Advertisement

Puttur ಅಡಿಕೆ ಸಿಪ್ಪೆಯಲ್ಲಿ ಬೆಳೆಯಿತು ಅಣಬೆ ಕೃಷಿ!

10:07 AM May 28, 2024 | Team Udayavani |

ಪುತ್ತೂರು: ಕೃಷಿಕರ ಸತತ ಪ್ರಯತ್ನವನ್ನು ಸಿಪಿಸಿಆರ್‌ಐ ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸಿದ ಕಾರಣ ಅಡಿಕೆ ಸಿಪ್ಪೆಯಲ್ಲಿ ಪ್ರಕೃತಿದತ್ತವಾಗಿ ಮೂಡುವ ಅಣಬೆ ಪ್ರಭೇದ ಅಂತರಾಷ್ಟ್ರೀಯ ಫುಡ್‌ ಜರ್ನಲ್‌ ನಲ್ಲಿ(EJFA) ದಾಖಲಾಗಿದ್ದು ತನ್ಮೂಲಕ್ಕೆ ಅಣಬೆ ಖಾದ್ಯಕ್ಕೆ ಯೋಗ್ಯ ಅನ್ನುವುದು ಅಧಿಕೃತವಾಗಿ ದೃಢಪಟ್ಟಿದೆ..!

Advertisement

ಕಾಸರಗೋಡಿನ ಕಿನ್ನಿಂಗಾರು ಹಾಗೂ ಪುತ್ತೂರಿನ ಬಡಗನ್ನೂರಿನಲ್ಲಿ ಕೃಷಿಕರ ಅಡಕೆ ಸಿಪ್ಪೆ ಹಾಗೂ ಸೋಗೆಯಲ್ಲಿ ಬೆಳೆದ ಅಣಬೆಯನ್ನು ಕೃಷಿ ವಿಜ್ಞಾನಿಗಳು ಕಳೆದ ಒಂದೆರಡು ವರ್ಷಗಳಿಂದ ಸಂಶೋಧನೆಗೆ ಒಳಪಡಿಸಿದ್ದರು. ಈ ಪೈಕಿ ಪುತ್ತೂರಿನ ತಾಲೂಕಿನ ಮುಡಿಪಿನಡ್ಕದ ಕೃಷಿಕ ಹರೀಶ್‌ ರೈ ದೇರ್ಲ ಅವರು ಸಿಪಿಸಿಆರ್‌ಐನ ಸಂಶೋಧನೆಗೋಸ್ಕರ ಅಡಿಕೆ ಸಿಪ್ಪೆಯ ಮೂಲಕ ನಿರ್ದಿಷ್ಟ ಪ್ರಭೇದದ ಅಣಬೆ ತಳಿಯನ್ನು ಕಳೆದ ಎರಡು ವರ್ಷದಿಂದ ಬೆಳೆಸುತ್ತಿದ್ದಾರೆ. ಇದೀಗ 24 ನೇ ಬ್ಯಾಚ್‌ ಮುಗಿಸಿದ್ದು 25 ನೇ ಬ್ಯಾಚ್ ಗೆ ಸಿದ್ಧತೆ ನಡೆದಿದೆ.

ನಿರಂತರ ಅಧ್ಯಯನ: 
ಅಡಿಕೆ ಸಿಪ್ಪೆಯಲ್ಲಿ ಬೆಳೆಯುವ ಅಣಬೆಯನ್ನು ಹರೀಶ್‌ ರೈ ಅವರ ಮಿತ್ರರೊಬ್ಬರು ಬಳಕೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದುಕೊಂಡು ತಾವೂ ಬೆಳೆಯಲು ಆರಂಭ ಮಾಡಿದರು. ಅಡಿಕೆ ಸಿಪ್ಪೆಯಲ್ಲಿ ಬೆಳೆಯುವ ಈ ಪ್ರಭೇದದ ಅಣಬೆಯ ಬಗ್ಗೆ ವಿಟ್ಲ ಮತ್ತು ಕಾಸರಗೋಡಿನ ಸಿಪಿಸಿಆರ್‌ ಐ ಸಂಶೋಧಕರು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಕೆಲವು ಸಮಯಗಳ ಕಾಲ ಸೂಕ್ಷ್ಮವಾಗಿ ಗಮನಿಸಿ ಅಡಿಕೆ ಸಿಪ್ಪೆಯಲ್ಲಿ ಬೆಳೆಯುತ್ತಿರುವ ಕಾಪ್ರಿನೋಪ್ಸಿಸ್ ಸಿನೆರಿಯಾ ಎಂಬ ಖಾದ್ಯ ಅಣಬೆ ಪ್ರಭೇದವನ್ನು ಗುರುತಿಸಿದ್ದಾರೆ. ಈ ಅಧ್ಯಯನ ಹಾಗೂ ಕೃಷಿಕರ ಪ್ರಯತ್ನ, ಸಂಶೋಧನೆಗಳನ್ನು ಅಂತರಾಷ್ಟ್ರೀಯ ಮಟ್ಟದ ಎಮಿರೇಟ್ಸ್ ಜರ್ನಲ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್‌ನಲ್ಲಿ ದಾಖಲಿಸಲಾಗಿದೆ.

24 ಬ್ಯಾಚ್: 
ಸತತವಾಗಿ 24 ಬ್ಯಾಚ್ ಅಣಬೆ ಕೃಷಿ ಮಾಡುವ ಮೂಲಕ ಎರಡು ವರ್ಷದ ಪೂರ್ತಿ ಅವಧಿಯಲ್ಲಿ ಅಡಿಕೆ ಸಿಪ್ಪೆಯಿಂದ ಅಣಬೆ ಬೆಳೆಸಿದ್ದಾರೆ ಹರೀಶ್‌ ರೈ. ಇಲ್ಲಿ ಅಣಬೆ ಬೆಳೆಯಲು ಯಾವುದೇ ಬೀಜ ನಾಟಿ ಮಾಡಬೇಕಾಗಿಲ್ಲ. ಆ ಕೆಲಸವನ್ನು ಪ್ರಕೃತಿಯೇ ಮಾಡುತ್ತದೆ. ಹೀಗಾಗಿ ಈ ಕೃಷಿಯು ಹೆಚ್ಚಿನ ಗಮನ ಸೆಳೆದಿದೆ. ತಿನ್ನಬಹುದಾದ ಅಣಬೆ ಇದಾದ್ದರಿಂದ , ವಾಣಿಜ್ಯ ಉದ್ದೇಶಕ್ಕಾಗಿ ಹೇಗೆ ಬಳಕೆ ಮಾಡಬಹುದು ಎನ್ನುವುದರ ಬಗ್ಗೆ ಇನ್ನಷ್ಟೇ ಚಿಂತನೆ, ಪ್ರಯತ್ನ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಈ ಅಣಬೆಯೂ ಹೊಟೇಲ್ ಗಳಲ್ಲಿ ಬಳಕೆಗೆ ಆಗಬೇಕಿದೆ. ಹೀಗಾಗಿ ವಿಜ್ಞಾನಿಗಳು ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುತ್ತಿದ್ದು, ಅಣಬೆ ಸರಿಯಾಗಿ ಬೆಳೆಯಲು ಹಾಗೂ ಪೋಷಕಾಂಶಗಳನ್ನು ಹೇಗೆ ನೀಡಬಹುದು ಇತ್ಯಾದಿಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ ಎಂದು ಜರ್ನಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಸೋಗೆಯಲ್ಲೂ ಅಣಬೆ: 
ಅಡಿಕೆ ಸಿಪ್ಪೆಯಲ್ಲಿ ಮಾತ್ರವಲ್ಲದೆ ಸೋಗೆಯಲ್ಲೂ ಅಣಬೆ ಕಾಣಿಸಿಕೊಳ್ಳುತ್ತದೆ. ಹರೀಶ್ ರೈ ಅವರು ಅಡಿಕೆಯ ಬಹು ಭಾಗಗಳಲ್ಲಿ ಅಣಬೆ ಬೆಳೆಯುತ್ತದೆ ಅನ್ನುತ್ತಾರೆ. ಅಡಕೆ ಸಿಪ್ಪೆ ಹಾಗೂ ಸೋಗೆಯಲ್ಲಿ ಬೆಳೆಯುವ ಈ ಅಣಬೆಯನ್ನು ಸಂಜೆ 4 ರಿಂದ 6 ಗಂಟೆ ಒಳಗೆ ಸಂಗ್ರಹಿಸಬೇಕು. ಇಲ್ಲದಿದ್ದರೆ ಅಣಬೆ ಕಪ್ಪು ಬಣ್ಣಕ್ಕೆ ತಿರುಗಿ ಸೇವಿಸಲು ಯೋಗ್ಯವಾಗದು. ಬೆಳಗ್ಗಿನ ವೇಳೆಗೆ ಅಣಬೆ ಕೊಳೆತುಹೋಗುತ್ತದೆ. ಆದ್ದರಿಂದ ಸಂಜೆ ಅಣಬೆಯನ್ನು ಸಂಗ್ರಹಿಸಿ ಬಿಸಿ ನೀರಿನಲ್ಲಿ ಹಾಕಿದ ಬಳಿಕ ಅದನ್ನು ಶೀತಲೀಕರಣದಲ್ಲಿ ಇರಿಸಿದರೆ ಬಳಕೆ ಮಾಡಬಹುದು. ನೆರಳು ಪ್ರದೇಶದಲ್ಲಿ ಅಡಕೆ ಸಿಪ್ಪೆ ರಾಶಿಗೆ ಒಂದಷ್ಟು ನೀರು ಹಾಕಿದರೆ 8-10 ದಿನಗಳಲ್ಲಿ ಅಲ್ಲಿ ಅಣಬೆ ಬೆಳೆಯುತ್ತದೆ. ಹತ್ತು ದಿನದ ತನಕ ಅಣಬೆ ಸಿಗುತ್ತದೆ. ಅನಂತರ ಅದು ನಿರುಪಯುಕ್ತ. ಒಂದು ಬ್ಯಾಚ್ ನ ಅಡಿಕೆ ಸಿಪ್ಪೆಯಲ್ಲಿ ಒಮ್ಮೆ ಮಾತ್ರ ಅಣಬೆ ಮೂಡುತ್ತದೆ, ಮತ್ತೆಂದಿಗೂ ಅಣಬೆ ಬಾರದು ಅನ್ನುತ್ತಾರೆ ಹರೀಶ್ ರೈ. ವರ್ಷವಿಡೀ ಅಣಬೆ ಬೆಳೆಯಲು ಸಾಧ್ಯ ಅನ್ನುವುದು ಸಾಬೀತಾಗಿದೆ. ಹಾಗಾಗಿ ವೈಜ್ಞಾನಿಕ ಪದ್ದತಿಯಲ್ಲಿ ಅಡಿಕೆ ಸಿಪ್ಪೆಯಲ್ಲಿ ಅಣಬೆ ಬೆಳಯುವ ವಿಧಾನದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಬೇಕು ಅನ್ನುತ್ತಾರೆ ಹರೀಶ್ ರೈ.

Advertisement

ಕಳೆದ ಮೂರ್ನಾಲ್ಕು ದಶಕಗಳಿಂದಲೂ ಕರಾವಳಿಯಲ್ಲಿ ಕೃಷಿಕರಿಗೆ ಈ ಅಣಬೆ ಚಿರಪರಿಚಿತ. ಈ ಅಣಬೆ ಖಾದ್ಯ ಯೋಗ್ಯವಾಗಿರುವ ಕಾರಣ ಅದರದ್ದೇ ಆದ ಮಹತ್ವ ಪಡೆದುಕೊಂಡಿದೆ .ಈ ಅಣಬೆ ಆಹಾರದಾಯಕವಾದರೂ ಇದರಲ್ಲಿ ಇರುವ ಔಷಧೀಯ ಗುಣ ಇದ್ದು ಈ ಬಗ್ಗೆ ಸಂಶೋಧನೆ ಮುಂದುವರಿಯುತ್ತಿದೆ. 283 ಕಾಡು ಖಾದ್ಯ ಅಣಬೆಗಳಿಗೆ ನೆಲೆಯಾಗಿರುವ ಭಾರತವು ವಿಶ್ವದ 2000 ಕಾಡು ಖಾದ್ಯ ಅಣಬೆಗಳ ಪ್ರಭೇದವನ್ನು ಹೊಂದಿವೆ. ಹೀಗಾಗಿ ಅಡಿಕೆ ಸಿಪ್ಪೆಯ ಅಣಬೆಯು ಖಾದ್ಯವಾಗಿ ಬಳಕೆ ಮಾಡಬಹುದು ಎನ್ನುವುದು ಈಗ ಹೆಚ್ಚಿನ ಮಹತ್ವ ಪಡೆದಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next