Advertisement

ಒತ್ತಡ ಮುಕ್ತ ಜೀವನಕ್ಕೆ ಸಾಂಸ್ಕೃತಿಕ ಚಟುವಟಿಕೆ ಅಗತ್ಯ

09:23 PM Jul 20, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಇಂದಿನ ಆಧುನಿಕ ಸಮಾಜದಲ್ಲಿ ಪ್ರತಿಯೊಬ್ಬರು ಒತ್ತಡದಲ್ಲಿ ಜೀವನ ಸಾಗಿಸುತ್ತಿರುವುದರಿಂದ ಮನುಷ್ಯನ ನೆಮ್ಮದಿಗಾಗಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಸಾಂಸ್ಕೃತಿಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನಗೊಳ್ಳುವುದರ ಜೊತೆಗೆ ಸೌಹಾರ್ದತೆಯ ವಾತಾವರಣ ಮೂಡಿಸುತ್ತೇವೆ ಎಂದು ಶ್ರೀ ಕೆ.ವಿ.ಹಾಗೂ ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ.ನವೀನ್‌ ಕಿರಣ್‌ ತಿಳಿಸಿದರು.

Advertisement

ನಗರದ ಪಂಚಗಿರಿ ಬೋಧನಾ ಪ್ರೌಢ ಶಾಲೆಯ ಆವರಣದಲ್ಲಿರುವ ಸಿವಿವಿ ವೇದಿಕೆಯಲ್ಲಿ ಶನಿವಾರ ದಿ.ಮಾಜಿ ಶಾಸಕರಾದ ಸಿ.ವಿ.ವೆಂಕಟರಾಯಪ್ಪ ಜನ್ಮ ದಿನಾಚರಣೆ ಹಾಗೂ ದತ್ತಿಯ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಕೆವಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶಿಯ ಕಲೆ ಉಳಿವು: ಶಾಲಾ ಶಿಕ್ಷಕರು ಸಾಂಸ್ಕೃತಿಕವಾಗಿ ಬೆಳೆದಾಗ ಮಕ್ಕಳಲ್ಲಿರುವ ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ಒದಗಿಸಲು ಸಾಧ್ಯ. ಈ ಚಿಂತನೆಯಿಂದ ಕೆ.ವಿ.ಟ್ರಸ್ಟ್‌ ಹಲವು ವರ್ಷಗಳಿಂದಲೂ ದತ್ತಿ ಜಯಂತಿ ಪ್ರಯುಕ್ತ ಪ್ರತಿ ವರ್ಷ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರಿಗೆ ವಿವಿಧ ಮನರಂಜನಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ನಮ್ಮ ದೇಶಿಯ ಕಲೆ, ಸಾಹಿತ್ಯ, ಸಂಗೀತ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.

25ಕ್ಕೆ ರಕ್ತದಾನ ಶಿಬಿರ: ವಿದ್ಯಾರ್ಥಿಗಳನ್ನು ಶಿಕ್ಷಕರು ಸಾಂಸ್ಕೃತಿಕವಾಗಿ ಬೆಳೆಸಿದಾಗ ಅವರಲ್ಲಿ ಉತ್ತಮ ವ್ಯಕ್ತಿತ್ವ ಹಾಗೂ ಸೃಜನಶೀಲತೆ ಬೆಳೆಯಲು ಸಾಧ್ಯವಾಗುತ್ತದೆ. ಕ್ಷೇತ್ರದ ಶಾಸಕರಾಗಿ ಚಿಕ್ಕಬಳ್ಳಾಪುರ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಮೂಲಕ ದಿ.ಸಿ.ವೆಂಕಟರಾಯಪ್ಪ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಜನ್ಮ ಜಯಂತಿ ಹಾಗೂ ದತ್ತಿ ಜಯಂತಿ ಭಾಗವಾಗಿ ತಿಂಗಳ ಕಾಲ ಅನೇಕ ಸಮಾಜ ಸೇವಾ ಕಾರ್ಯಗಳನ್ನು ಆಯೋಜಿಸಿದ್ದು, 25 ರಂದು ಕೆ.ವಿ.ಕ್ಯಾಂಪಸ್‌ನಲ್ಲಿ ಬೃಹತ್‌ ಮಟ್ಟದ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.

ಟ್ರಸ್ಟ್‌ನ ಸದಸ್ಯ ಬಿ.ಮುನಿಯಪ್ಪ ಮಾತನಾಡಿ, ಹಣದಾಸೆಗಾಗಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಇತ್ತೀಚಿನ ಪ್ರವೃತ್ತಿ ಸಮಾಜಕ್ಕೆ ದೊಡ್ಡ ಮಾರಕ. ಆದರೆ ಸಿ.ವಿ.ವೆಂಕಟರಾಯಪ್ಪ ದೂರದೃಷ್ಟಿ ಹೊಂದಿ ಈ ಭಾಗದ ಬಡ ಜನರ ಶೈಕ್ಷಣಿಕ ಪ್ರಗತಿಗಾಗಿ ಅನೇಕ ವಿದ್ಯಾ ಸಂಸ್ಥೆಗಳನ್ನು ಐದು ದಶಕಗಳ ಹಿಂದೆಯೇ ಸ್ಥಾಪಿಸಿದ್ದು, ಈ ಭಾಗದ ಲಕ್ಷಾಂತರ ಮಂದಿ ವಿದ್ಯಾವಂತರಾಗಿರುವುದು ಅವರ ನಿಸ್ವಾರ್ಥ ಸೇವೆಗೆ ಸಂದ ಪ್ರತಿಫ‌ಲವೆಂದರು.

Advertisement

ಸಾಂಸ್ಕೃತಿಕ ಸ್ಪರ್ಧೆಗಳ ತೀರ್ಪುಗಾರರಾಗಿ ಲತಾ ಸುಬ್ಬರಾಂ, ಸೋ.ಸು. ನಾಗೇಂದ್ರನಾಥ್‌ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ದತ್ತಿಗಳ ಸದಸ್ಯ ಎ.ಕೊಂಡಪ್ಪರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ವಿ.ಹಾಗೂ ಪಂಚಗಿರಿ ಶಿಕ್ಷಣ ದತ್ತಿಗಳ ಸದಸ್ಯೆ ನಿರ್ಮಲಾ ಪ್ರಭು, ವಿಜಯಲಕ್ಷ್ಮಿ, ಲಕ್ಷ್ಮಣಸ್ವಾಮಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next