗಾನ ಸಂಘ ಟನೆಗೆ ನೀಡುವ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯ ನಗದು ಪುರಸ್ಕಾರದ ಅರ್ಧದಷ್ಟನ್ನು ಮೊತ್ತ ವನ್ನು ಅವರೇ ಭರಿಸುತ್ತಾ ಬಂದಿದ್ದರು. ತಮ್ಮ ಟ್ರಸ್ಟ್‌ ಮೂಲಕ ಅನಾರೋಗ್ಯದಲ್ಲಿರುವ ಕಲಾವಿದರಿಗೆ ಆರ್ಥಿಕ ನೆರವು ನೀಡಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗ ಕಲಾವಿದರ ಕ್ಷೇಮ ಚಿಂತನೆಗೆ ಮಾಡುವ ಕೆಲಸವನ್ನು ವಿಶೇಷವಾಗಿ ಮೆಚ್ಚಿಕೊಂಡು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

ಕಲಾಸಂಘಟನೆಗಳಿಗೆ ಆಶ್ರಯ
ಉಡುಪಿಯ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆಗಳಾದ ಯಕ್ಷಗಾನ ಕಲಾರಂಗ ಮತ್ತು ರಥಬೀದಿ ಗೆಳೆಯರು ಸಂಸ್ಥೆಗೆ ಶ್ರೀಮಠದ ಕಟ್ಟಡದಲ್ಲಿ ಆಶ್ರಯ ನೀಡಿದ್ದಾರೆ. ಮಠದ ಶ್ರೀರಾಮ ವಿಠಲ ಸಭಾಭವನವನ್ನು ಸಂಗೀತ ನೃತ್ಯ ತರಬೇತಿ ಮತ್ತು ಕಲಾಪ್ರದರ್ಶನಗಳಿಗೆ ಉಚಿತವಾಗಿ ನೀಡುತ್ತಿದ್ದರು.

ಕಲೆ – ಕಲಾವಿದರ ಮೇಲೆ ಪ್ರೀತಿ
ಸ್ವಾಮೀಜಿಯವರು ಕಲಾಕಾರ್ಯಕ್ರಮವನ್ನು ವೀಕ್ಷಿಸಿ ಕಲಾವಿದರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸುತ್ತಾರೆ. ಎಷ್ಟೋಸಲ ಅವರಿಗೆ ಸಮಯದ ಅಭಾವ, ಪ್ರಯಾಣದ ಒತ್ತಡ ಹಾಗಿದ್ದೂ ಪ್ರದರ್ಶನದ ಕೊನೆಗೆ ಕಲಾವಿದರೊಂದಿಗೆ ಮಾತನಾಡಿ ಅವರಿಗೆ ಶಾಲು ಹೊದಿಸಿ ಗೌರವ ಸಂಭಾವನೆ, ಅನುಗ್ರಹ ಮಂತ್ರಾಕ್ಷತೆ ನೀಡುತ್ತಿದ್ದರು. ಅವರು ಕಲಾವಿದರ ಕಾಮಧೇನು. ಕಲಾವಿದರಿಗೆ ಕೊಡುವಲ್ಲಿ ಕೊಡುಗೈದೊರೆ ಯಾಗಿದ್ದರು. ಇದು ಕಲಾವಿದರ ಮೇಲೆ ಅವರಿಗಿರುವ ಪ್ರೀತಿಯ ದ್ಯೋತಕ. ಯಕ್ಷಗಾನವನ್ನಂತು ಅವರು ತುಂಬಾ ಇಷ್ಟಪಡುತ್ತಿದ್ದರು. ಉಭಯ ತಿಟ್ಟುಗಳ ಮೇಲೂ ಸಮಾನ ಪ್ರೀತಿ. ಅವರ ಪರ್ಯಾಯ ಅವಧಿಯಲ್ಲಿ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಯ ಸಪ್ತಾಹ ಸರಣಿಗಳನ್ನು ಏರ್ಪಡಿಸಿದ್ದಾರೆ. ಅವರ ಚಾತುರ್ಮಾಸದ ಮೊಕ್ಕಾಂನಲ್ಲಿ, ಬೆಂಗಳೂರು, ಮುಂಬೈ, ಚೆನ್ನೈ ಇನ್ನಿತರ ಶಾಖಾ ಮಠಗಳಲ್ಲಿ ಕಾರ್ಯಕ್ರಮ ಕೇಳಿಕೊಂಡು ಬಂದ ತಂಡವನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

Advertisement

ಯಕ್ಷಗಾನಕ್ಕೆ ಮಾನ್ಯತೆ
ಯಕ್ಷಗಾನವನ್ನು ಮಡಿವಂತರು ದೂರವಿಟ್ಟು ಅಂತರ ಕಾಯ್ದುಕೊಂಡಿದ್ದ ಕಾಲಘಟ್ಟದಲ್ಲಿ ಯಕ್ಷಗಾನಕ್ಕೆ ಮಠದಲ್ಲಿ ಆಶ್ರಯವಿತ್ತು ಮಾನ್ಯತೆ ತಂದುಕೊಟ್ಟ ಕೀರ್ತಿ ಪೇಜಾವರ ಶ್ರೀಗಳಿಗೆ ಸಲ್ಲುತ್ತದೆ. ಪ್ರಯೋಗಾರ್ಥ ಅವರೂ ಸೇರಿದಂತೆ ಯತಿಗಳದ್ದೇ ತಾಳಮದ್ದಳೆ ನಡೆಸಿದ್ದಾರೆ.

ಯಾವುದೇ ಕಲೆಯನ್ನಾಗಲಿ ಅವರು ಅದರ ಅಂತಃಸ್ಸತ್ವವನ್ನು ಅರಿತು ಆಸ್ವಾದಿಸಬಲ್ಲ ವಿದಗ್ಧ. ಕಲಾ ಪ್ರದರ್ಶನ ವೀಕ್ಷಿಸಿದ ಮೇಲೆ ಆ ಕಲೆಯ ಬಗ್ಗೆ, ಕಲಾವಿದರ ಬಗ್ಗೆ ಅವರಾಡುವ ಮಾತುಗಳೇ ಕಲಾವಿದ ಮತ್ತು ಪ್ರೇಕ್ಷಕ ಸಮೂಹಕ್ಕೆ ಚೇತೋಹಾರಿಯಾಗಿದ್ದವು. ಯಕ್ಷಗಾನ ಅಕ್ಷಯಗಾನ ಇದಕ್ಕೆ ಸಾವಿಲ್ಲ. ಆದ್ದರಿಂದ ಕಲಾವಿ ದರಿಗೂ ಅಳಿವಿಲ್ಲ. ಕಲೆಯನ್ನು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಈ ಸಮಾಜ ಸದಾ ಲವಲವಿಕೆಯಿಂದ ಇರುವಂತೆ ಮಾಡಬೇಕು ಎಂಬುದು ಅವರ ಆಶಯದ ಮಾತು. ಅದನ್ನು ಆಚರಿಸಿ ತೋರಿಸಿದ ಮಹಾಸಂತ. ಅಗಲಿದ ದಿವ್ಯಚೇತನಕ್ಕಿದು ಅಕ್ಷರ ನಮನ.

– ಪ್ರೊ| ನಾರಾಯಣ ಎಂ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next