ತೆಲಸಂಗ: ದೇಶಕ್ಕೆ ದೊಡ್ಡ ಆಸ್ತಿ ಆಗುವಂತೆ ಮಕ್ಕಳನ್ನು ತಯಾರು ಮಾಡುತ್ತೇವೆ ಅಂತ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದು ಹಾಲುಮತ ಸಮುದಾಯಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.
ಗ್ರಾಮದ ವಿಠರಾಯ ದೇವರ ಜಾತ್ರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಈ ಭೂಮಿ, ಗೋವು ಗೌರವಿಸುವ ನೆಲದಲ್ಲಿ ಭಯೋತ್ಪಾದಕರು ಬಂದು ಬಿಟ್ಟಿದ್ದಾರೆ. ನಮ್ಮ ಮಧ್ಯೆಯೇ ಇರುತ್ತಾರೆ. ಅವರಿಗೆ ಈ ನೆಲ ಜಲದ ಬಗ್ಗೆ ಗೌರವ ಇಲ್ಲ. ಭಾರತ್ ಮಾತಾಕಿ ಜೈ ಅಂತ ಹೇಳುವುದು ಗೊತ್ತಿಲ್ಲ. ಈಗ ಹಿಂದೂ ಸಮಾಜ ಸಂಘಟಿತವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಈ ದೇಶದ ಗೋವು, ಭೂಮಿ, ದೇವಸ್ಥಾನ ರಕ್ಷಿಸಿ ಉಳಿಸುವ ಶಕ್ತಿವಂತ ಸಂಸ್ಕಾರವಂತ ಮಕ್ಕಳಿಗೆ ಶಿಕ್ಷಣ ಕೊಡಿಸಿ ಬೆಳೆಸಿರಿ ಎಂದು ಸಲಹೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಮಾತನಾಡಿ, ತೆಲಸಂಗದಲ್ಲಿ ಹಾಲುಮತ ಸಮುದಾಯದ ಕಲ್ಯಾಣಮಂಟಪ ನಿರ್ಮಾಣಕ್ಕೆ 25ಲಕ್ಷ ಅನುದಾನ ಸೇರಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಕೊಡಿಸುವ ಪ್ರಯತ್ನ ಮಾಡಲಾಗುವುದು. ಎಂ.ಟಿ.ಬಿ.ನಾಗರಾಜ ಮತ್ತು ಭೈರತಿ ಬಸವರಾಜ ನಮ್ಮ ಪಕ್ಷಕ್ಕೆ ಬಂದಿದ್ದರಿಂದ ಪಕ್ಷಕ್ಕೆ ಆನೆಬಲ ಬಂದಿದೆ. ನಂಬಿಗಸ್ತ ಹಾಲುಮತ ಸಮುದಾಯದ ಧರ್ಮದ ಪೆಟ್ಟಿಗೆಯಲ್ಲಿ ನಾವೆಲ್ಲ ಇದ್ದೇವೆ. ನಿಮ್ಮೆಲ್ಲರಿಗೂ ಶಿಕ್ಷಣ, ಮೂಲ ಸೌಕರ್ಯ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಅತಿ ಪ್ರಾಮಾಣಿಕವಾಗಿ ಮಾಡುತ್ತೇವೆ. ಪ್ರತಿ ಹಂತದಲ್ಲಿಯೂ ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, ಕುರುಬ ಸಮುದಾಯದಲ್ಲಿ ದೇವರನ್ನು ವಿವಿಧ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ಒಂದು ಕುರಿ 9 ಲಕ್ಷ ಬೆಲೆ ಬಾಳುತ್ತದೆ ಎಂಬುದನ್ನು ಕೇಳಿ ಆಶ್ಚರ್ಯಪಟ್ಟೆ. ಕೋವಿಡ್ ಕಾರಣದಿಂದಾಗಿ ಜಾತ್ರೆಯನ್ನು ಮಾಡಿರಲಿಲ್ಲ. 21 ಹಳ್ಳಿಗಳಿಂದ ಒಂದೇಡೆ ಸೇರಿ ದೇವರ ಆರಾಧನೆ ಮಾಡುತ್ತಿದ್ದೀರಿ. ಮನುಷ್ಯನಿಗೆ ಶಾಂತಿ ನೆಮ್ಮದಿ ಬೇಕು ಅಂತಾದರೆ ಜಾತ್ರೆ ದೇವರ ಆರಾಧನೆಗಳು ಅತ್ಯವಶ್ಯವಾಗಿ ಬೇಕೇ ಬೇಕು ಎಂದರು.
ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಮಾತನಾಡಿ, ಎಲ್ಲ ಸಮುದಾಯದವರು ಸೇರಿ ಮಾಡುತ್ತಿರುವ ಜಾತ್ರೆ ಮನುಕುಲಕ್ಕೆ ಮಾದರಿ ಆಗಿದೆ. ಅನಾದಿಕಾಲದಿಂದಲೂ ಆಚರಿಸಿಕೊಂಡ ಬಂದ ಹಿಂದೂ ಸಪ್ರಾದಾಯನ್ನು ಮುಂದುವರೆಸಿಕೊಂಡು ಬಂದಿದ್ದೇವೆ. ಹೆಸರು ಬೇರೆ ಬೇರೆ ಇದ್ದರೂ ದೇವರು ಒಬ್ಬನೆ. 60 ಲಕ್ಷ ಜನಸಂಖ್ಯೆ ಹೊಂದಿದೆ. ಹಾಲುಮತದ ಆರಾಧ್ಯದೇವರು ಈಶ್ವರ. ಮನುಷ್ಯರಾಗಿ ಹುಟ್ಟಿ ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆದು ದೇವರಾಗಿದ್ದಾರೆ. ಅವರ ಹಾದಿಯಲ್ಲಿ ನಡೆಯುವ ಮೂಲಕ ಧನ್ಯತೆ ಹೊಂದೋಣ ಎಂದರು.
ಹಣಮಾಪೂರದ ಅಮರೇಶ್ವರ ಮಹಾರಾಜರು, ಸರೂರದ ರೇವಣಸಿದ್ಧ ಸ್ವಾಮೀಜಿ, ಜಕನೂರದ ಮಾದುಲಿಂಗ ಮಹಾರಾಜರು, ತೆಲಸಂಗದ ಬಸವ ಗುಂಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕರು, ಗಣ್ಯರು, ವಿವಿಧ ಪಕ್ಷಗಳ ಮುಖಂಡರು, ಹಾಲುಮತ ಸಮುದಾಯದ ಮುಖಂಡರು ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನು ಪುಡಿ ಮಾಡಿ ಮಸೀದಿ ಕಟ್ಟಿದ್ದಾರೆ. ಬೇರೆ ಮಸೀದಿ ಕಟ್ಟಿಕೊಳ್ಳಲಿಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಬೀಳಿಸಿರುವ ಒಂದೇ ಒಂದು ದೇವಸ್ಥಾನವನ್ನು ಬಿಡಲ್ಲ. ಮಸೀದಿ ಮಾಡಿಕೊಂಡಿರುವ 36 ಸಾವಿರ ದೇವಸ್ಥಾನಗಳನ್ನು ಕಾನೂನುಬದ್ಧವಾಗಿ ವಶಪಡಿಸಿಕೊಳ್ಳುತ್ತೇವೆ. –
ಕೆ.ಎಸ್. ಈಶ್ವರಪ್ಪ. ಮಾಜಿ ಉಪಮುಖ್ಯಮಂತ್ರಿ