ಚನ್ನಪಟ್ಟಣ: ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಹಿರಿಯರ ಸೇವೆ ಮಾಡಿದಾಗ ಜನ್ಮ ಸಾರ್ಥಕವಾಗುತ್ತದೆ ಎಂದು ಕಾರ್ಮಿಕರ ಸಂಘದ ಅಧ್ಯಕ್ಷ ಪೇಟೇಚೇರಿ ಕರ್ಣತಮ್ಮ ಹೇಳಿದರು.
ತಾಲೂಕಿನ ದೇವರಹಳ್ಳಿ ಗ್ರಾಮದ ಶ್ರೀ ಶಿರಡಿ ಸಾಯಿಬಾಬಾ ವೃದ್ಧಾಶ್ರಮ ದಲ್ಲಿ ಆಯೋಜಿಸಲಾಗಿದ್ದ ತಮ್ಮ ಪುತ್ರನ ಹುಟ್ಟುಹಬ್ಬ ಆಚರಣೆ ಹಾಗೂ ವೃದ್ಧಾಶ್ರಮಕ್ಕೆ ಅಗತ್ಯವಿರುವ ದಿನಸಿ ಪದಾರ್ಥಗಳನ್ನು ಕೊಡುಗೆ ನೀಡಿ ಮಾತನಾಡಿದರು. ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳು ಹಲವಾರು ಸಿಹಿ-ಕಹಿಯನ್ನು ಅನುಭವಿಸಿರುವವರಾಗಿದ್ದು, ತಮ್ಮ ಬಲವೆಲ್ಲಾ ಕುಗ್ಗಿ, ನಿಶಕ್ತರಾದ ಸಂದರ್ಭದಲ್ಲಿ ಅವರನ್ನು ಮೂಲೆಗುಂಪು ಮಾಡಿ, ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ತಂದುಕೊಂಡಿದ್ದಾರೆ. ತಿಳಿದವರಿಂದಲೇ ಈ ರೀತಿಯ ಅಮಾನವೀಯ ವರ್ತನೆ ನಡೆಯುತ್ತಿರುವುದು ವಿಷಾದನೀಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಪ್ಪಿನ ಸಂದರ್ಭದಲ್ಲಿ ಮಕ್ಕಳು, ಮೊಮ್ಮಕ್ಕಳು ಆಸರೆಯಾಗಬೇಕು, ಬೀದಿ ಪಾಲಾದ ವೃದ್ಧರಿಗೆ ಸೂರು ಕಲ್ಪಿಸಿಕೊಟ್ಟಿರುವ ಹಾಗೂ ಹಿರಿಯರನ್ನು ಹೆತ್ತ ತಂದೆ ತಾಯಿಯಂತೆ ಜೋಪಾನ ಮಾಡುತ್ತಿರುವ ವೃದ್ಧಾಶ್ರಮದ ಮುಖ್ಯಸ್ಥರಿಗೆ ಅಭಿನಂದನೆ ಸಲ್ಲಿಸಲೇಬೇಕಿದೆ ಎಂದರು. ವೃದ್ಧಾಶ್ರಮಕ್ಕೆ ಸರ್ಕಾರದ ಯಾವುದೇ ರೀತಿಯ ನೆರವು ಇಲ್ಲದೆ ದಾನಿಗಳ ಸಹಾಯ, ಸಹಕಾರದಿಂದ ಆಶ್ರಮದ ವೃದ್ಧರಿಗೆ ನೀಡುವ ಗುಣಮಟ್ಟದ ಆಹಾರದಿಂದ ಉತ್ತಮ ಆರೋಗ್ಯದವರೆಗೂ ಕಾಳಜಿ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಮಾತೃಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗೇಶ್ ಮಾತನಾಡಿ, ವೃದ್ಧಾಶ್ರಮ ಹಿರಿಯರಧಾಮವಾಗಿ ನಿರ್ಮಾಣವಾಗುತ್ತಿದೆ. ತನ್ನವರ ಜೊತೆಗೂಡಿ ಸಂತಸದಿಂದ ಬದುಕು ಕೊನೆಗೊಳಿಸುವ ಸಂದಿಗ್ಧ ಕಾಲದಲ್ಲಿ, ತನ್ನವರಿಂದಲೇ ದೂರಾಗಿ ಹಿರಿಯರ ಧಾಮದಲ್ಲಿ ನೆಲ ಕಂಡಿರುವ ಜೀವಗಳಿಗೆ ಪ್ರತಿಯೊಬ್ಬರು ಸಾಧ್ಯವಾದಷ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಮಾಜ ಸೇವಕಿ ಮಮತಾ, ಸಂಘದ ನಿರ್ದೇಶಕ ಶ್ರೀನಿವಾಸ್ ಆರ್., ಶಿರಡಿ ಸಾಯಿಬಾಬಾ ವೃದ್ಧಾಶ್ರಮದ ಮುಖ್ಯಸ್ಥ ಹರೀಶ್ ಹೆಗ್ಗಡೆ, ಬಾರ್ ಬೈಂಡಿಂಗ್ ರಾಜು, ವೃದ್ಧಾಶ್ರಮದ ಮನು ಹಾಗೂ ಹಲವಾರು ಮಂದಿ ಹಾಜರಿದ್ದರು.