Advertisement

ಹಡಿಲು ಬಿದ್ದ ಭೂಮಿಯಲ್ಲಿ ಆಲಂದೂರು ಯುವಕರ ಬೇಸಾಯ

01:16 PM Jul 01, 2019 | sudhir |

ಬೈಂದೂರು: ಯುವಜನತೆ ಕೃಷಿಯ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ಟೀಕೆಯ ಮಧ್ಯೆಯೇ ಈ ಊರಿನ ಯುವಜನರು ಗದ್ದೆಗಿಳಿದಿದ್ದಾರೆ.

Advertisement

ಶಿರೂರು ಸಮೀಪದ ಯಡ್ತರೆ ಗ್ರಾಮದ ಆಲಂದೂರಿನ ಯುವಕರು ಹಡಿಲು ಬಿದ್ದ ಒಂದು ಎಕ್ರೆ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡತೊಡಗಿದ್ದರು. ಈ ವರ್ಷ ಮತ್ತೆ ಉತ್ಸಾಹದಿಂದ ಗದ್ದೆಗಿಳಿದಿದ್ದಾರೆ. ರವಿವಾರ ನಾಟಿ ಕಾರ್ಯ ಭರದಿಂದ ನಡೆಯಲಿದೆ. ಈ ಯುವಜನರನ್ನ ಏಕಸೂತ್ರದಲ್ಲಿ ಬಂಧಿಸುತ್ತಿರುವುದು ಮಾನಸ ಮಿತ್ರ ಮಂಡಳಿ. ಇಂದು (ಮೇ 30) ನೂರಾರು ಯುವಜನರು, ಸ್ವ ಸಹಾಯ ಸಂಘದ ಸದಸ್ಯೆಯರು, ಊರಿನ ಜನರ ಸಹಯೋಗದಲ್ಲಿ ಸಾಮೂಹಿಕ ನಾಟಿ ಕಾರ್ಯ ನಡೆಯಲಿದೆ.

ಉದಯವಾಣಿ ಪ್ರೇರಣೆಯೂ ಸಹ

ಯಡ್ತರೆ ಗ್ರಾಮದ ಆಲಂದೂರು ಶಿರೂರಿನ ಸಮೀಪವಿದ್ದರೂ ಆಧುನಿಕ ಸೌಲಭ್ಯಗಳು ಅಷ್ಟಕಷ್ಟೇ. ಇಲ್ಲಿನವರದ್ದು ಕೃಷಿ ಬದುಕು. ಹತ್ತಾರು ಸಮಸ್ಯೆಗಳಿಂದ ಈ ಭಾಗದ ರೈತರು ಬೇಸಾಯವನ್ನು ಕೈ ಬಿಟ್ಟಿದ್ದರು. ಹತ್ತು ವರ್ಷಗಳಿಂದ ಈ ಊರಿನಲ್ಲಿ ಸಂಘಟನೆ ಮತ್ತು ಊರಿನ ಅಭಿವೃದ್ದಿಗೆ ಸಾಂಘಿಕ ಪ್ರಯತ್ನ ನಡೆಸಲೆಂದು ಮಾನಸ ಮಿತ್ರ ಮಂಡಳಿ ಎನ್ನುವ ಸಂಘ ಸ್ಥಾಪಿಸಲಾಯಿತು.

ಕುಂದದ ಉತ್ಸಾಹ

Advertisement

ಪ್ರತಿವರ್ಷ ಶಾರದೋತ್ಸವ ಆಚರಿಸಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪರಿಸರ ಕಾರ್ಯಕ್ರಮ, ಧಾರ್ಮಿಕ,ಸಾಂಸðತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಈ ಮಂಡಳಿ. ಇದರೊಂದಿಗೆ ಹಡಿಲು ಭೂಮಿಯಲ್ಲಿ ಕೃಷಿ ಮಾಡಿ ಎಂಬ ಉದಯವಾಣಿಯ ಲೇಖನದಿಂದ ಹುಮ್ಮಸ್ಸು ಪಡೆದ ಯುವಕರು ಊರಿನಲ್ಲಿರುವ ಒಂದು ಎಕ್ರೆ ಹಡಿಲು ಭೂಮಿಯಲ್ಲಿ ಬೇಸಾಯಕ್ಕೆ ಮುಂದಾಗಿದ್ದಾರೆ. ಸಣ್ಣಗೆ ಮಳೆ ಕೈ ಕೊಟ್ಟಿದ್ದರೂ ಇವರ ಉತ್ಸಾಹ ಕುಂದಿಲ್ಲ. ಬೀಜ ಬಿತ್ತನೆ ಉಳುಮೆ ಕಾರ್ಯ ಪೂರ್ಣಗೊಂಡು ನಾಟಿ ಕಾರ್ಯಕ್ಕೆ ಸಿದ್ಧವಾಗಿದ್ದಾರೆ.

ಯುವಕರ ಒಗ್ಗಟ್ಟು, ಊರವರ ಸಹಕಾರ, ಗ್ರಾಮಾಭಿವೃದ್ದಿ ಸಂಘಗಳ ಸಹಯೋಗ ಈ ಕನಸನ್ನು ಸಾಕಾರ ಗೊಳಿಸುತ್ತಿರುವುದು ಸುಳ್ಳಲ್ಲ. ಯುವಕರ ಈ ರಚನಾತ್ಮಕ ಪ್ರಯತ್ನವನ್ನು ಬೆಂಬಲಿಸಿದ್ದು ಊರಿನ ಹಿರಿಯರು. ಬೀಜ ಬಿತ್ತನೆಯಿಂದ ಹಿಡಿದು ಪ್ರತಿ ಹಂತದಲ್ಲೂ ಹಿರಿಯರ ಮುತುವರ್ಜಿ ಅನನ್ಯ.

ಜಾಲತಾಣಗಳಲ್ಲೂ ಬೆಂಬಲ

ಬೆಂಗಳೂರು ಇತರ ಕಡೆಯ ಯುವಜನರೂ ಸಾಮಾಜಿಕ ಮಾಧ್ಯಮ ಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ. ಅಲ್ಲಿನ ಕೆಲವು ಯುವಜನರು ಸಹ ನಾಟಿ ಕಾರ್ಯದಲ್ಲಿ ಭಾಗವಹಿಸು ತ್ತಿರುವುದು ವಿಶೇಷ. ಊರಿನ ಧ.ಗ್ರಾ.ಯೋಜನೆ ಮಹಿಳೆಯರು ಹಾಗೂ ಸ್ವ-ಸಹಾಯ ಸಂಘದ ಸದಸ್ಯರೂ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. 1 ಎಕ್ರೆಯಿಂದ ಬರುವ ಆದಾಯ ಸ್ಥಳೀಯ ಶಾಲೆಗೆ ಮತ್ತು ಶಾರದೋತ್ಸವದ ಅನ್ನದಾನಕ್ಕೆ ಕೊಡುಗೆಯಾಗಿ ನೀಡುವುದು ಸದಸ್ಯರ ಉದ್ದೇಶ.

ಹಿಂದೆಲ್ಲ ಮನೆ ತುಂಬ ಜನ ಇದ್ದಿದ್ದರು. ಜನರೂ ಸಿಗುತ್ತಿದ್ದರು. ಈಗ ಉದ್ಯೋಗ, ಶಿಕ್ಷಣದಿಂದ ಮನೆಯಲ್ಲಿ ಯುವಕರು ಸಿಗುತ್ತಿಲ್ಲ. ಕೂಲಿಯಾಳುಗಳ ಮನೆ ಹತ್ತಾರು ಬಾರಿ ಓಡಾಡಬೇಕು.ಇಳಿ ವಯಸ್ಸಿನಲ್ಲಿ ಕಷ್ಟ. ಹೀಗಾಗಿ ಬೇಸಾಯ ಕೈಬಿಡಬೇಕಾಯಿತು. ಪರಿಸರ ಅಸಮತೋಲನ ಸಹ ಬೇಸಾಯದ ಮೇಲೆ ಪರಿಣಾಮ ಬೀರಿದೆ. ಊರಿನ ಯುವಕರು ಇಂತಹ ಮಾದರಿ ಕಾರ್ಯಕ್ಕೆ ಮುಂದಾಗಿರುವುದು ತುಂಬಾ ಸಂತೋಷ. ಎಲ್ಲ ಊರಲ್ಲೂ ಇದೇ ರೀತಿ ಯುವಕ ಸಂಘಗಳು ಒಂದಿಷ್ಟು ಕೃಷಿಯತ್ತ ಮನಸ್ಸು ಮಾಡಿದರೆ ಭೂಮಿ ತಂಪಾಗಿರುತ್ತದೆ.ಉತ್ತಮ ವಾತಾವರಣ ಸಿಗುತ್ತದೆ.

-ತಿಮ್ಮಪ್ಪ ಪೂಜಾರಿ ಮಾಕೋಡಿ,ಗದ್ದೆ ಮಾಲಕರು

ನಮ್ಮ ಸಂಘ ಪ್ರತಿ ವರ್ಷ ಶಾರದೋತ್ಸವ ಆಚರಿಸಿಕೊಂಡು ಬರುತ್ತಿದೆ. ಇಲ್ಲಿನ ಶಾಲೆಯ ಎಲ್ಲಾ ಕಾರ್ಯದಲ್ಲೂ ಮಿತ್ರ ಮಂಡಳಿ ಸಹಭಾಗಿತ್ವ ಇದೆ. ಕೃಷಿಯ ಅನುಭವ ಇಲ್ಲಿನ ಯುವಕರಿಗೆ ಈ ಪ್ರಯತ್ನ ತುಂಬ ಸಮಾಧಾನ ನೀಡಿದೆ. ಎಲ್ಲ ಯುವಕರು ಈ ಪ್ರಯತ್ನಕ್ಕೆ ಬಹಳ ಉತ್ಸಾಹದಿಂದ ಸಹಕಾರ ನೀಡಿದ್ದಾರೆ.ಅತ್ಯಂತ ಅಚ್ಚುಕಟ್ಟಾಗಿ ಬೇಸಾಯ ಕ್ರಮ ಅನುಸರಿಸಲಾಗುತ್ತಿದೆ. ಯುವಕರಿಗೆ ಕೃಷಿ ಆಸಕ್ತಿ ಮೂಡಿಸುವುದೇ ಉದ್ದೇಶಕ್ಕೆ ಉದಯವಾಣಿ ಪ್ರೇರಣೆ.

-ಚಂದ್ರ ಕೊಠಾರಿ,ಮಾಜಿ ಅಧ್ಯಕ್ಷರು ಮಾನಸ ಮಿತ್ರ ಮಂಡಳಿ ಆಲಂದೂರು

ನಮ್ಮೂರಲ್ಲಿ ಬಹುತೇಕ ಕುಟುಂಬಗಳೂ ಕೃಷಿಯನ್ನೇ ಜೀವನಾಧಾರವಾಗಿಟ್ಟುಕೊಂಡಿದೆ. ಕಾಲ ಕ್ರಮೇಣ ಹಲವು ಕಾರಣಗಳಿಂದ ಕೃಷಿಯನ್ನೇ ಕೈಬಿಡುವಂತಾಗಿದೆ.ಮಾಸನ ಮಿತ್ರ ಮಂಡಳಿಯ ಪ್ರಯತ್ನ ಮಾದರಿ ಕಾರ್ಯ. ಗ್ರಾ.ಪಂ ಹಾಗೂ ವಿವಿಧ ಸಂಘ ಸಂಸ್ಥೆಗಳು ಮುಕ್ತ ಪ್ರೋತ್ಸಾಹ ನೀಡಲಿದೆ. ಇಂತದ್ದೊಂದು ಮಾದರಿ ಪ್ರಯತ್ನಕ್ಕೆ ಮುಂದಾದ ಯುವಕರು ಅಭಿನಂದನೀಯರು.

-ಉದಯ ಮಾಕೋಡಿ ಆಲಂದೂರು, ಗ್ರಾ.ಪಂ. ಸದಸ್ಯರು, ಯಡ್ತರೆ

ಮಕ್ಕಳಿಗೂ ಕೃಷಿ ಮಾಹಿತಿ ಸಿಗಲಿದೆ

ಯುವಕ ಸಂಘ ಈ ಪ್ರಯತ್ನದ ಹಿಂದೆ ಹಲವು ಉದ್ದೇಶಗಳನ್ನು ಹೊಂದಿದೆ. ಇತ್ತೀಚೆಗೆ ಮಕ್ಕಳಿಗೆ ಬೇಸಾಯ ಪದ್ಧತಿ ಬಗ್ಗೆ ಅರಿವು ಮೂಡಿಸಬೇಕೆಂದು ಶಾಲಾ ಮಕ್ಕಳಿಗೂ ಕೂಡ ಕೃಷಿ ಮಾಹಿತಿ ನೀಡಲಿದೆ. ವಿವಿಧ ಅಧಿಕಾರಿಗಳನ್ನು ಕರೆದು ಕೃಷಿ ಸಂವಾದ ನಡೆಸಲಿದೆ. ಮಾತ್ರವಲ್ಲದೆ ಸಂಪೂರ್ಣ ಸಾವಯವ ಪದ್ಧತಿ ಅನುಸರಿಸಿ ತಂತ್ರಜ್ಞಾನದ ಅಳವಡಿಕೆ ಜತೆ ಗ್ರಾಮೀಣ ಭಾಗದ ಸಾಂಪ್ರದಾಯಿಕ ಆಚರಣೆಗಳನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ಹೊಸ್ತು ಆಚರಣೆಯನ್ನು ಯುವಕ ಸಂಘ ಸಾಮೂಹಿಕವಾಗಿ ಆಚರಿಸಬೇಕು ಹಾಗೂ ಯುವಕರೆಲ್ಲರೂ ಕೃಷಿ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಸಂಘವು ಮನವಿ ಮಾಡಿದೆ. ಈಗಾಗಲೇ ವಿವಿಧ ಸಭೆ ನಡೆಸಿ ಯುವಜರನ್ನು ಸಂಘಟಿಸಿ ಶ್ರಮದಾನದ ಮೂಲಕ ಗದ್ದೆ ಉಳುಮೆ, ಬೀಜ ಬಿತ್ತನೆ, ಗೊಬ್ಬರ ಸಿಂಪಡನೆ ಮಾಡಲಾಗಿದೆ.

– ಅರುಣ ಕುಮಾರ್‌ ಶಿರೂರು

 

Advertisement

Udayavani is now on Telegram. Click here to join our channel and stay updated with the latest news.

Next