ಇಂಡಿ: ಜಗತ್ತಿನಲ್ಲಿ ಇಂದು ಸುಮಾರು 40ಕ್ಕೂ ಹೆಚ್ಚು ದೇಶಗಳ 100ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಭಾಷೆಯನ್ನು ಬೋಧಿಸಲಾಗುತ್ತಿದೆ. ಜಗತ್ತಿನಲ್ಲಿ ಮಂದಾರಿನಿ ಮತ್ತು ಇಂಗ್ಲಿಷ್ ಭಾಷೆಗಳ ನಂತರ ಅತಿ ಹೆಚ್ಚು ಮಾತನಾಡುವ ಭಾಷೆ ಹಿಂದಿಯಾಗಿದೆ ಎಂದು ಹಿಂದಿ ವಿಭಾಗ ಸಹಾಯಕ ಪ್ರಾಧ್ಯಾಪಕ ಶ್ರೀಕಾಂತ ರಾಠೊಡ ಹೇಳಿದರು.
ಸೋಮವಾರ ಪಟ್ಟಣದ ಜಿ.ಆರ್. ಗಾಂಧಿ ಕಲಾ, ವೈ.ಎ. ಪಾಟೀಲ ವಾಣಿಜ್ಯ ಹಾಗೂ ಎಂ.ಎಫ್. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಹಿಂದಿ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜ. 10, 1975ರಲ್ಲಿ ಮೊದಲನೇ ವಿಶ್ವ ಹಿಂದಿ ಸಮ್ಮೇಳನ ಅಯೋಜಿಸಲಾಯಿತು. ಸಮ್ಮೇಳನದಲ್ಲಿ ಸುಮಾರು 30ಕ್ಕೂ ಹೆಚ್ಚು ದೇಶಗಳು ಪಾಲ್ಗೊಂಡಿದ್ದವು. ಇದರ ಸ್ಮರಣಾರ್ಥ ಮಾಜಿ ಪ್ರಧಾನಿ ಡಾ| ಮನಮೋಹನ ಸಿಂಗ್‌ರವರು 2006ರಲ್ಲಿ ಜ. 10ನೇ ತಾರೀಖು ವಿಶ್ವ ಹಿಂದಿ ದಿವಸವನ್ನಾಗಿ ಘೋಷಿಸಿದರು. ಹಿಂದಿ ಭಾಷೆಯನ್ನು ವಿಶ್ವಮಟ್ಟದಲ್ಲಿ ಪ್ರಚಾರ ಹಾಗೂ ಪ್ರಸಾರಗೊಳಿಸಿವುದು ಇದರ ಉದ್ದೇಶವಾಗಿದೆ ಎಂದರು.
ಪ್ರಾಚಾರ್ಯ ಎಸ್.ಬಿ. ಜಾಧವ ಮಾತನಾಡಿ, ಕನ್ನಡ ಭಾಷೆ ನಮ್ಮ ಮಾತೃಭಾಷೆಯಾಗಿದೆ. ಆದರೆ ಹಿಂದಿ ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದ್ದರಿಂದ ಕನ್ನಡದ ಜೊತೆಗೆ ಹಿಂದಿ ಭಾಷಾಜ್ಞಾನವನ್ನು ಹೊಂದುವುದು ಅನಿವಾರ್ಯವಾಗಿದೆ. ಕನ್ನಡ ಭಾಷೆ ಬಗ್ಗೆ ಸ್ವಾಭಿಮಾನ ಮತ್ತು ಹಿಂದಿ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಿಖತ ತೆನ್ನಳ್ಳಿ, ಸತೀಶ ರಾಠೊಡ, ಆಕಾಶ ಶಿಂಧೆ ಮಾತ ನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ| ಆನಂದ ನಡವಿನಮನಿ, ಡಾ| ವಿ.ಎ. ಕೋರವಾರ, ಡಾ| ಪಿ.ಕೆ. ರಾಠೊಡ, ಡಾ| ಸುರೇಂದ್ರ ಕೆ, ಶ್ರೀಶೈಲ, ಡಾ| ಸಿ.ಎಸ್. ಬಿರಾದಾರ, ಎಂ.ಆರ್. ಕೋಣದೆ, ಆರ್ .ಪಿ. ಇಂಗನಾಳ ಇದ್ದರು.