Advertisement
ರವಿವಾರವಷ್ಟೇ ಆರ್‌ಸಿಬಿ ವಿರುದ್ಧ ಒಂದು ರನ್ ಅಂತರದ ಸೋಲುಂಡ ಚೆನ್ನೈಗೆ ಇದು ತವರಿನ ಪಂದ್ಯವಾದ್ದರಿಂದ ಹೆಚ್ಚಿನ ಅವಕಾಶವಿದೆ ಎನ್ನಲಡ್ಡಿಯಿಲ್ಲ. ಆದರೆ ಹೈದರಾಬಾದ್ ಸವಾಲು ಸುಲಭದ್ದಲ್ಲ.
ಚೆನ್ನೈ ತಂಡದಲ್ಲಿ ಓಪನಿಂಗ್ ಬ್ಯಾಟ್ಸ್‌ಮನ್‌ಗಳದೇ ಪ್ರಮುಖ ಸಮಸ್ಯೆ. ಈ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದವರ್ಯಾರೂ ಟಿ20 ಜೋಶ್ ತೋರದೆ ಬೇಗನೆ ಪೆವಿಲಿಯನ್ ಸೇರುತ್ತಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದ ಆಟಗಾರರ ಮೇಲಿನ ಒತ್ತಡ ತೀವ್ರಗೊಳ್ಳುತ್ತದೆ. ಆರ್‌ಸಿಬಿ ಎದುರಿನ ಸಾಮಾನ್ಯ ಮೊತ್ತದ ಚೇಸಿಂಗ್ ವೇಳೆ ಅಗ್ರ ಕ್ರಮಾಂಕದ ತೀವ್ರ ಕುಸಿತ ಚೆನ್ನೈಗೆ ಕಂಟಕವಾಗಿ ಕಾಡಿತ್ತು. ಧೋನಿ ತಂಡವನ್ನು ಗೆಲುವಿನ ಬಾಗಿಲಿನತ್ತ ಕೊಂಡೊಯ್ದರೂ ಅದೃಷ್ಟ ಕೈಕೊಟ್ಟಿತ್ತು. ಶೇನ್ ವಾಟ್ಸನ್, ಸುರೇಶ್ ರೈನಾ, ಕೇದಾರ್‌ಜಾಧವ್ ಫಾರ್ಮ್ ಕಳೆದುಕೊಂಡಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಆಲ್‌ರೌಂಡರ್ ಬ್ರಾವೊ ವಾಪಸಾಗಿರುವುದು ಚೆನ್ನೈಗೆ ಲಾಭವಾಗಿ ಪರಿಣಮಿಸಬೇಕಿದೆ. ಬ್ಯಾಟಿಂಗಿಗೆ ಹೋಲಿಸಿದರೆ ಚೆನ್ನೈ ಬೌಲಿಂಗ್ ಹೆಚ್ಚು ಬಲಿಷ್ಠ. ಇಮ್ರಾನ್ ತಾಹಿರ್, ರವೀಂದ್ರ ಜಡೇಜ, ಶಾದೂಲ್ ಠಾಕೂರ್, ದೀಪಕ್‌ಚಹರ್, ಡ್ವೆ„ನ್ ಬ್ರಾವೊ, ಹರ್ಭಜನ್ ಎದುರಾಳಿಗಳನ್ನು ಕಟ್ಟಿಹಾಕಬಲ್ಲರು.
Related Articles
ವಾರ್ನರ್-ಬೇರ್‌ಸ್ಟೊ ಅವರ ಪ್ರಚಂಡ ಓಪನಿಂಗ್ ಹೈದರಾಬಾದ್‌ನ ಈ ವರೆಗಿನ ಓಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ವಾರ್ನರ್ 517, ಬೇರ್‌ಸ್ಟೊ 445 ರನ್ ಪೇರಿಸಿದ್ದಾರೆ. ಆದರೀಗ ಬೇರ್‌ಸ್ಟೊ ವಿಶ್ವಕಪ್ ತಯಾರಿಗಾಗಿ ಇಂಗ್ಲೆಂಡಿಗೆ ತೆರಳಲಿದ್ದು, ಈ ಪಂದ್ಯದಲ್ಲಿ ಆಡುವುದಿನ್ನೂ ಖಚಿತಪಟ್ಟಿಲ್ಲ. ಅಕಸ್ಮಾತ್ ಆಡಿದರೂ ಇದು ಅವರ ಕೊನೆಯ ಐಪಿಎಲ್ ಪಂದ್ಯವಾಗಲಿದೆ.
ಇನ್ನೊಂದೆಡೆ ತವರಿಗೆ ವಾಪಸಾಗಬೇಕಿದ್ದ ಬಾಂಗ್ಲಾ ಆಟಗಾರ ಶಕಿಬ್ ಅಲ್ ಹಸನ್ ಹೈದರಾಬಾದ್ ತಂಡದಲ್ಲೇ ಮುಂದುವರಿಯಲಿದ್ದಾರೆ. ಇವರಿಗೆ ಆಡುವ ಅವಕಾಶ ಸಿಕ್ಕೀತೇ ಎಂಬುದೊಂದು ಪ್ರಶ್ನೆ. ರಶೀದ್ ಖಾನ್, ಮೊಹಮ್ಮದ್ ನಬಿ, ಸಂದೀಪ್ ಶರ್ಮ, ಭುವನೇಶ್ವರ್ ಅವರನ್ನೊಳಗೊಂಡ ಹೈದರಾಬಾದ್ ಬೌಲಿಂಗ್ ಘಾತಕವಾಗಿದೆ.
Advertisement