Advertisement

ಅಧಿಕಾರದಲ್ಲಿದ್ದಾಗ ವರದಿ ಜಾರಿಗೊಳಿಸದೆ ಕಡಲೇಕಾಯಿ ತಿನ್ನುತ್ತಿದ್ದರೆ: ಸಿ.ಟಿ.ರವಿ

09:19 AM Feb 13, 2020 | sudhir |

ಬೆಂಗಳೂರು: ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಸರ್ಕಾರ ಬದ್ಧತೆ ತೋರಿಸಿದೆ. ಆದರೆ ವರದಿ ಜಾರಿಯಾದಾಗಿನಿಂದ ಬಹು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಕ್ಷಗಳಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಜಾರಿಗೊಳಿಸದೆ ಕಡಲೇಕಾಯಿ ತಿನ್ನುತ್ತಿದ್ದರೆ ಎಂದು ಸಚಿವ ಸಿ.ಟಿ.ರವಿ ಖಾರವಾಗಿ ಪ್ರಶ್ನಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಲ್ಲಿ ಬದ್ಧತೆ ತೋರಿಸಿದೆ. ಶಿಕ್ಷಣ ಮಾಧ್ಯಮ ಕನ್ನಡವಾಗಿರಬೇಕು ಎಂಬುದು ಸರ್ಕಾರದ ಅಪೇಕ್ಷೆ. ಆದರೆ ಮುಖ್ಯಮಂತ್ರಿಗಳೇ ಹೇಳಿದಂತೆ ಸಮಾಜದ ಸಹಕಾರವಿಲ್ಲದೇ ಯಶಸ್ಸುಗೊಳಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಶಿಕ್ಷಣ ಮಾಧ್ಯಮವು ಪೋಷಕರ ಆಯ್ಕೆ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು, ಸರ್ಕಾರವನ್ನು ಅಸಹಾಯಕವನ್ನಾಗಿ ಮಾಡಿದೆ. ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸದೆ ಆಡಳಿತದಲ್ಲಿ ಕನ್ನಡ ಉಳಿಸಲು ಹೇಗೆ ಸಾಧ್ಯ. ಹೀಗೇ ಮುಂದುವರಿದರೆ ಮುಂದಿನ 3-4 ತಲೆಮಾರಿನವರಿಗೆ ಕನ್ನಡದಲ್ಲಿ ಮಾತನಾಡಿದರೆ ಅರ್ಥವಾಗದ ಸ್ಥಿತಿ ಬರಬಹುದು. ಇದೊಂದು ಜಟಿಲ ಸಮಸ್ಯೆಯಾಗಿದೆ ಎಂದು ಹೇಳಿದರು.

ಖಾಸಗಿ ವಲಯದಲ್ಲಿ ವರದಿ ಜಾರಿ ಹೇಳುವಷ್ಟು ಸುಲಭವಾಗಿಲ್ಲ. ಹಂತ ಹಂತವಾಗಿ ಜಾರಿಗೊಳಿಸಬೇಕಾಗುತ್ತದೆ. ಉತ್ಪಾದನಾ ವಲಯದ ಮೇಲೆ ಪರಿಣಾಮ ಬೀರರಂತೆ ಮುಂದಡಿ ಇಡಬೇಕಾಗುತ್ತದೆ. ಖಾಸಗಿ ವಲಯಕ್ಕೆ ಕುಶಲ ನೌಕರರ ಅಗತ್ಯವಿದೆ. ಆದರೆ ಹೋಟೆಲ್‌ಗ‌ಳಿಗೆ ನೌಕರರು ಸಿಗದ ಸ್ಥಿತಿ ಇದೆ. ಹಾಗಾಗಿ ಖಾಸಗಿ ವಲಯದಲ್ಲಿ ಜಾರಿಯಿಂದ ಉಂಟಾಗುವ ಪರಿಣಾಮಗಳ ಅವಲೋಕನ ಅಗತ್ಯವಿದೆ. ಸೂಕ್ತ ಕೌಶಲ್ಯ ತರಬೇತಿ ಕೊಡಿಸಿ ಎಲ್ಲೆಡೆ ಲಭ್ಯವಾಗುವ ಸ್ಥಿತಿ ನಿರ್ಮಿಸಬೇಕು. ಇಲ್ಲದಿದ್ದರೆ ಕೈಗಾರಿಕೆ ಮುಚ್ಚಿಸುವುದಷ್ಟೇ ನಡೆಯಲಿದೆ ಎಂದು ತಿಳಿಸಿದರು.

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹೋರಾಟಗಾರರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಬಲ ಸೂಚಿಸಿರುವುದು ಹಾಸ್ಯಾಸ್ಪದ. ವರದಿ ಜಾರಿಯಾದ ದಿನದಿಂದ ಬಹು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದುದು ಸಿದ್ದರಾಮಯ್ಯ ಹಾಗೂ ಅವರಿದ್ದ ಜನತಾ ಪಕ್ಷ, ಕಾಂಗ್ರೆಸ್‌ ಪಕ್ಷ. ಆಗೆಲ್ಲಾ ಅವರು ಕಡಲೇಕಾಯಿ ತಿನ್ನುತ್ತಿದ್ದರೆ?ಅಧಿಕಾರ ಕಳೆದುಕೊಂಡ ಕೂಡಲೇ ವರದಿ ಜಾರಿಗೆ ಒತ್ತಾಯಿಸುವವರಿಗೆ ಬೆಂಬಲ ನೀಡುತ್ತಾರೆ. ಅಧಿಕಾರದಲ್ಲಿದ್ದಾಗ ಅವರೇನು ಮೈಮರೆತು ಮಲಗಿದ್ದರೆ ಎಂದು ಪ್ರಶ್ನಿಸಿದರು.

ವರದಿ ಮಂಡನೆಯಾದಾಗ ಅಧಿಕಾರದಲ್ಲಿದ್ದ ಪಕ್ಷಗಳಲ್ಲಿ ಸಿದ್ದರಾಮಯ್ಯ ಅವರಿದ್ದರು. ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗೆಲ್ಲಾ ಅವರಿಗೆ ವರದಿ ಜಾರಿಗೊಳಿಸಬೇಕು ಎನ್ನಿಸಲಿಲ್ಲ. ಇದೀಗ ವರದಿ ಜಾರಿ ಹೋರಾಟಕ್ಕೆ ಬೆಂಬಲ ನೀಡಿರುವುದು ಹಾಸ್ಯಾಸ್ಪದ. ಹಾಗೆಯೇ ಅವರ ಮಾತನ್ನು ನಂಬುವುದು ಯಾವುದರ ಪರಮಾವಧಿ ಎಂದು ನಾನು ಬಾಯಿ ಬಿಟ್ಟು ಹೇಳಬೇಕಿಲ್ಲ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಸೋನಿಯಮ್ಮನ ಭೂತ ಇತ್ತೆ ಎಂದು ಕೇಳಿದರೆ ಅವರಿಗೆ ಕೋಪ ಬರುತ್ತದೆ ಎಂದು ವ್ಯಂಗ್ಯವಾಡಿದರು.

Advertisement

ಬಂದ್‌ಗೆ ಕರೆ ನೀಡಿರುವ ಚಳವಳಿಗಾರರನ್ನು ನಾನು, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಚಿವರಾದ ಎಸ್‌.ಸುರೇಶ್‌ ಕುಮಾರ್‌ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಮುಖ್ಯಮಂತ್ರಿಗಳು ಕೂಡ ಕರೆಸಿ ಮಾತನಾಡಿದ್ದಾರೆ.

ನಾವು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇವೆ. ಕನ್ನಡದ ಬಗ್ಗೆ ನಮ್ಮದು ಸೋಗಲಾಡಿತನದ ಬದ್ಧತೆಯಲ್ಲ. ಸಹಜ ಬದ್ಧತೆ. ಬಂದ್‌ ಕರೆ ಹಿಂಪಡೆಯುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಪುನರ್‌ ಪರಿಶೀಲನೆ ಅರ್ಜಿ ಬಗ್ಗೆ ಪರಿಶೀಲನೆ ಶಿಕ್ಷಣ ಮಾಧ್ಯಮ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪಿಗೆ ಸಂಬಂಧಪಟ್ಟಂತೆ ಪುನರ್‌ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಅವಕಾಶದ ಸಾಧ್ಯಾಸಾಧ್ಯತೆ ಬಗ್ಗೆ ಪ್ರತಿಪಕ್ಷಗಳ ನಾಯಕರು, ಸಾಹಿತಿಗಳು, ಚಿಂತಕರನ್ನು ಕರೆಸಿ ಚರ್ಚಿಸಲು ನಿರ್ಧರಿಸಲಾಗಿದೆ. ಒಂದೊಮ್ಮೆ ಪುನರ್‌ ಪರಿಶೀಲನೆ ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲದಿದ್ದರೆ ಸಂವಿಧಾನದ ತಿದ್ದುಪಡಿಗೆ ಒತ್ತಾಯಿಸಲು ನಾನಾ ರಾಜ್ಯಗಳ ಸಹಕಾರ ಕೋರಲು ಚಿಂತಿಸಲಾಗಿದೆ. ಮಾತೃಭಾಷೆ ಶಿಕ್ಷಣ ಮಾಧ್ಯಮವಾಗದಿದ್ದರೆ ಕನ್ನಡ ಮಾತ್ರವಲ್ಲದೇ ಎಲ್ಲ ಪ್ರಾದೇಶಿಕ ಭಾಷೆಗಳು 3- 4 ದಶಕಗಳ ಬಳಿಕ ಕೇವಲ ಆಡುಭಾಷೆ, ಬೆರಕರೆ ಮಾತಾಗಿ ಉಳಿಯಲಿವೆ. ಇಂಗ್ಲಿಷ್‌ ಭಾಷೆ ಕನ್ನಡಕ್ಕಷ್ಟೇ ಅಪಾಯವಲ್ಲ. ತಮಿಳು, ತೆಲುಗು, ಮಲಯಾಳ ನಂತರ ನಿಧಾನವಾಗಿ ಹಿಂದಿಯನ್ನೂ ಕೊಲ್ಲುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next