ಬೆಂಗಳೂರು: ಹಲಾಲ್ ಕಟ್ ಮಾಂಸವನ್ನು ಖರೀದಿ ಮಾಡಬಾರದೆಂದು ಸರ್ಕಾರ ಅಥವಾ ಯಾವುದೇ ಸಚಿವರು ಹೇಳಿಕೆ ನೀಡಿಲ್ಲ. ಸಿ.ಟಿ. ರವಿ ಸರ್ಕಾರದ ಭಾಗವಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಇದನ್ನೂ ಓದಿ:ಮಾಲೀಕರಿಗೆ 20 ಲಕ್ಷ ರೂ. ಚಿನ್ನವಿದ್ದ ಬ್ಯಾಗ್ ಮರಳಿಸಿದ ಹೋಮ್‌ಗಾರ್ಡ್
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂಸ ತಿನ್ನುವುದು ಮತ್ತು ಖರೀದಿ ಮಾಡುವುದು ಜನರ ವೈಯಕ್ತಿಕ ವಿಚಾರ. ಹೀಗಾಗಿಯೇ ಸರ್ಕಾರ ಯಾವುದೇ ಆದೇಶ ಅಥವಾ ಹೇಳಿಕೆ ನೀಡಿಲ್ಲ ಎಂದು ತಿಳಿಸಿದರು.
ಹಲಾಲ್ ಮಾಂಸ ಖರೀದಿ ಮಾಡದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿ.ಟಿ. ರವಿ ಈಗ ಸಚಿವರೂ ಅಲ್ಲ, ಮಾಜಿ ಮಂತ್ರಿಗಳು. ಅವರು ದೇಶದ ಪ್ರಜೆಯಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಸರ್ಕಾರ ಹೇಳಿಕೆ ನೀಡಿದ್ದರೆ ಮಾತ್ರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಶಿಕ್ಷಣ ಸಚಿವರು ಹೇಳಿದರು.
ಮಾವು ಖರೀದಿ ಮಾಡುವುದು ಮತ್ತು ಮಾರಾಟ ಮಾಡುವುದು ಕೂಡ ವ್ಯಾಪಾರಿಗಳು ಹಾಗೂ ಮಾಲೀಕರ ವೈಯಕ್ತಿಕ ವಿಚಾರ. ಎಲ್ಲಾ ಕಂಪನಿಗಳು ತಮ್ಮ ಸಂಸ್ಥೆಯ ವಸ್ತುಗಳನ್ನು ಖರೀದಿ ಮಾಡುವಂತೆ ಪ್ರಚಾರ ಮಾಡುತ್ತವೆ. ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳ ಬುದ್ಧಿ ಕೆಲಸ ಮಾಡುತ್ತದೆ. ಅಂತಿಮವಾಗಿ ಕೊಳ್ಳುವುದು, ಬಿಡುವುದು ಜನರ ವಿವೇಚನೆಗೆ ಬಿಟ್ಟ ವಿಚಾರ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್ ಪ್ರತಿಕ್ರಿಯಿಸಿದರು.