ಮುಂಬೈ: ಐಸಿಸಿಗೆ ಸೆಡ್ಡು ಹೊಡೆದು ಚಾಂಪಿಯನ್ಸ್ ಟ್ರೋಫಿಗೆ ಗೈರಾಗುವ ಬಿಸಿಸಿಐ ಪದಾಧಿಕಾರಿಗಳ ಯತ್ನಕ್ಕೆ ಭಾರೀ ಹೊಡೆತ ಬಿದ್ದಿದೆ.
ಸ್ವತಃ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವೇ ಕೂಟದಲ್ಲಿ ಆಡುವ ಕುರಿತು ತೀವ್ರ ಆಸಕ್ತಿ ತೋರಿದೆಯೆನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಕೋಚ್ ಅನಿಲ್ ಕುಂಬ್ಳೆ ಮಾಹಿತಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಭಾರತ ಕ್ರಿಕೆಟ್‌ನ ದಂತಕಥೆಗಳಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಕೂಡ ಭಾರತ ಆಡಬೇಕು ಎಂದು ಒತ್ತಾಯಿಸಿದ್ದರು ಐಸಿಸಿಯಲ್ಲಿ ಇತ್ತೀಚೆಗೆ ನಡೆದ ಮತದಾನದ ವೇಳೆ ಬಿಸಿಸಿಐ ಸೋಲನುಭವಿಸಿತ್ತು. ಬಿಗ್ ಥ್ರಿ ಆದಾಯ ನೀತಿಯನ್ನು ರದ್ದು ಮಾಡಬಾರದು ಹಾಗೂ ಐಸಿಸಿ ಆಡಳಿತ ವ್ಯವಸ್ಥೆಯನ್ನು ಯಥಾರೀತಿ ಉಳಿಸಿಕೊಳ್ಳಬೇಕೆಂಬ ಬಿಸಿಸಿಐ ಬೇಡಿಕೆಯನ್ನು ಉಳಿದೆಲ್ಲ ರಾಷ್ಟ್ರಗಳು ಸರ್ವಾನುಮತದಿಂದ ಸೋಲಿಸಿದ್ದವು. ಇದರಿಂದ ಭಾರೀ ಮುಖಭಂಗಕ್ಕೊಳಗಾದ ಬಿಸಿಸಿಐ ಇಂಗ್ಲೆಂಡ್‌ನಲ್ಲಿ ಜೂನ್ ತಿಂಗಳಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ರದ್ದಾಗುವ ಬಗ್ಗೆ ಚಿಂತನೆ ನಡೆಸಿತ್ತು. ಆದರೆ ಬಿಸಿಸಿಐ ಈ ಯತ್ನಕ್ಕೆ ನಿಯೋಜಿತ ಆಡಳಿತಾಧಿಕಾರಿಗಳು ಮೊದಲು ತಕರಾರು ಎತ್ತಿದರು. ಮಾತ್ರವಲ್ಲ ತಕ್ಷಣವೇ ತಂಡ ಪ್ರಕಟಿಸಿ ತಾಕೀತು ಕೂಡ ಮಾಡಿದರು.
ಇದರ ಜೊತೆಗೆ ಎಲ್ಲ ಕಡೆಯಿಂದ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲೇಬೇಕೆನ್ನುವ ಒತ್ತಡ ಕೇಳಿ ಬರುತ್ತಿದೆ. ಇಂದು ವಿಶೇಷ ಸಭೆ: ಬಿಸಿಸಿಐ ವಿಶೇಷ ಸಭೆ ಭಾನುವಾರ ನಡೆಯಲಿದೆ.
ಇದರಲ್ಲಿ ಬಿಸಿಸಿಐ ತನ್ನ ತಂಡವನ್ನು ಚಾಂಪಿಯನ್ಸ್ ಟ್ರೋಫಿಗೆ ಕಳುಹಿಸುತ್ತದೋ ಇಲ್ಲವೋ ಎನ್ನುವುದು ಖಚಿತವಾಗಲಿದೆ. ಅದರ ಮೇಲೆ ಸದ್ಯ ಉಂಟಾಗಿರುವ ಒತ್ತಡ ಗಮನಿಸಿದರೆ ಚಾಂಪಿಯನ್ಸ್ ಟ್ರೋಫಿಗೆ ತಂಡ ಕಳುಹಿಸುವುದು ಖಚಿತ ಎನ್ನಲಾಗಿದೆ.