ಬಸ್ರೂರು: ಇಲ್ಲಿನ ಬಳ್ಕೂರು, ಕಂಡ್ಲೂರು, ಕಂದಾವರ, ಜಪ್ತಿ, ಆನಗಳ್ಳಿ, ಕೋಣಿ ಮುಂತಾದೆಡೆ ಸುಗ್ಗಿ ಬೆಳೆಯ ಜತೆಗೆ ಧಾನ್ಯದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಉದ್ದು ಬಿತ್ತನೆಗೇ ರೈತರು ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಉಳಿದಂತೆ ಹುರುಳಿ, ಅವಡೆ ಮತ್ತು ಕಬ್ಬೆಸರು ಧಾನ್ಯಗಳನ್ನೂ ಬಿತ್ತಿದ್ದಾರೆ. ಕಾತಿ ಬೆಳೆಯ ಬಳಿಕ ಧಾನ್ಯ ಬಿತ್ತನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮನಸ್ಸು ಮಾಡಿದ್ದಾರೆ. ಬಿತ್ತನೆ ಬಳಿಕ ಮೂರು ದಿನಗಳಲ್ಲಿ ಧಾನ್ಯ ಮೊಳಕೆಯೊಡೆದು ಎರಡು ತಿಂಗಳಲ್ಲೇ ಫಸಲು ಕೈಸೇರುತ್ತದೆ. ಧಾನ್ಯದ ಕೃಷಿಯಲ್ಲಿ ಹೆಚ್ಚಿನ ಲಾಭದ ನಿರೀಕ್ಷೆಯಿಂದ ಈ ಭಾಗದಲ್ಲಿ ರೈತರು ಹೆಚ್ಚಿನ ಕೃಷಿಗೆ ಒತ್ತು ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಹಿಂಗಾರು ಕ್ಷೀಣವಾದ್ದರಿಂದ ಕೃತಕ ನೀರಾವರಿಯೇ ಧಾನ್ಯ ಕೃಷಿಗೆ ಮೂಲವಾಗಿದೆ. ಕಾತಿ ಬೆಳೆಯಲ್ಲಿ ಹೇಳುವಂತಹ ಲಾಭವನ್ನೇನೂ ಪಡೆದಿಲ್ಲ. ಈಗ ಸುಗ್ಗಿಯ ಬದಲು ಉದ್ದನ್ನು ಬಿತ್ತಿದ್ದೇನೆ. ಎರಡು ತಿಂಗಳಲ್ಲಿ ಧಾನ್ಯದ ಫಸಲು ಕೈಗೆ ಬರಲಿದೆ. ನಾವು ಬೇಸಾಯವನ್ನೇ ನಂಬಿ ಬದುಕುವವರಾದ್ದರಿಂದ ಕೃಷಿಯಲ್ಲಿ ಸ್ವಲ್ಪವಾದರೂ ಲಾಭ ಬಂದರೆ ಸಮಾಧಾನವಾಗುತ್ತದೆ ಎನ್ನುತ್ತಾರೆ ಧಾನ್ಯ ಬಿತ್ತನೆ ಮಾಡಿದ ಬಳ್ಕೂರಿನ ಕೃಷಿಕ ನಾಗರಾಜ ಪೂಜಾರಿ.