Advertisement

ಜಾನಪದ ಸಂಸ್ಕೃತಿ ಬೆಳೆಸುವುದು ಇಂದಿನ ಅಗತ್ಯತೆ

05:49 PM Jul 11, 2022 | Team Udayavani |

ಸುರಪುರ: ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕ. ಇದನ್ನು ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಇಂದಿನ ಅಗತ್ಯತೆ ಎಂದು ಜಾನಪದ ಅಕಾಡೆಮಿ ಸದಸ್ಯ ಅಮರಯ್ಗಯಸ್ವಾಮಿ ಜಾಲಿಬೆಂಚಿ ಹೇಳಿದರು.

Advertisement

ಲಕ್ಷ್ಮೀಪುರ ಶ್ರೀಗಿರಿ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಜಾನಪದ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕತೆ ಭರಾಟೆಯಲ್ಲಿ ಜಾನಪದ ಮಾಯವಾಗುತ್ತಿರುವುದು ವಿಷಾದನೀಯ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯ. ಆದ್ದರಿಂದ ಇಲಾಖೆಯಿಂದ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ ಅನುದಾನ ಇನ್ನಷ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಇಂದಿನ ಶಿಷ್ಟ ಸಾಹಿತ್ಯಕ್ಕೆ ಜಾನಪದ ತಾಯಿ ಬೇರು ಇದ್ದಂತೆ. ಕಲೆ ನಂಬಿ ಬದುಕುತ್ತಿರುವ ಗ್ರಾಮೀಣ ಕಲಾವಿದರ ಬದುಕು ಶೋಚನೀಯ ಸ್ಥಿತಿಯಲ್ಲಿದೆ. ಸರ್ಕಾರ ಕಲಾವಿದರಿಗೆ ನೆರವು ನೀಡಬೇಕು. ಕಲಾ ಸಾಮಗ್ರಿಗಳ ಖರೀದಿಗೆ ಆರ್ಥಿಕ ಧನಸಹಾಯ ಒದಗಿಸಬೇಕು. ಅವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಸೌಲಭ್ಯ ಕಲ್ಪಿಸಬೇಕು ಮತ್ತು 60 ವರ್ಷ ಮೇಲ್ಪಟ್ಟ ಕಲಾವಿದರಿಗೆ 2 ಸಾವಿರ ಮಾಸಾಸನ ನೀಡುವಂತೆ ಒತ್ತಾಯಿಸಿದರು.

ಮಠದ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತಿದ್ದ ಬಯಲಾಟ, ದೊಡ್ಡಾಟ, ಡಪ್ಪಿನಾಟ, ಇತರೆ ಜಾನಪದ ಕಲೆಗಳು ಎಲ್ಲಿಯೂ ಕಂಡು ಬರುತ್ತಿಲ್ಲ. ಆಧುನಿಕ ಹೊಡೆತದಿಂದ ಇವೆಲ್ಲ ನಶಿಸಿ ಹೋಗುತ್ತಿವೆ. ಇದಕ್ಕೆ ಪುನಃಶ್ಚೇತನ ನೀಡುವುದು ಇಂದಿನ ಅಗತ್ಯತೆ ಎಂದರು. ಕ್ಷೀ

Advertisement

ರಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಬಸವರಾಜ ಬಂಟನೂರ, ಯಮನೇಶ ಯಾಳಗಿ, ಶರಣುಕುಮಾರ ಜಾಲಳ್ಳಿ ಇತರರು ಸಂಗೀತ ನೀಡಿದರು. ಗ್ರಾಮೀಣ ಕಲಾವಿದರಿಂದ ಭಜನೆ, ಗೀಗೀ, ಲಾವಣಿ, ಕುಟ್ಟುವ, ಬೀಸುವ, ಸೋಬಾನೆ ಪದಗಳು ಅನಾವರಣಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next