ಕೋಲಾರ: ಎಲ್ಲ ಕಾಲಕ್ಕೂ ಲಾಟರಿ ಹೊಡೆಯುತ್ತದೆ ಎಂದು ಎಚ್‌ಡಿಕೆ ಭಾವಿಸಬಾರದು. ಅವರ ಪಕ್ಷಕ್ಕೆ ಜಾತ್ಯತೀತ ಜನತಾದಳ ಹೆಸರಿನ ಬದಲು ಜಾತೀಯವಾದಿ ಜನತಾದಳ ಎಂದಿಟ್ಟುಕೊಳ್ಳಲಿ. ಜಾತಿಯ ದ್ವೇಷ ಮತ್ತು ಜಾತ್ಯತೀತತೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.
ಎಸ್ಸಿ ಸಮಾವೇಶಕ್ಕೆಂದು ಆಗಮಿಸಿದ್ದ ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಏನೇ ತಿಪ್ಪರಲಾಗ ಹಾಕಿದರೂ ಪ್ರತಿಸಲ ಲಾಟರಿ ಹೊಡೆಯೊಲ್ಲ. ಕೆಲವೊಮ್ಮೆ ಅವರಿಗೆ ಲಾಟರಿ ಹೊಡೆದಿದೆ. 2006 ಮತ್ತು 2018ರಲ್ಲಿ ಲಾಟರಿ ಹೊಡೆದಿದೆ. ಪ್ರತಿಸಲ ಲಾಟರಿ ಹೊಡೆದರೆ ಪ್ರಜಾಪ್ರಭುತ್ವ ದುರ್ಬಲ ಆಗುತ್ತದೆ ಎಂದರು.
ಪ್ರತಿ ಚುನಾವಣಾ ಸಮೀಕ್ಷೆಗಳು ಮತ್ತು ಕೋಡಿಮಠದ ಶ್ರೀಗಳ ಭವಿಷ್ಯದವರೆಗೂ ಎಲ್ಲರೂ ಸಂಪೂರ್ಣ ಬಹುಮತ ಎಂತಲೇ ಹೇಳಿದ್ದಾರೆ. ಎಲ್ಲಾ ಕಾಲಕ್ಕೂ ಲಾಟರಿ ಹೊಡೆಯುತ್ತದೆ ಎಂದು ಕುಮಾರಸ್ವಾಮಿ ಭಾವಿಸಬಾರದು ಎಂದು ವ್ಯಂಗ್ಯವಾಡಿದರು.
ಜಾತಿ ರಾಜಕಾರಣ ಇಲ್ಲ: ನಮ್ಮ ಪಕ್ಷದಲ್ಲಿ ಜಾತಿ ಹೆಸರು ಹೇಳಿಕೊಂಡು ರಾಜಕಾರಣ ಮಾಡಲ್ಲ. ನಮ್ಮ ಪಕ್ಷದಲ್ಲಿ ಕಾರ್ಯಕ್ಷಮತೆ ಪ್ರಕಾರ ಯಾವ ಎತ್ತರಕ್ಕೆ ಬೇಕಾದರೂ ಬೆಳೆಯಬಹುದು. ನರೇಂದ್ರ ಮೋದಿಯವರು ನಾಲ್ಕು ಬಾರಿ ಸಿಎಂ ಮತ್ತು ಎರಡು ಬಾರಿ ಪಿಎಂ ಆಗಿದ್ದು ಜಾತಿ ಹೆಸರು ಹೇಳಿಕೊಂಡಿದ್ದರಿಂದ ಅಲ್ಲ. ಅವರೆಲ್ಲಾದರೂ ಜಾತಿ ಹೆಸರು ಹೇಳಿ ರಾಜಕಾರಣ ಮಾಡಿದ್ದಾರೆಯೆ? ಅಷ್ಟಕ್ಕೂ ಅವರ ಜಾತಿ ಹುಡುಕುವುದಾದರೆ ಅವರು ಅತೀ ಸಣ್ಣಸಂಖ್ಯೆಯ ಜಾತಿಯಿಂದ ಬಂದವರು ಎಂದರು.
ಆಲೂಗಡ್ಡೆ ನಾಟಿ ಮಾಡಿ ಚಿನ್ನ: ಡಿ.ಕೆ.ಶಿವಕುಮಾರ್ ಮಗಳಿಗೆ ಇಡಿ ನೋಟಿಸ್ ಜಾರಿ ಕುರಿತು ಪ್ರತಿಕ್ರಿಯಿಸಿದ ಸಿ.ಟಿ.ರವಿ, ಪ್ರಾಮಾಣಿಕರಿಗೆ ಇಡಿ ಭಯ ಅಗತ್ಯವಿಲ್ಲ. ಅವರ ನಾಯಕ ರಾಹುಲ್ ಗಾಂಧಿಗೆ ಅಲೂಗಡ್ಡೆ ಹಾಕಿ ಚಿನ್ನ ತೆಗೆಯಲು ಗೊತ್ತಿದೆ, ಅದಕ್ಕೆ ಇಡಿಯವರು ನೋಟಿಸ್ ನೀಡಿದ್ದಾರೆ. ಆಲೂಗಡ್ಡೆ ನಾಟಿ ಮಾಡಿ ಚಿನ್ನ ಬೆಳೆಯುವುದನ್ನು ರಾಹುಲ್‌ಗಾಂಧಿ, ಡಿ.ಕೆ.ಶಿವಕುಮಾರ್ ಮತ್ತು ರಾಬರ್ಟ್ ವಾದ್ರಾ ಅವರಿಗೆ ಮಾತ್ರ ಹೇಳಿಕೊಟ್ಟಿದ್ದಾರೆ. ಈ ವಿದ್ಯೆ ರೈತರಿಗೂ ಹೇಳಿಕೊಟ್ಟಿದ್ದರೆ, ಇದರಿಂದ ರೈತರೂ ಚಿನ್ನ ಬೆಳೆದಿದ್ದರೆ, ಇಂದು ಡಿ.ಕೆ.ಶಿವಕುಮಾರ್‌ಗೆ ಇಡಿ ಸಮಸ್ಯೆ ಎದುರಾಗುತ್ತಲೇ ಇರಲಿಲ್ಲ ಎಂದು ಲೇವಡಿ ಮಾಡಿದರು.