ಬೆಂಗಳೂರು : ಸದ್ಯ ಹಾನಗಲ್-ಸಿಂದಗಿ ಉಪಚುನಾವಣೆಯ ಕಾವು ಜೋರಾಗಿಯೇ ಇದೆ. ಇದೇ ಹಿನ್ನೆಲೆಯಲ್ಲಿ ನಾಯಕರ ನಡುವೆ ಆರೋಪ ಪ್ರತ್ಯಾರೋಗಳು ಕೂಡ ಜೋರಾಗಿಯೇ ಸದ್ದು ಮಾಡುತ್ತಿವೆ. ಇನ್ನು ಕಂಬಳಿ, ಕುರಿ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಸಿಂದಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಂಬಳಿ ಹೊತ್ತುಕೊಳ್ಳಲು ಯೋಗ್ಯತೆ ಬೇಕು, ನೀನು ಎಂದಾದರೂ ಕುರಿ ಕಾಯ್ದಿಯಾ ಎಂದು ಬೊಮ್ಮಾಯಿ ವಿರುದ್ದ ಹರಿಹಾಯ್ದಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಈದೇ ವಿಚಾರವಾಗಿ ಟ್ವೀಟ್ ಮಾಡಿರುವ ಸಿ.ಟಿ ರವಿ, ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? ಎಂದಿದ್ದಾರೆ.
ಇನ್ನು ಮೈಸೂರಿನಲ್ಲಿ ಮಾತನಾಡಿದ್ದ, ಹೆಚ್ ವಿಶ್ವನಾಥ್, ಕಾಗಿನೆಲೆ ಪೀಠಕ್ಕೆ ಯಾರೇ ಹೋದರೂ ಕಂಬಳಿ ಹೊದಿಸಿ ಗೌರವ ತೋರಿಸುತ್ತಾರೆ. ಅದೇ ರೀತಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಹೊದಿಸಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದಲ್ಲ. ಅದನ್ನೇ ಸಿದ್ದರಾಮಯ್ಯ ಬಹಳ ದೊಡ್ಡ ಅಪರಾಧ ಎನ್ನುವಂತೆ ಮಾತಾಡುತ್ತಿದ್ದಾರೆ” ಎಂದು ದೂರಿದರು.