Advertisement

‘ಮಾತೃಭಾಷೆಯೊಂದಿಗೆ ಸಂಸ್ಕಾರವನ್ನೂ ರೂಢಿಸಿ’

12:56 PM Jun 02, 2018 | |

ಮೂಡಬಿದಿರೆ: ಕನ್ನಡವೆಂದರೆ ನಮ್ಮ ಹೆತ್ತ ತಾಯಿ. ಆಂಗ್ಲ ಭಾಷೆ ಮಲತಾಯಿ. ಭಾಷೆಯಾಗಿ ಇಂಗ್ಲಿಷ್‌ ಬಳಸಬಹುದು. ಆದರೆ ಕನ್ನಡವನ್ನು ತಿರಸ್ಕರಿಸಿ ಅಲ್ಲ. ಮಾತೃಭಾಷೆಯೊಂದಿಗೆ ಮಗು ಸಂಸ್ಕಾರವನ್ನೂ ರೂಢಿಸಿಕೊಂಡು ಬೆಳೆಯುವಂಥ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕಾಗಿದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.

Advertisement

ಕಡಲಕೆರೆಯ ಬಳಿ ಪ್ರೇರಣಾ ಶಿಶು ಮಂದಿರ ಹಾಗೂ 94 ವರ್ಷಗಳ ಇತಿಹಾಸವುಳ್ಳ ಸೈಂಟ್‌ ಇಗ್ನೇಶಿಯಸ್‌ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ ಶಿಲಾನ್ಯಾಸವನ್ನು ಶುಕ್ರವಾರ ನೆರವೇರಿಸಿದ ಅವರು, ‘ಸಾಧಕರು ತಮ್ಮ ಮಾತೃಭಾಷೆಯಲ್ಲೇ ಕಲಿತವರೆಂಬುದನ್ನು ಅರಿತರೆ ಆಂಗ್ಲ ಭಾಷಾ ಮಾಧ್ಯಮದ ಕುರಿತಾದ ಪೋಷಕರ ವ್ಯಾಮೋಹ ಕಡಿಮೆಯಾಗಲಿದೆ ಎಂದರು.

ಕರ್ನಾಟಕ ದಕ್ಷಿಣ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಸಂಘ ಚಾಲಕ್‌ ಡಾ| ವಾಮನ ಶೆಣೈ ದೀಕ್ಷಾ ವಿಧಿ ಪ್ರಬೋಧನೆಗೈದರು.

ಸಂಸದರ ನೆರವು
ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕಡಲಕೆರೆ ಶಾಲೆಗೆ ಈ ಹಿಂದೆ ಸಂಸದರ ನಿಧಿಯಿಂದ ರೂ. 2 ಲಕ್ಷ ನೀಡಿದ್ದು ಈಗ ಮತ್ತೆ 3ಲಕ್ಷ ರೂ. ಒದಗಿಸುವ ಜತೆಗೆ ಇತರ ಉದ್ಯಮಗಳ ಸಿಎಸ್‌ಆರ್‌ ನಿಧಿಯಿಂದಲೂ ಸಹಾಯಧನ ಒದಗಿಸಲಾಗುವುದು ಎಂದರು.

ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳು ಸೊರಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮಗೆಲ್ಲರಿಗೂ ಇದೆ ಎಂದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಹನೀಫ್‌ ಅಲಂಗಾರು ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಸೇವಾಂಜಲಿ ಎಜುಕೇಶನ್‌ ಟ್ರಸ್ಟ್‌ ಸಂಚಾಲಕ ಪ್ರೊ| ಎಂ. ವಾಸುದೇವ ಭಟ್‌ ಪ್ರಸ್ತಾವನೆಗೈದರು.

Advertisement

ರೂ. 25,000 ಕೊಡುಗೆ
ಉದ್ಯಮಿ ರಂಜಿತ್‌ ಪೂಜಾರಿ ಅವರು ನೂತನ ಕಟ್ಟಡ ನಿಧಿಗೆ ರೂ. 25,000ದ ಕೊಡುಗೆ ನೀಡಿದರು. ಪ್ರೇರಣಾ ಸೇವಾ ಟ್ರಸ್ಟ್‌ ಸಂಚಾಲಕ ಚೇತನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಬಿ. ಜಯರಾಮ ರಾವ್‌ ವಂದಿಸಿದರು.

ತಾಲೂಕಿಗೊಂದು ಆದರ್ಶ ಕನ್ನಡ ಶಾಲೆ 
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಯನ್ನು ವಾರ್ಷಿಕ 5 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಉಚಿತವಾಗಿ ನಡೆಸುತ್ತಿರುವ ತಮ್ಮ ಪ್ರಯತ್ನದ ಬಗ್ಗೆ ಬೆಳಕು ಚೆಲ್ಲಿ, ಸರಕಾರ ತಾಲೂಕಿಗೊಂದಾದರೂ ಆದರ್ಶವಾದ ಕನ್ನಡ ಶಾಲೆಯನ್ನು ತೆರೆದು ನಡೆಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next