ಮಡಿಕೇರಿ : ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರೆಭಾಷೆ ಸಂಸ್ಕೃತಿ, ಆಚಾರ, ವಿಚಾರಗಳಿಗೆ ತನ್ನದೇ ಆದ ಇತಿಹಾಸವಿದ್ದು, ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕೆಂದು ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಂ ಅವರು ಕರೆ ನೀಡಿದ್ದಾರೆ.
ಅಕಾಡೆಮಿ ವತಿಯಿಂದ ಮುತ್ತಾ ರುಮುಡಿ ಗ್ರಾಮದಲ್ಲಿ ನಡೆದ ಅರೆಬಾಸೆ ಸಂಸ್ಕೃತಿ ಜನಪದ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯವೆಂದರು.
ಅರೆಭಾಷೆ ಸಂಸ್ಕೃತಿ ವಿಶಿಷ್ಟವಾದ ಹಿನ್ನೆಲೆಯನ್ನು ಹೊಂದಿದ್ದು, ಯುವ ಸಮೂಹ ಮೂಲ ಸಂಸ್ಕೃತಿಯ ಬಗ್ಗೆ ಆಸಕ್ತಿ ವಹಿಸಬೇಕೆಂದು ಜಯರಾಂ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಹಿರಿಯರು ಉಳಿಸಿಕೊಂಡ ಬಂದಿರುವ ಅರೆಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಬೆಳೆಸಿಕೊಂಡು ಹೋಗುವ ಅಗತ್ಯವಿದೆ ಎಂದರು. ಇಂದು ಅನೇಕ ಭಾಷೆಗಳು ಅವನತಿ ಹೊಂದಲು ಕಾರಣ ಭಾಷೆಯನ್ನು ಮಾತಾಡುವವರ ಸಂಖ್ಯೆ ಕಡಿಮೆಯಾದರಿಂದ ಎಂದು ಅವರು ಹೇಳಿದರು.
ಮುತ್ತಾರುಮುಡಿ ಗ್ರಾಮಸ್ಥರು, ಭಗವತಿ ಯುವಕ ಸಂಘ, ಭಗವತಿ ಮಹಿಳಾ ಮಂಡಳಿ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಕುರಿತ ಉಪನ್ಯಾಸ, ಸಾಧಕರಿಗೆ ಸಮ್ಮಾನ, ಅರೆಭಾಷೆ ಸಂಸ್ಕೃತಿಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಹಿರಿಯರಾದ ಪಾರೆಮಜಲು ಗಂಗಮ್ಮ ದೇವಯ್ಯ, ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷೆ ಕಲ್ಲುಮುಟ್ಲು ಜಮುನಾ ಸೋಮಯ್ಯ ಮತ್ತಿತರ ಪ್ರಮುಖರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.