Advertisement

ಸಂಕಲಕರಿಯ: ಹೀಗೊಂದು ನಾಟಿ ಸ್ಪೆಷಲಿಸ್ಟ್‌ ಮಹಿಳಾ ತಂಡ !

02:50 AM Jul 18, 2017 | Team Udayavani |

ಬೆಳ್ಮಣ್‌: ಕೂಲಿ ಕಾರ್ಮಿಕರ ಕೊರತೆಯಿಂದ ಕೃಷಿಕ ಕಂಗೆಟ್ಟು ನಮ್ಮ ರೈತರು ಎಕರೆಗಟ್ಟಲೆ ಜಮೀನುಗಳನ್ನು  ಹಡೀಲು ಬಿಟ್ಟಿರುವಾಗ ಮುಂಡ್ಕೂರು ಸಂಕಲಕರಿಯದ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಮುಂಡ್ಕೂರು ದೊಡ್ಡಮನೆ ಭಾಸ್ಕರ ಶೆಟ್ಟಿಯವರ ಜಮೀನಿನಲ್ಲಿ ದಾಮಸ್ಕಟ್ಟೆ ಶಾಂತಿಪಲ್ಕೆಯ ಮಹಿಳೆಯರ ತಂಡವೊಂದು ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ನೇಜಿ ತೆಗೆದು ನಾಟಿ ಮಾಡಿ ಭಾರೀ ಸುದ್ದಿ ಮಾಡಿದೆ.

Advertisement

ತಂಡಕ್ಕೆ ಸಮ್ಮಾನ
ತನ್ನ ಈ ವರ್ಷದ ಸಾಗುವಳಿಯನ್ನು ಹೆಚ್ಚೇನೂ ಚಿಂತೆಯಿಲ್ಲದೆ ಪೂರೈಸಿದ ಭಾಸ್ಕರ ಶೆಟ್ಟಿ ಈ ತಂಡವನ್ನು ಮನೆಯಂಗಳದಲ್ಲಿಯೇ ಸಮ್ಮಾನಿಸಿದ್ದಾರೆ. ತಂಡದ ಮುಖ್ಯಸ್ಥೆ ಪದ್ಮಾವತಿ ಈ ಸಮ್ಮಾನ ಸ್ವೀಕರಿಸಿದರು. ಊಟ ತಿಂಡಿ ಕೊಟ್ಟು 300 ರೂಪಾಯಿಯ ದಿನಗೂಲಿಯಲ್ಲಿ  ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ದುಡಿಯುವ ಮಹಿಳೆಯರ ಈ ತಂಡ ಈಗಾಗಲೇ ಸಂಕಲಕರಿಯ, ಏಳಿಂಜೆ, ಐಕಳ ಮತ್ತಿನ್ನಿತರ ಪರಿಸರದಲ್ಲಿ ಬಹಳಷ್ಟು ಹೆಸರು ಮಾಡಿದೆ. ತಲಾ 15 ಮಂದಿಯ ಎರಡು ತಂಡಗಳಿದ್ದು ಕರೆದಲ್ಲಿಗೆ ತತ್‌ಕ್ಷಣ ಈ ತಂಡಗಳು ಸ್ಪಂದಿಸುತ್ತದೆ.

ಕೃಷಿ ಬದುಕಿಗೆ ಪೂರಕ
ಕೃಷಿ ಚಟುವಟಿಕೆಗಳಲ್ಲಿ ಬಹಳಷ್ಟು ಆಸಕ್ತಿ ಹೊಂದಿರುವ ಈ ಮಹಿಳೆಯರ ತಂಡ ಹಳ್ಳಿಯ ಕೃಷಿಕರಿಗೆ ಹೊಸ ಹುಮ್ಮಸ್ಸು ತಂದಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ಕಂಗೆಟ್ಟು ಯಂತ್ರೀಕೃತ ಕೃಷಿ ಉಪಕರಣ ಬಳಕೆಯ ಜತೆ ತೋಟಗಾರಿಕೆ ಮತ್ತಿನ್ನಿತರ‌ ಕೃಷಿಗಳತ್ತ ವಾಲುತ್ತಿರುವಾಗ ಪದ್ಮಾವತಿಯವರ ತಂಡ‌ ಕೃಷಿ ಬದುಕಿಗೆ ಪೂರಕವೆನಿಸುವ ಕೆಲಸ ಮಾಡಿದೆ.

ಈ ಹಿಂದೆ 15 ದಿನಗಳಲ್ಲಿಯೂ ಮುಗಿಯದ ನಾಟಿ ಕಾರ್ಯ ಈ ವರ್ಷ ಪದ್ಮಾವತಿಯವರ ತಂಡದ ನೆರವಿನಿಂದ 5 ದಿನಗಳಲ್ಲೇ ಮುಗಿದಿದೆ. ನಮ್ಮಂತಹ ಕೃಷಿಕರ ಭವಿಷ್ಯ ಇಂತಹ ಮಹಿಳೆಯರ ಕೈಯಲ್ಲಿದೆ.
– ಮುಂಡ್ಕೂರು ದೊಡ್ಡಮನೆ ಭಾಸ್ಕರ ಶೆಟ್ಟಿ, ಕಾರ್ಕಳ ತಾ| ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತರು 

ಪ್ರಾಮಾಣಿಕವಾದ ದುಡಿಮೆ ಮಾಡುತ್ತಿದ್ದೇವೆ, ಕೃಷಿಕರ ಬವಣೆಗಳನ್ನು ಚೆನ್ನಾಗಿ ಅರಿತಿದ್ದೇವೆ. ಎರಡೆರರಡು ತಂಡಗಳ ಮೂಲಕ ಕರೆದಲ್ಲಿಗೆ ಹೋಗಿ ನಾಟಿ ಮಾಡುತ್ತೇವೆ.
– ಪದ್ಮಾವತಿ ಶಾಂತಿಪಲ್ಕೆ, ತಂಡದ ಮುಖ್ಯಸ್ಥೆ

Advertisement
Advertisement

Udayavani is now on Telegram. Click here to join our channel and stay updated with the latest news.

Next