Advertisement

ಶಿರಾ ಗೆಲುವಿಗೆ ತಾವೊಬ್ಬರೇ ಕಾರಣ ಎಂದು ವಿಜಯೇಂದ್ರ ಎಲ್ಲೂ ಹೇಳಲಿಲ್ಲ: ಸಿ.ಟಿ.ರವಿ

06:17 PM Nov 11, 2020 | sudhir |

ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಶಿರಾ ಕ್ಷೇತ್ರದ ಗೆಲುವಿಗೆ ತಾವೊಬ್ಬರೇ ಕಾರಣ ಎಂದು ಎಲ್ಲಿಯೂ ಹೇಳಲಿಲ್ಲ. ಅವರಿಗೆ ಹೆಚ್ಚಿನ ಕ್ರೆಡಿಟ್‌ ಹೋದರೆ ತಪ್ಪೇನೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಬೆಂಗಳೂರು ನಗರ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಪುರ ಕಾಣುತ್ತದೆ, ಜನ ಕಳಸಕ್ಕೆ ಕೈಮುಗಿಯುತ್ತಾರೆ. ಆದರೆ ತಳಪಾಯ ಕಾಣುವುದಿಲ್ಲ. ಸಾವಿರಾರು ಕಾರ್ಯಕರ್ತರು ಬೂತ್‌ ಹಂತದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅವರು ಕಾಣುವುದಿಲ್ಲ. ನೇತೃತ್ವ ವಹಿಸಿದವರು ಸ್ವಾಭಾವಿಕವಾಗಿ ಕಾಣುತ್ತಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವ, ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಅರವಿಂದ ಲಿಂಬಾವಳಿ, ಆರ್‌.ಅಶೋಕ್‌ ನೇತೃತ್ವ, ಶಿರಾ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಎನ್‌.ರವಿಕುಮಾರ್‌, ಬಿ.ವೈ.ವಿಜಯೇಂದ್ರ, ವಿ.ಸೋಮಣ್ಣ, ಎ.ನಾರಾಯಣಸ್ವಾಮಿ ನೇತೃತ್ವಕ್ಕೆ ಪ್ರಶಂಸೆ ಸಿಗುವುದು ಸ್ವಾಭಾವಿಕ. ಆದರೆ ತಳಮಟ್ಟದಲ್ಲಿ ಅಂದರೆ ಬೂತ್‌ ಮಟ್ಟದಲ್ಲಿ ಸಾವಿರಾರು ಮಂದಿ ಕೆಲಸ ಮಾಡಿರುತ್ತಾರೆ. ತಳಪಾಳ ಗಟ್ಟಿ ಇರುವುದರಿಂದಲೇ ಗೋಪುರ ಉಳಿಯುತ್ತದೆ, ಪೂಜೆ ನಡೆಯುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಇದನ್ನೂ ಓದಿ:ಲಡಾಖ್ ಗಡಿ ವಿವಾದ: 8 ದಿನದೊಳಗೆ ಶೇ.30ರಷ್ಟು ಸೇನೆ ವಾಪಸ್ ಕರೆಯಿಸಿಕೊಳ್ಳಲು ಚೀನಾ ಒಪ್ಪಿಗೆ

ಶಿರಾ ಗೆಲುವಿನ ಶ್ರೇಯವನ್ನು ಬಿ.ವೈ.ವಿಜಯೇಂದ್ರ ಅವರೊಬ್ಬರಿಗೆ ನೀಡುವುದು ಸರಿಯೇ ಎಂಬ ಪ್ರಶ್ನೆಗೆ, ವಿಜಯೇಂದ್ರ ಅವರು ತಾವೊಬ್ಬರೇ ಗೆಲುವಿಗೆ ಕಾರಣ ಎಂದು ಎಲ್ಲೂ ಹೇಳಿಲ್ಲ. ಯುವಕರಾದ ಅವರು ಉತ್ಸಾಹದಿಂದ ಕೆಲಸ ಮಾಡಿದ್ದಾರೆ.

Advertisement

ಮುಖ್ಯಮಂತ್ರಿಗಳ ಪುತ್ರ, ರಾಜ್ಯ ಉಪಾಧ್ಯಕ್ಷರೆಂಬ ಕಾರಣಕ್ಕೆ ಹೆಚ್ಚಿನ ಶ್ರೇಯ ಅವರಿಗೆ ಹೋದರೆ ತಪ್ಪೇನೂ ಇಲ್ಲ. ಗೆಲುವಿಗೆ ತಾವೊಬ್ಬರೇ ಕಾರಣ ಎಂದು ಹೇಳಿಕೊಂಡ ಪ್ರಶ್ನೆ ಮೂಡುತ್ತದೆ ಎಂದು ತಿಳಿಸಿದರು.

ಯಾರೆಲ್ಲಾ ಗೆಲುವಿನ ರೂವಾರಿಗಳ್ಳೋ ಅವರೆಲ್ಲಾ ಸ್ವಾಭಾವಿಕವಾಗಿ ಸಂಭ್ರಮ ಪಡುತ್ತಾರೆ. ಆ ಸಂಭ್ರಮವನ್ನು ತಪ್ಪು ಎಂದು ಹೇಳುವುದಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಡಳಿತ, ನಳಿನ್‌ ಕುಮಾರ್‌ ಕಟೀಲ್‌ ಅವರ ನೇತೃತ್ವದೊಂದಿಗೆ ಸಂಘಟಿತ ಪ್ರಯತ್ನದಿಂದ ಈ ಫ‌ಲಿತಾಂಶ ಬಂದಿದೆ ಎಂದು ವಿಶ್ಲೇಷಿಸಿದರು.

ಮುಂದೆ ಬಿ.ವೈ. ವಿಜಯೇಂದ್ರ ಅವರಿಗೆ ಹೆಚ್ಚಿನ ಅವಕಾಶ ಸಿಗುವುದೇ ಎಂಬ ಪ್ರಶ್ನೆಗೆ ಅವರು, ಕೆಲವನ್ನು ಕಾಲ ನಿಶ್ಚಯ ಮಾಡುತ್ತದೆ. ಕಾಲದಲ್ಲಿ ಕೆಲವು ಸಂಗತಿಗಳು ನಿಶ್ಚಯವಾಗುತ್ತವೆ. ಬಹಳ ಮಂದಿಗೆ ಗೆಲುವು ಸಂಭ್ರಮಿಸುವ ಕ್ಷಣ. ಆ ಸಂಭ್ರಮ ತಪ್ಪು ಎಂದು ಹೇಳಲಾಗದು. ಯಾರಿಗೆಲ್ಲಾ ಸಾಮರ್ಥ್ಯವಿದೆಯೋ ಅದನ್ನು ಪಕ್ಷ ಬಳಸಿಕೊಳ್ಳುತ್ತದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನ, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ್‌, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ನಾರಾಯಣಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next