ಕೆ.ಆರ್.ನಗರ: ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಸಾರ್ವಜನಿಕರು ಬ್ಯಾಂಕ್‌ಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಟೋಕನ್ ಪಡೆಯಲು ಒಂದು ದಿನ ಮತ್ತು ನೋಂದಣಿ ಹಾಗೂ ತಿದ್ದುಪಡಿ ಪ್ರಕ್ರಿಯೆಗೆ ಮತ್ತೂಂದು ದಿನ ಬರಬೇಕಿರುವುದರಿಂದ ಜನರು ರೋಸಿ ಹೋಗಿದ್ದಾರೆ. ಬ್ಯಾಂಕ್‌ಗಳ ಮುಂದೆ ಬೆಳಗಿನ ಜಾವ ಕೊರೆಯುವ ಚಳಿಯಲ್ಲೂ ಕ್ಯೂ ನಿಲ್ಲುತ್ತಿದ್ದಾರೆ. ಕೆ.ಆರ್.ನಗರದ ಕರ್ನಾಟಕ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್‌ಗಳ ಮುಂದೆ ಬೆಳಗ್ಗೆ 5 ಗಂಟೆಗೆ ವೃದ್ಧರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ತಮ್ಮ ಕೆಲಸಗಳು ಸರಾಗವಾಗಿ ಆಗದಿರುವುದರಿಂದ ನೊಂದ ಜನರು ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿದೆ.
ಇದರ ಜೊತೆಗೆ ಬ್ಯಾಂಕ್ ಸಿಬ್ಬಂದಿ ಕೂಡ ಸಾರ್ವಜನಿಕರೊಂದಿಗೆ ಸಭ್ಯತೆಯಿಂದ ವರ್ತಿಸಿ, ಆಧಾರ್ ಕಾರ್ಡ್ ಸಂಬಂಧಿತ ಕೆಲಸ ಮಾಡಿಕೊಡದಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಆದರೂ ಈ ಪರದಾಟವನ್ನು ತಪ್ಪಿಸಿ, ಸುಗಮವಾಗಿ ಆಧಾರ್ ಕಾರ್ಡ್ ಪಡೆಯುವಂತೆ ಮಾಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಆಧಾರ್ ನೋಂದಣಿಗೆ ಹೆಚ್ಚುವರಿ ಕೇಂದ್ರಗಳನ್ನು ತೆರೆಯದಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಸೌಲಭ್ಯ, ಸಹಾಯ ಧನ ಮತ್ತಿತರ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದಕ್ಕಾಗಿ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ನೋಂದಣಿ ಕೇಂದ್ರಗಳಲ್ಲಿ ಮುಗಿ ಬೀಳುತ್ತಿದ್ದಾರೆ. ಸಕಾಲದಲ್ಲಿ ಕೆಲಸ ಆಗದಿರುವುದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಧಾರ್ ಕಾರ್ಡ್ ನೋಂದಣಿ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚುವರಿ ಕೇಂದ್ರಗಳನ್ನು ತೆರೆಯಬೇಕು. ಸುಗಮವಾಗಿ ಕೆಲಸ ಕಾರ್ಯ ಆಗುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ ಕೇವಲ ಆಧಾರ್ ಕಾರ್ಡ್ ಮಾಡಿಸಲು ಮತ್ತು ಅವುಗಳ ಲೋಪ ಸರಿಪಡಿಸಲು ಜನರು ಮುಂಜಾನೆಯೇ ಬ್ಯಾಂಕ್ ಮತ್ತು ಅಂಚೆ ಕಚೇರಿಯ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
– ಎ.ಪಿ.ನಾಗರಾಜೇಗೌಡ, ಅರ್ಜುನಹಳ್ಳಿ
-ಗೇರದಡ ನಾಗಣ್ಣ