ಚಿಕ್ಕಮಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬರುವ ಕುರಿತು ಸಿ.ಎಂ ಸಿದ್ದರಾಮಯ್ಯ ಹೇಳಿಕೆ ವಿದ್ಯಾರ್ಥಿಗಳಲ್ಲಿ ಕೋಮುವಾದ ಬಿತ್ತುವ ಹುನ್ನಾರವಾಗಿದ್ದು, ಮತ ಓಲೈಕೆ ಕೋಮುವಾದದ ನಿರ್ಣಯ ಕೈಗೊಂಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ ರವಿ ಟೀಕಿಸಿದ್ದಾರೆ .
ಬಿಜೆಪಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧ ಮಾಡಿರಲಿಲ್ಲ, ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಇರಬೇಕು ಎಂದು 1964ರ ಶಿಕ್ಷಣ ಕಾಯ್ದೆ ಪ್ರಕಾರ ನಿಯಮಾವಳಿಗಳನ್ನು ರೂಪಿಸಿದ ನಂತರದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ. ಆಯಾ ಶಾಲಾ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಯಾವ ರೀತಿಯ ವಸ್ತ್ರಗಳನ್ನು ವಿನ್ಯಾಸಗೊಳಿಸಬೇಕು ಎಂದು ನಿರ್ಣಯ ಮಾಡಬೇಕು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಾಲಾ ಅಭಿವೃದ್ಧಿ ಸಂಸ್ಥೆ ಅವರು ಯಾವ ರೀತಿಯ ವಸ್ತ್ರವಿನ್ಯಾಸವನ್ನು ನಿರ್ಣಯ ಮಾಡಬೇಕು ಎಂದು ಸ್ಪಷ್ಟವಾಗಿ ಕಾಯ್ದೆಯಲ್ಲಿ ಹೇಳಿದೆ ಎಂದರು.
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಡವ ಶ್ರೀಮಂತ ಎಂಬ ಭೇದಭಾವ ಬರಬಾರದು. ನಾವೆಲ್ಲರೂ ಒಂದೇ ಎಂಬ ಮನೋಭಾವ ಅವರಲ್ಲಿ ಮೂಡಬೇಕು ಎಂಬ ಉದ್ದೇಶದಿಂದ ಈ ಯೋಜನೆಯ ಜಾರಿ ಮಾಡಿದ್ದಾರೆ. ಹಿಜಾಬ್ ಎಂಬುದು ಸಮವಸ್ತ್ರದ ಭಾಗವಾಗಿದ್ದಲ್ಲಿ ಅದನ್ನ ಧರಿಸಬಹುದು. ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಣಯ ವಸ್ತ್ರ ಇರಬೇಕು ಎಂಬ ಶಿಕ್ಷಣ ತಜ್ಞರ ಅಪೇಕ್ಷೆಗೆ ವಿರುದ್ಧವಾಗುತ್ತದೆ ಎಂದು ಹೇಳಿದರು.
ಮತದ ಓಲೈಕೆಗೆ, ಓಟಿನ ಆಸೆಗಾಗಿ ಕೋಮುವಾದ ನಿರ್ಣಯವನ್ನು ತೆಗೆದು ಕೊಂಡರೆ, ಇನ್ನೊಬ್ಬರು ಮತ್ತೊಂದು ಬಣ್ಣದ ಶಾಲನ್ನು, ಟೋಪಿ ಧರಿಸಿ ಬರುವುದಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮುವಾದದ ಭಾವನೆ ಹೆಚ್ಚಿಸಿದಂತಾಗುತ್ತದೆ ಅಲ್ಲದೆ ವಿದ್ಯಾರ್ಥಿಗಳಲ್ಲಿ ಜಾತಿ ಎಂಬ ವಿಷ ಬೀಜವನ್ನು ಬಿತ್ತಿದಂತಾಗುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜವಾದಿ ಹಿನ್ನೆಲೆಯಿಂದ ಬಂದವನು ಎಂದು ಹೇಳುತ್ತಿರುತ್ತಾರೆ, 220ಕ್ಕೂ ಹೆಚ್ಚು ತಾಲೂಕುಗಳು ಬರದಿಂದ ತತ್ತರಿಸಿವೆ, ಎಷ್ಟೋ ತಾಲೂಕುಗಳಲ್ಲಿ ಕುಡಿಯುವ ನೀರಿಲ್ಲ ಇಂತಹ ಸಂದರ್ಭದಲ್ಲಿ ಸಮಾಜವಾದಿ ಹಿನ್ನೆಲೆಯ, ಕುರಿ ಮೇಯಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಐಷಾರಾಮಿ ಖಾಸಗಿ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಮಾಡುತ್ತಾರೆ. ಐಷಾರಾಮಿ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಅಷ್ಟೇ ಅಲ್ಲ, ಸಂಕಷ್ಟದಲ್ಲಿರುವ ರೈತರಿಗೆ, ಇನ್ನಷ್ಟು ಸಂಕಷ್ಟ ಬರಲಿ ಎಂಬ ರೀತಿಯಲ್ಲಿ ಅವರ ಸಚಿವ ಸಂಪುಟದ ಸಚಿವರು ವಿಡಿಯೋ ಮಾಡಿ ನಮ್ಮ ವಿಮಾನ ಹೇಗಿದೆ ಎಂದು ತೋರಿಸುತ್ತಾರೆ. ಇದು ಸಂಭ್ರಮ ಪಡುವಂತಹ ಕಾಲವೇ? ಎಂದು ಪ್ರಶ್ನೆ ಮಾಡಿದರು.