Advertisement

ಧೋನಿ ಲಾಸ್ಟ್‌ ಬಾಲ್‌ ಮಿಸ್‌: ಪಾರ್ಥಿವ್‌ಗೆ ಅಚ್ಚರಿ

10:18 AM Apr 24, 2019 | keerthan |

ಬೆಂಗಳೂರು: ಇನ್ನೇನು ಉಮೇಶ್‌ ಯಾದವ್‌ ಅವರ ಅಂತಿಮ ಎಸೆತದಲ್ಲಿ ಧೋನಿ ದೊಡ್ಡ ಹೊಡೆತವೊಂದನ್ನು ಬಾರಿಸಿ ಚೆನ್ನೈಗೆ ಅಚ್ಚರಿಯ ಜಯವೊಂದನ್ನು ತಂದು ಕೊಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆಲ್ಲ ಎದುರಾದದ್ದು ದೊಡ್ಡದೊಂದು ಅಚ್ಚರಿ!

Advertisement

ಯಾದವ್‌ ಅವರ ನಿಧಾನ ಗತಿಯ ಆಫ್ ಕಟರ್‌ ಎಸೆತವನ್ನು ಧೋನಿ ಸಂಪೂರ್ಣವಾಗಿ ಮಿಸ್‌ ಮಾಡಿಕೊಂಡರು. ಆದರೂ ಓಡಿದರು. ಸ್ಟ್ರೈಕಿಂಗ್‌ ಎಂಡ್‌ಗೆ ಬರುತ್ತಿದ್ದ ಶಾದೂìಲ್‌ ಠಾಕೂರ್‌, ಕೀಪರ್‌ ಪಾರ್ಥಿವ್‌ ಪಟೇಲ್‌ ಅವರ ನೇರ ಹೊಡೆತಕ್ಕೆ ಸಿಲುಕಿ ರನೌಟಾದರು. ಆರ್‌ಸಿಬಿ ಒಂದು ರನ್‌ ಗೆಲುವು ಸಾಧಿಸಿ ನಿಟ್ಟುಸಿರೆಳೆಯಿತು!

“ಧೋನಿ ಕೊನೆಯ ಎಸೆತವನ್ನು ಮಿಸ್‌ ಮಾಡಿಕೊಳ್ಳುತ್ತಾರೆಂಬ ನಂಬಿಕೆಯೇ ನಮಗಿರಲಿಲ್ಲ. ನಿಜಕ್ಕೂ ಇದೊಂದು ಅಚ್ಚರಿ’ ಎಂಬುದಾಗಿ ಈ ಪಂದ್ಯದ ಹೀರೋ ಪಾರ್ಥಿವ್‌ ಪಟೇಲ್‌ ಹೇಳಿದರು.

ಉಮೇಶ್‌ ಯಾದವ್‌ ಪಾಲಾದ ಅಂತಿಮ ಓವರಿನಲ್ಲಿ ಚೆನ್ನೈ ಗೆಲುವಿಗೆ 26 ರನ್‌ ಬೇಕಿತ್ತು. ಧೋನಿ ಕ್ರೀಸ್‌ನಲ್ಲಿದ್ದುದರಿಂದ, ಯಾದವ್‌ ಬೌಲಿಂಗ್‌ ಹೇಗೆ ಎಂಬುದು ಎಲ್ಲರಿಗೂ ತಿಳಿದಿದ್ದುದರಿಂದ ಚೆನ್ನೈಗೆ ಇದು ಅಸಾಧ್ಯವೇನೂ ಆಗಿರಲಿಲ್ಲ. ಹಾಗೆಯೇ ಆಯಿತು. ಧೋನಿ 4, 6, 6, 2, 6 ರನ್‌ ಬಾರಿಸಿ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿದರು. ಆದರೆ ಅಂತಿಮ ಎಸೆತದಲ್ಲಿ ಎಡವಿದರು!

ಪಾರ್ಥಿವ್‌ ಪಟೇಲ್‌ ಪಂದ್ಯಶ್ರೇಷ್ಠ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 161 ರನ್‌ ಗಳಿಸಿದರೆ, ಚೆನ್ನೈ 8 ವಿಕೆಟಿಗೆ 160 ರನ್‌ ಬಾರಿಸಿ ಶರಣಾಯಿತು. ಧೋನಿ ಹೊರತುಪಡಿಸಿದರೆ 29 ರನ್‌ ಮಾಡಿದ ರಾಯುಡು ಅವರದೇ ಹೆಚ್ಚಿನ ಗಳಿಕೆ. 53 ರನ್‌ ಜತೆಗೆ ಒಂದು ಕ್ಯಾಚ್‌ ಹಾಗೂ ನಿರ್ಣಾಯಕ ರನೌಟ್‌ ಮಾಡಿ ಮಿಂಚಿದ ಪಾರ್ಥಿವ್‌ ಪಟೇಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

ಕೋಚ್‌ ಕರ್ಸ್ಟನ್‌ ಮಾರ್ಗದರ್ಶನ
“ಈ ಪಂದ್ಯಕ್ಕೂ ಮೊದಲು ನಾನು ಕೋಚ್‌ ಗ್ಯಾರಿ ಕರ್ಸ್ಟನ್‌ ಸಲಹೆ ಪಡೆದೆ. ವಿಪರೀತ ಚಿಂತೆ ಮಾಡುವ ಅಗತ್ಯವಿಲ್ಲ, ಯಾವ ಬೌಲರ್‌ಗಳನ್ನು ದಂಡಿಸಬೇಕೆಂಬ ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ ಎಂಬುದಾಗಿ ಹೇಳಿದರು. ನಾನು ಹಾಗೆಯೇ ಮಾಡಿದೆ’ ಎಂದು ತಮ್ಮ ಬ್ಯಾಟಿಂಗ್‌ ಬಗ್ಗೆ ಪಾರ್ಥಿವ್‌ ವಿವರಿಸಿದರು.
ಸಂಕ್ಷಿಪ್ತ ಸ್ಕೋರ್‌
ಆರ್‌ಸಿಬಿ-7 ವಿಕೆಟಿಗೆ 161. ಚೆನ್ನೈ-8 ವಿಕೆಟಿಗೆ 160 (ಧೋನಿ ಔಟಾಗದೆ 84, ರಾಯುಡು 29, ಸ್ಟೇನ್‌ 29ಕ್ಕೆ 2, ಯಾದವ್‌ 47ಕ್ಕೆ 2, ಸೈನಿ 24ಕ್ಕೆ 1, ಚಾಹಲ್‌ 24ಕ್ಕೆ 1).  ಪಂದ್ಯಶ್ರೇಷ್ಠ: ಪಾರ್ಥಿವ್‌ ಪಟೇಲ್‌.

ಧೋನಿ ಏನೆಂಬುದು ಎಲ್ಲರಿಗೂ ಗೊತ್ತು


ಧೋನಿ ಕ್ರೀಸ್‌ನಲ್ಲಿರುವ ತನಕ ಪಂದ್ಯದ ಫ‌ಲಿತಾಂಶದ ಬಗ್ಗೆ ಏನನ್ನೂ ಹೇಳಲಾಗದು. ಅವರು ಇಂದಿಗೂ ಮ್ಯಾಚ್‌ ವಿನ್ನರ್‌. ಇಲ್ಲಿ ಅವರಿಗೆ ಕೊನೆಯ ಎಸೆತದಲ್ಲಿ ಗೆಲುವಿನ ರನ್‌ ಬಾರಿಸುವುದು ಸವಾಲೇ ಆಗಿರಲಿಲ್ಲ. ಆಫ್ ಸೈಡ್‌ನ‌ತ್ತ ಹೊಡೆದರೆ ಸುಲಭದಲ್ಲಿ ಬೌಂಡರಿ ಗಳಿಸಬಹುದಿತ್ತು. ಲೆಗ್‌ ಸೈಡ್‌ನ‌ತ್ತ ಬಾರಿಸಿದರೆ ಓಡಿ 2 ರನ್‌ ತೆಗೆಯಬಹುದಿತ್ತು. ಧೋನಿ ಓಟ ಕಂಡಾಗ ಇಂಥದೊಂದು ಸಾಧ್ಯತೆ ಬಗ್ಗೆ ಅನುಮಾನವೇ ಇರಲಿಲ್ಲ…’ ಎಂದು ಪಾರ್ಥಿವ್‌ ಅಂತಿಮ ಕ್ಷಣದ ಸಾಧ್ಯತೆ ಬಗ್ಗೆ ಹೇಳಿದರು. “ಹೀಗಾಗಿ ಯಾದವ್‌ಗೆ ನಿಧಾನ ಗತಿಯ ಹಾಗೂ ಆಫ್ ಸೈಡ್‌ನ‌ ಆಚೆಯ ಎಸೆತವಿಕ್ಕಲು ಸೂಚಿಸಲಾಯಿತು. ಆದರೆ ಅಚ್ಚರಿಯೆಂಬಂತೆ ಧೋನಿ ಇದನ್ನು ಮಿಸ್‌ ಮಾಡಿಕೊಂಡರು. ನಾನು ಇದರ ನಿರೀಕ್ಷೆಯಲ್ಲೇ ಇರಲಿಲ್ಲ…’ ಎಂದರು.

“ಬೆಂಗಳೂರು ಅಥವಾ ಮುಂಬಯಿಯಲ್ಲಿ ಆಡುವಾಗ ಕೊನೆಯ 5 ಓವರ್‌ಗಳಲ್ಲಿ 70 ರನ್‌ ಬಾರಿಸುವುದು ಅಸಾಧ್ಯವಲ್ಲ. ಹೀಗಾಗಿ ಈ 5 ಓವರ್‌ಗಳಲ್ಲಿ 80-90 ರನ್‌ ಟಾರ್ಗೆಟ್‌ ಇರುವಂತೆ ನೋಡಿಕೊಳ್ಳಬೇಕು. ಧೋನಿಗೆ ಸಾಧ್ಯವಾದಷ್ಟು ಹೆಚ್ಚು ಡಾಟ್‌ ಬಾಲ್‌ ಎಸೆದು ಅವರನ್ನು ಒತ್ತಡಕ್ಕೆ ಸಿಲುಕಿಸುವುದು ನಮ್ಮ ಯೋಜನೆಯಾಗಿತ್ತು. ಧೋನಿ ಏನೆಂಬುದು ಎಲ್ಲರಿಗೂ
ಗೊತ್ತು…’ ಎಂಬುದಾಗಿ ಪಾರ್ಥಿವ್‌ ಹೇಳಿದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಚೆನ್ನೈ ರನ್‌ ಅಂತರದಲ್ಲಿ ಅತೀ ಸಣ್ಣ ಸೋಲನುಭವಿಸಿತು (1 ರನ್‌). ಇದಕ್ಕೂ ಮುನ್ನ ಕಳೆದ ವರ್ಷ ಮೊಹಾಲಿಯಲ್ಲಿ ಪಂಜಾಬ್‌ ವಿರುದ್ಧ 4 ರನ್ನಿನಿಂದ ಎಡವಿತ್ತು.
* ಆರ್‌ಸಿಬಿ 2ನೇ ಸಲ ಒಂದು ರನ್‌ ಅಂತರದ ಜಯ ದಾಖಲಿಸಿತು. 2016ರಲ್ಲಿ ಪಂಜಾಬ್‌ ವಿರುದ್ಧ ಮೊಹಾಲಿಯಲ್ಲೂ ಒಂದು ರನ್ನಿನಿಂದ ಗೆದ್ದಿತ್ತು.
* ಚೆನ್ನೈ ವಿರುದ್ಧ ಸತತ 7 ಸೋಲನುಭವಿಸಿದ ಬಳಿಕ ಆರ್‌ಸಿಬಿ ಮೊದಲ ಗೆಲುವು ದಾಖಲಿಸಿತು. ಚೆನ್ನೈ ವಿರುದ್ಧ ಆರ್‌ಸಿಬಿ ಕೊನೆಯ ಸಲ ಗೆದ್ದದ್ದು 2014ರಲ್ಲಿ.
* ಆರ್‌ಸಿಬಿ 2013ರ ಬಳಿಕ ಬೆಂಗಳೂರು ಪಂದ್ಯದಲ್ಲಿ ಚೆನ್ನೈಗೆ ಸೋಲುಣಿಸಿತು.
* ಚೆನ್ನೈಅಂತಿಮ ಓವರಿನಲ್ಲಿ 24 ರನ್‌ ಪೇರಿಸಿತು. ಇದು ಚೇಸಿಂಗ್‌ ವೇಳೆ ಕೊನೆಯ ಓವರಿನಲ್ಲಿ ದಾಖಲಾದ 2ನೇ ಅತ್ಯಧಿಕ ರನ್‌. 2009ರ ಕೆಕೆಆರ್‌ ಎದುರಿನ ಪಂದ್ಯದಲ್ಲಿ ಮಶ್ರಫೆ ಮೊರ್ತಜ ಅವರ ಓವರಿನಲ್ಲಿ ಡೆಕ್ಕನ್‌ ಚಾರ್ಜರ್ 26 ರನ್‌ ಗಳಿಸಿದ್ದು ದಾಖಲೆ. 2012ರ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಪುಣೆ ತಂಡದ ಆಶಿಷ್‌ ನೆಹ್ರಾ 24 ರನ್‌ ನೀಡಿದ್ದರು.
* ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನಲ್ಲಿ 4 ಸಾವಿರ ರನ್‌ ಪೂರ್ತಿಗೊಳಿಸಿದ ಮೊದಲ ನಾಯಕನೆನಿಸಿದರು. ಇದು ನಾಯಕನಾಗಿ ಅವರ 150ನೇ ಇನ್ನಿಂಗ್ಸ್‌ ಆಗಿದೆ.
* ಧೋನಿ ಐಪಿಎಲ್‌ನಲ್ಲಿ 200 ಸಿಕ್ಸರ್‌ ಬಾರಿಸಿದ ಭಾರತದ ಮೊದಲ ಆಟಗಾರನೆನಿಸಿದರು. ಉಳಿದಂತೆ ಕ್ರಿಸ್‌ ಗೇಲ್‌ 323, ಎಬಿಡಿ 204 ಸಿಕ್ಸರ್‌ ಹೊಡೆದಿದ್ದಾರೆ.
* ಧೋನಿ ಟಿ20 ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದರು (ಅಜೇಯ 84). ಕಳೆದ ಐಪಿಎಲ್‌ ಋತುವಿನಲ್ಲಿ ಪಂಜಾಬ್‌ ವಿರುದ್ಧ ಅಜೇಯ 79 ರನ್‌ ಹೊಡೆದದ್ದು ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next