ರಾಯಚೂರು: ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ನಗರಗಳಿಗೆ ಸೀಮಿತಗೊಳ್ಳದೆ ಹಳ್ಳಿಗಳಿಗೂ ಪಸರಿಸಬೇಕು ಎಂದು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಮಿಟ್ಟಿಮಲ್ಕಾಪುರದ ಆರೂಢ ಜ್ಯೋತಿ ಶಾಂತಾಶ್ರಮದಲ್ಲಿ ರಾಯಚೂರಿನ ನಾದಲೋಕ ಕಲಾ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಗಾನಸಿಂಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪಂ.ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಸಂಗೀತಾಭ್ಯಾಸ ಮಾಡಿರುವ ರಾಘವೇಂದ್ರ ಆಶಾಪೂರ, ಈಗ ನೂರಾರು ಜನರಿಗೆ ಸಂಗೀತ ತರಬೇತಿ ನೀಡುತ್ತಿರುವುದು ಒಳ್ಳೆಯ ಕೆಲಸ ಎಂದರು.
ಶಾಂತಾಶ್ರಮದ ಶ್ರೀ ನಿಜಾನಂದ ಸ್ವಾಮೀಜಿ ಮಾತನಾಡಿ, ಗುರುವಿಗೆ ಶರಣಾಗದೇ ಜ್ಞಾನಾರ್ಜನೆ ಆಗುವುದಿಲ್ಲ. ರಾಯಚೂರಿನಲ್ಲಿ ಸಾಕಷ್ಟು ಸಂಗೀತ ವಿದ್ವಾಂಸರಿದ್ದಾರೆ. ಹಿಂದೆಯೂ ಇದ್ದರು. ದೇಶ, ವಿದೇಶಗಳಲ್ಲಿ ರಾಯಚೂರಿಗೆ ಒಳ್ಳೆಯ ಹೆಸರು ತಂದಿದ್ದಾರೆ. ಆದರೆ, ಜಿಲ್ಲೆಯಲ್ಲಿ ಸಂಗೀತ ಕೊಡುಗೆ ನೀಡಲಾಗಿಲ್ಲ. ರಾಘವೇಂದ್ರ ಆಶಾಪೂರ ಹೊರ ಜಿಲ್ಲೆಗಳಿಗೆ ಹೋಗಬಹುದಾದರೂ ಇಲ್ಲೇ ಇದ್ದುಕೊಂಡು ಮಕ್ಕಳಿಗೆ ಸಂಗೀತ ಕಲಿಸುತ್ತಿರುವುದು
ಒಳ್ಳೆಯ ಕಾರ್ಯ ಎಂದರು.
ನಿವೃತ್ತ ಸೈನಿಕ ವಿಜಯಾನಂದ ರಾಗಲಪರ್ವಿ ಮಾತನಾಡಿ, ರೈತರು ದೇಶದ ಬೆನ್ನೆಲುಬು ಎಂದು ಹೊಗಳುತ್ತಾರೆ. ವಾಸ್ತವದಲ್ಲಿ ರೈತರಿಗೆ ವಧು ಕೊಡಲು ಹಿಂದೇಟು ಹಾಕುವಂತಾಗಿದೆ. ಕೃಷಿ ನಿಂತರೆ ಯಾರಿಗೂ ಊಟ ಸಿಗುವುದಿಲ್ಲ ಎಂಬ ಸತ್ಯ ಎಲ್ಲರೂ ಅರಿಯಬೇಕು ಎಂದರು. ಖಾರಾಬದಿನ್ನಿಯ ದೊಡ್ಡಬಸಯ್ಯ ಶಾಸ್ತ್ರಿ ವಿಶೇಷ ಉಪನ್ಯಾಸ ನೀಡಿದರು.
ಪತ್ರಕರ್ತ ನಾಗರಾಜ ಚಿನಗುಂಡಿ ಮಾತನಾಡಿದರು. ಮಿಟ್ಟಿ ಮಲ್ಕಾಪುರ ಗ್ರಾಪಂ ಅಧ್ಯಕ್ಷೆ ಲಕ್ಷಮ್ಮ ಹೊಸ ಮಲಿಯಾಬಾದ್ ಕಾರ್ಯಕ್ರಮ ಉದ್ಘಾಟಿಸಿದರು. ನಾದಲೋಕ ಕಲಾಬಳಗದ ಅಧ್ಯಕ್ಷ ರಾಘವೇಂದ್ರ ಆಶಾಪೂರ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ವಿವಿಧ ಸಂಗೀತ ಗಾಯನ ನಡೆದವು. ವಿ. ತನುಶ್ರೀ ಗೌಡರ್ ನೃತ್ಯ ಪ್ರದರ್ಶಿಸಿದರು. ವೆಂಕಟೇಶ ಕುರ್ಡಿ ಮಂಗಳವಾದ್ಯ ನುಡಿಸಿದರು.
ಅನಿಲಕುಮಾರ್ ಜೆ. ಮರ್ಚೆಡ್ ಹಿಂದೂಸ್ತಾನಿ ಸಂಗೀತ ಗಾಯನ ಮಾಡಿದರು. ರೇಖಾ ಗೌಡರ ವಚನ ಗಾಯನ, ಪಾರ್ವತಿ ಹಿರೇಮಠ ಚೇಗುಂಟಾ ಸುಗಮ ಸಂಗೀತ, ಅನ್ನಪೂರ್ಣೇಶ್ವರಿ ಮಂಜರ್ಲಾ, ಪವಿತ್ರ ಹಿರೇಮಠ ಅವರು ಭಕ್ತಿಗೀತೆ, ಸರ್ವಮಂಗಳಾ ಎಚ್., ರೇಣುಕಾ ಚೇಗುಂಟಾ ಜಾನಪದ ಗಾಯನ ಮಾಡಿದರು. ಎಂ. ತಿಮ್ಮಪ್ಪ ಅರೋಲಿ ಅವರಿಂದ ತತ್ವಪದ, ಭುವನ ಸಿ. ಹೊಸಪೇಟೆ ಅವರಿಂದ ದಾಸವಾಣಿ ನಡೆಯಿತು. ಬಸವಕೇಂದ್ರ ಸಂಗೀತ
ಬಳಗದಿಂದ ಸಮೂಹ ಗಾಯನ ನಡೆಯಿತು.