ಚೆನ್ನೈ: ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಿಗಿಯಾದ ಬೌಲಿಂಗ್ ದಾಳಿಗೆ ಸಿಲುಕಿದ ಸನ್‌ರೈಸರ್ ಹೈದರಾಬಾದ್ 7 ವಿಕೆಟಿಗೆ 134 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿದೆ.
ಹೈದರಾಬಾದ್ ಬ್ಯಾಟರ್ ಚೆನ್ನೈನ ಸ್ಪಿನ್ ಆಕ್ರಮಣಕ್ಕೆ ಚಡಪಡಿಸಿದರು. ರವೀಂದ್ರ ಜಡೇಜ, ಮಹೀಶ ತೀಕ್ಷಣ ಅವರ ದಾಳಿ ಅತ್ಯಂತ ಹರಿತವಾಗಿತ್ತು. ಜಡೇಜ 22ಕ್ಕೆ 3 ವಿಕೆಟ್ ಕೆಡವಿ ಹೈದರಾಬಾದ್‌ಗೆ ಏಳ್ಗತಿ ಇಲ್ಲದಂತೆ ಮಾಡಿದರು. ಲಂಕೆಯ ಮತ್ತೋರ್ವ ಬೌಲರ್, ಮಧ್ಯಮ ವೇಗಿ ಮಹೀಶ ಪತಿರಣ ಕೂಡ ಭೀತಿಯೊಡ್ಡಿದರು.
ಮೊದಲಾರ್ಧದಲ್ಲಿ ಹೈದರಾಬಾದ್ ಬ್ಯಾಟಿಂಗ್ ಉತ್ತಮ ಮಟ್ಟದಲ್ಲೇ ಇತ್ತು. 9ನೇ ಓವರ್ ವೇಳೆ ಒಂದೇ ವಿಕೆಟ್ ನಷ್ಟಕ್ಕೆ 72 ರನ್ ಮಾಡಿ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ಆದರೆ ಅನಂತರ ಚೆನ್ನೈ ಬೌಲರ್‌ಗಳು ಸಂಪೂರ್ಣ ಮೇಲುಗೈ ಸಾಧಿಸಿದರು. ಕೊನೆಯ 10.4 ಓವರ್‌ಗಳಲ್ಲಿ ಒಟ್ಟುಗೂಡಿದ್ದು ಬರೀ 63 ರನ್!
ಹೈದರಾಬಾದ್ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಇದಕ್ಕೆ ಆಕಾಶ್ ಸಿಂಗ್ ಅವರ ನಿಖರ ದಾಳಿ ಹಾಗೂ ಹ್ಯಾರಿ ಬ್ರೂಕ್ ಅವರ ಶೀಘ್ರ ನಿರ್ಗಮನ ಮುಖ್ಯ ಕಾರಣ. 13 ಎಸೆತಗಳಿಂದ 18 ರನ್ ಮಾಡಿದ ಬ್ರೂಕ್ 5ನೇ ಓವರ್‌ನಲ್ಲೇ ಪೆವಿಲಿಯನ್ ಸೇರಿಕೊಂಡರು. ಆಗ ಸ್ಕೋರ್ 35 ರನ್ ಆಗಿತ್ತು. ದ್ವಿತೀಯ ವಿಕೆಟಿಗೆ ಅಭಿಷೇಕ್ ಶರ್ಮ-ರಾಹುಲ್ ತ್ರಿಪಾಠಿ 36 ರನ್ ಪೇರಿಸಿದರು. 34 ರನ್ ಮಾಡಿದ ಅಭಿಷೇಕ್ ಅವರದು ಅತ್ಯಧಿಕ ಮೊತ್ತ (26 ಎಸೆತ, 3 ಬೌಂಡರಿ, 1 ಸಿಕ್ಸರ್). ಹೈದರಾಬಾದ್ ಸರದಿಯ ಇನ್ನೊಂದು ಸಿಕ್ಸರ್ ರಾಹುಲ್ ತ್ರಿಪಾಠಿ ಹೊಡೆದರು. ತ್ರಿಪಾಠಿ ಗಳಿಕೆ ಎಸೆತಕ್ಕೊಂದರಂತೆ 21 ರನ್.
ನಾಯಕ ಮಾರ್ಕ್‌ರಮ್ (12), ಕೀಪರ್ ಕ್ಲಾಸೆನ್ (17), ಜಾನ್ಸೆನ್ (ಅಜೇಯ 17) ಸಿಡಿಯಲು ವಿಫಲರಾದರು. ಮಾಯಾಂಕ್ ಅಗರ್ವಾಲ್ ಎರಡೇ ರನ್ ಮಾಡಿ ಸ್ಟಂಪ್ಡ್ ಆದರು.