ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿ ರುವುದು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಬೆನ್ನಲ್ಲೇ ಇದೀಗ ಕಮರ್ಷಿಯಲ್ ಟ್ಯಾಕ್ಸ್ ಇನ್ ಸ್ಪೆಕ್ಟರ್ (ಸಿಟಿಐ) ಹುದ್ದೆ ನೇಮಕಾತಿಗೆ ನಡೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ ಸಬ್ ಇನ್‌ಸ್ಪೆಕ್ಟರ್‌ವೊಬ್ಬರು ಪ್ರಶ್ನೆ ಪತ್ರಿಕೆ ನೀಡುವ ಆಮಿಷವೊಡ್ಡಿ ದುಡ್ಡಿಗೆ ಬೇಡಿಕೆಯಿಟ್ಟಿರುವ ಆರೋಪ ಕೇಳಿ ಬಂದಿದೆ.
ಇದರ ಬೆನ್ನಲ್ಲೆ ಸಿಸಿಬಿ ಪೊಲೀಸರು ಪಿಎಸ್‌ಐ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಮರ್ಷಿಯಲ್ ಟ್ಯಾಕ್ಸ್ ಇನ್‌ಸ್ಪೆಕ್ಟರ್ ಪರೀಕ್ಷೆಗೆ ಸಂಬಂ ಧಿಸಿದಂತೆ ಇಂಟೆಲಿಜೆನ್ಸ್ ವಿಭಾಗದಲ್ಲಿ ಸಬ್ ಇನ್‌ಸ್ಪೆಕ್ಟರ್ ವೊಬ್ಬರು ಪ್ರಶ್ನೆ ಪತ್ರಿಕೆ ನೀಡುವುದಾಗಿ ಕೆಲವು ಪರೀಕ್ಷಾರ್ಥಿಗಳಿಗೆ ಆಮಿಷವೊಡ್ಡಿ ದುಡ್ಡಿಗೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಪಿಎಸ್‌ಐ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಪ್ರಶ್ನೆ ಪತ್ರಿಕೆ ನಾವೇ ಕೊಡುತ್ತೇವೆ. ಪೋಸ್ಟಿಂಗ್ ಸಹ ಕೊಡಿಸುತ್ತೇವೆ ಎಂದು ಪಿಎಸ್‌ಐ ಹೇಳಿದ್ದಾರೆ ಎನ್ನಲಾಗಿದೆ.
ಇದರ ಜತೆಗೆ ಪಿಎಸ್‌ಐ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ನೀಡುವುದಾಗಿ ಪಿಎಸ್‌ಐ ಪರೀಕ್ಷಾರ್ಥಿಗಳಿಗೆ ಆಮಿಷವೊಡ್ಡಿರುವ ಆರೋಪ ಕೇಳಿ ಬಂದಿದೆ.
ಆಡಿಯೋ ವೈರಲ್: ಸಬ್ ಇನ್‌ಸ್ಪೆಕ್ಟರ್ ಮಾತನಾಡಿದ್ದ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಸಿಸಿಬಿ ಪೊಲೀಸರು ಆ ಪಿಎಸ್‌ಐಯನ್ನು ವಶಕ್ಕೆ ಪಡೆದು ಸ್ಪಷ್ಟೀಕರಣ ಪಡೆಯಲು ಮುಂದಾಗಿದ್ದಾರೆ. ಆಡಿಯೋ ಹಾಗೂ ವಾಟ್ಸ್‌ಆ್ಯಪ್ ಚಾಟಿಂಗ್ ವಿಚಾರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಪರೀಕ್ಷಾರ್ಥಿಗಳು : ಇದರ ಬೆನ್ನಲ್ಲೇ ಪರೀಕ್ಷಾರ್ಥಿಗಳು ಹಾಗೂ ಕೆಲ ಸಾರ್ವಜನಿಕರು ಶುಕ್ರವಾರ ಚಂದ್ರಾ ಲೇಔಟ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಅಕ್ರಮವೆಸಗಲು ಮುಂದಾಗಿರುವ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುಂತೆ ಒತ್ತಾಯಿಸಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿ ಹಣಕ್ಕೆ ಬೇಡಿಕೆ, ಪರೀಕ್ಷೆ ವಿಚಾರವಾಗಿ ಡೀಲ್ ನಡೆಸುವ ಬಗ್ಗೆ ಸಬ್ ಇನ್ ಸ್ಪೆಕ್ಟರ್ ಸಂಭಾಷಣೆ ನಡೆಸಿ, ವಾಟ್ಸ್ ಆ್ಯಪ್ ಚಾಟ್ ಸಹ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಜ.21ರಂದು ಕಮರ್ಷಿಯಲ್ ಟ್ಯಾಕ್ಸ್ ಇನ್ ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ನಡೆಸಲಾಗುತ್ತಿದೆ. 1.60 ಲಕ್ಷ ಅಭ್ಯರ್ಥಿಗಳು ಸಿಟಿಐ ಪರೀಕ್ಷೆ ಬರೆಯಲಿದ್ದಾರೆ. ಜ.23ರಂದು ಪಿಎಸ್‌ಐ ಪರೀಕ್ಷೆ ನಡೆಯಲಿದೆ. ಎರಡೂ ಪರೀಕ್ಷೆಗಳ ಅಕ್ರಮಕ್ಕೆ ಸಂಚು ರೂಪಿಸುವ ಆರೋಪ ಕೇಳಿ ಬಂದಿದೆ.