Advertisement

ಮೈಸೂರಿನಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ: ಸಚಿವ ಸಿ.ಟಿ.ರವಿ

09:55 AM Feb 05, 2020 | sudhir |

ಬೆಂಗಳೂರು : ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಮೈಸೂರಿನಲ್ಲಿ ಆರಂಭಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಮೈಸೂರಿನ ವಿಜಯಶ್ರೀ ಬಡಾವಣೆಯಲ್ಲಿ 3 ಎಕರೆ ಜಾಗವನ್ನು ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರಕ್ಕಾಗಿ ಗುರುತಿಸಲಾಗಿದೆ. ಈ ಜಾಗದಲ್ಲಿಯೇ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಮಂಗಳವಾರ ವಿಧಾನಸೌಧದಲ್ಲಿ ಬಜೆಟ್‌ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರಿಗೆ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ಥಾಪನೆಗೆ ಬೇಕಾದ ಸಮಗ್ರ ಯೋಜನಾ ವರದಿ(ಡಿಪಿಆರ್‌)ಯ ಕರಡು ಸಿದ್ಧವಾಗಿದೆ. ಶಾಸ್ತ್ರೀಯ ಕೇಂದ್ರಕ್ಕೆ ಬೇಕಿರುವ ಅಗತ್ಯ ದಾಖಲಾತಿಗಳನ್ನು ಕೇಂದ್ರ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಿ, 10 ದಿನದೊಳಗೆ ಅನುಮತಿ ಪಡೆಯಲಾಗುತ್ತದೆ ಎಂದು ವಿವರ ನೀಡಿದರು.

ಅರ್ನಿಯ ಅನುಷ್ಠಾನಕ್ಕೆ ಕ್ರಮ:
ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕಾರಗೊಳ್ಳುವ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುತ್ತದೆ. ಕಲಬುರಗಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಕೊರತೆ ಇಲ್ಲ. ಜಿಲ್ಲಾಡಳಿತಕ್ಕೆ ಈಗಾಗಲೇ 10 ಕೋಟಿ ರೂ. ವಿಶೇಷಾನುದಾನ ನೀಡಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್‌ 1 ಕೋಟಿ ರೂ. ನೀಡಿದೆ. ಜಿಲ್ಲೆಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಿದ್ದಾರೆ. ಇದು ಸುಮಾರು 3 ಕೋಟಿ ರೂ. ಆಗಲಿದೆ. ಹಾಗೆಯೇ ವಿವಿಧ ಸಂಘಸಂಸ್ಥೆಗಳು ಸಹಕಾರ ನೀಡಿವೆ. ಅನುದಾನದ ಕೊರತೆ ಇಲ್ಲ ಎಂದರು.

ಮಾಧ್ಯಮದ ಸ್ಪಷ್ಟತೆ ಬೇಕು :
ಕನ್ನಡ ಭಾಷಾ ಮಾಧ್ಯಮ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಸ್ಪಷ್ಟ ಆದೇಶದ ನೀಡಿದೆ. ಮಕ್ಕಳ ಶಿಕ್ಷಣ ಮಾಧ್ಯಮದ ಆಯ್ಕೆ ಪಾಲಕ-ಪೋಷಕರಿಗೆ ಬಿಟ್ಟಿದ್ದಾಗಿದೆ. ಇಂಗ್ಲಿಷ್‌ ಶಾಲೆಗಳ ಹಾವಳಿಯಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಶಿಕ್ಷಣದ ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿಬೇಕೇ ಅಥವಾ ವಿವಿಧ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೇ ಎಂಬುದರ ಬಗ್ಗೆ ತಿರ್ಮಾನಿಸಬೇಕು. ಕನ್ನಡ ಭಾಷೆ ಉಳಿಸುವ ಸಂಬಂಧ ಸಾಹಿತಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

Advertisement

ಇಂಗ್ಲಿಷ್‌ ಮಾಧ್ಯಮದಿಂದಾಗಿ ಕನ್ನಡದಂತೆಯೇ ಹಿಂದಿ, ತಮಿಳು, ಮಲೆಯಾಳಿ, ತೆಲಗು ಮೊದಲಾದ ಮಾಧ್ಯಮಗಳ ಶಾಲೆಯು ಅಪಾಯ ಎದುರಿಸುತ್ತಿವೆ. ದೇಶಿ ಅಥವಾ ಪ್ರಾದೇಶಿ ಭಾಷಾ ಮಾಧ್ಯಮದ ಶಾಲೆಗಳಿಂದ ನಮಗೆ ಸವಾಲಿಲ್ಲ. ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಂದ ಸವಾಲಿದೆ. ಕನ್ನಡ ಶಾಲೆಯಲ್ಲಿ ಇಂಗ್ಲಿಷ್‌ ಹಾಗೂ ಇಂಗ್ಲಿಷ್‌ ಶಾಲೆಯಲ್ಲಿ ಕನ್ನಡವನ್ನು ಚೆನ್ನಾಗಿ ಕಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

200 ಕೋಟಿ ರೂ.ಗಳಿಗೆ ಮನವಿ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ವರ್ಷದ ಆಯವ್ಯಯದಲ್ಲಿ 200 ಕೋಟಿ ರೂ.ಗಳನ್ನು ಒದಗಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗುತ್ತದೆ. ರಾಜ್ಯ ಹಣಕಾಸು ಇಲಾಖೆಯು ಶೇ.30ರಷ್ಟು ಅನುದಾನ ಕಡಿತಗೊಳಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದೆ. ವಿವಿಧ ಇಲಾಖೆಗಳು ಈ ರೀತಿಯ ಪ್ರಸ್ತಾವನೆ ನೀಡಿರುವುದರಿಂದ ನಾವು ಕಳುಹಿಸಿಕೊಟ್ಟಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಗತ್ಯವಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ ಎಂದು ವಿವರಿಸಿದರು.

ಡಿ.ಕೆ.ಶಿವಕುಮಾರ್‌ ಅವರು ಇಲಾಖೆಯ ಸಚಿವರಾಗಿದ್ದಾಗ ಕೆಲವು ಲೆಟರೆಡ್‌ ಟ್ರಸ್ಟ್‌ಗಳು ಇವೆ ಎಂಬ ಕಾರಣಕ್ಕೆ ಅನುದಾನ ನಿಲ್ಲಿಸಿದ್ದರು. ಈ ಬಗ್ಗೆ ಸೊಷಿಯಲ್‌ ಆಡಿಟ್‌ ಮಾಡಲು ನಿರ್ಧರಿಸಿದ್ದೇವೆ. ಇಲಾಖೆಯಲ್ಲಿ ನೋಂದಾಯಿಸಿಕೊಂಡ ಟ್ರಸ್ಟ್‌ಗಳಿಗೆ ಅನುದಾನ ನೀಡದೇ ಇರುವುದು ಸರಿಯಲ್ಲ. ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಬಗ್ಗೆ ವರದಿ ಪಡೆದ ಅನುದಾನ ನೀಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ. ತಾತ್ಕಾಲಿಕವಾಗಿ ಅನುದಾನ ನೀಡುವುದನ್ನು ತಡೆ ಹಿಡಿಯಲು ಸೂಚಿಸಿದ್ದೇನೆ. ಇದೇ ಅಂತಿಮವಲ್ಲ. ಅರ್ಹ ಸಂಸ್ಥೆಗಳಿಗೆ ಅನುದಾನ ನೀಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next