ಬೆಂಗಳೂರು: ಸಿದ್ದರಾಮಯ್ಯನವರಿಗೆ ಜೆಡಿಎಸ್ ಮನೆಯೊಳಗೆ ಇಣುಕಿ ನೋಡುವ ಕೆಟ್ಟ ಚಾಳಿ ಯಾಕೆ ಬಂತು? ಇನ್ನೊಬ್ಬರ ಮನೆಯ ಅಡುಗೆ ಹಾಗೂ ಇನ್ನೊಬ್ಬರ ಬೆಡ್ ರೂಮಿನಲ್ಲಿ ಇಣುಕಿ ನೋಡುವುದು ಸರಿಯಲ್ಲ. ನಾವು ನಮ್ಮ ಮಸಾಲೆ ಸಿದ್ದ ಪಡಿಸಿ ಅಡಿಗೆ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಮಾತನಾಡಿದ ಅವರು, ಜೆಡಿಎಸ್ ಅಲ್ಪ ಸಂಖ್ಯಾತರಿಗೆ ಟಿಕೆಟ್ ಕೊಡುವುದು ಅವರ ಪಕ್ಷದ ನಿರ್ಧಾರ. ಜೆಡಿಎಸ್ ನವರು ಯಾರಿಗೆ ಟಿಕೆಟ್ ಕೊಡಬೇಕೆಂದು ನಾವು ಹೇಳಲಾಗುವುದಿಲ್ಲ. ಜೆಡಿಎಸ್- ಕಾಂಗ್ರೆಸ್ ನವರು ಒಟ್ಟಿಗೆ ಚುನಾವಣೆ ಮಾಡಿದರೂ ಅವರು ಗೆಲ್ಲುವುದಿಲ್ಲ. ನಾವು ಪಾಸಿಟಿವ್ ಚುನಾವಣೆ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಪಂಜಾಬ್ ನಲ್ಲಿ ದಲಿತ ಸಿಎಂ ಆಯ್ಕೆ ಕಾಂಗ್ರೆಸ್ ನ ದಿಟ್ಟ ನಿರ್ಧಾರ: ಮಲ್ಲಿಕಾರ್ಜುನ ಖರ್ಗೆ
ನಾವು ನಮ್ಮ ಪಕ್ಷದ ಸಾಧನೆ ಆಧಾರದಲ್ಲಿ ಚುನಾವಣೆ ಮಾಡುತ್ತೇವೆ. ಬಿಜೆಪಿ ಯಾವುದೇ ಪಕ್ಷವನ್ನು ನಂಬಿ ಚುನಾವಣೆ ಎದುರಿಸುವುದಿಲ್ಲ. ನಾವು ನಮ್ಮದೇ ಆದ ರೀತಿಯಲ್ಲಿ ಚುನಾವಣೆ ನಡೆಸುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷರು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿ ಕೊಡುತ್ತಾರೆ. ಪಕ್ಷದ ಆಂತರಿಕ ಸಮೀಕ್ಷೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸುತ್ತಾರೆ. ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತದೆ ಎಂದರು.
ಉಪ ಚುನಾವಣೆ, ಸಂಘಟನಾತ್ಮಕವಾಗಿ ಚಿಂತನ ಶಿಬಿರ ಏರ್ಪಡಿಸಲು ಇಂದಿನ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಎರಡು ವಿಧಾನಸಭಾ ಉಪ ಚುನಾವಣೆ ಗೆಲ್ಲುವುದು ನಮ್ಮ ಮೊದಲ ಆದ್ಯತೆ. ಚುನಾವಣಾ ಉಸ್ತುವಾರಿಯನ್ನು ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದು ಸಿ.ಟಿ.ರವಿ ಮಾಹಿತಿ ನೀಡಿದರು.