ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಆಡ್ಯಂ ಮಿಲ್ನೆ ಇದೀಗ ಗಾಯದ ಕಾರಣದಿಂದ ಐಪಿಎಲ್ ಕೂಟದಿಂದಲೇ ನಿರ್ಗಮಿಸಿದ್ದಾರೆ. ಮೊದಲ ಪಂದ್ಯದಲ್ಲೇ ಗಾಯಗೊಂಡಿದ್ದ ವೇಗಿ ಮಿಲ್ನೆ ಚೇತರಿಸಿಕೊಳ್ಳದ ಕಾರಣ ಈ ಬಾರಿಯ ಕೂಟದಿಂದ ಹೊರಬಿದ್ದಿದ್ದಾರೆ.
ಆ್ಯಡಂ ಮಿಲ್ನೆ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶ್ರೀಲಂಕಾದ ಯುವ ವೇಗಿಯನ್ನು ಕರೆಸಿಕೊಂಡಿದೆ. 2020 ಮತ್ತು 2022ರ ಅಂಡರ್ 19 ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದ 19 ವರ್ಷದ ಯುವ ವೇಗಿ ಮತೀಶ ಪತಿರಣ ಅವರನ್ನು ಆಯ್ಕೆ ಮಾಡಿದೆ.
ಮತೀಶ ಪತಿರಣ ಲಂಕಾ ದಿಗ್ಗಜ ಲಸಿತ್ ಮಾಲಿಂಗ ಅವರಂತೆಯೇ ಸ್ಲಿಂಗ್ಲಿಂಗ್ ಬೌಲಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ, ಮತೀಶ ಕೇವಲ ಒಂದು ಲಿಸ್ಟ್ ಎ ಮತ್ತು 2 ಟಿ 20 ಪಂದ್ಯಗಳನ್ನಾಡಿದ್ದಾರೆ.
ಇದನ್ನೂ ಓದಿ:ಮಗಳಿಗೆ ಆಕರ್ಷಕ ಹೆಸರಿಟ್ಟ ಪ್ರಿಯಾಂಕಾ ಚೋಪ್ರಾ-ನಿಕ್ ದಂಪತಿ
ಕೂಟದ ಆರಂಭಿಕ ಪಂದ್ಯವಾಡಿದ್ದ ಆ್ಯಡಂ ಮಿಲ್ನೆ 2.3 ಓವರ್ ಗಳಲ್ಲಿ 19 ರನ್ ನೀಡಿದ್ದರು. ಮಂಡಿರಜ್ಜು ಸೆಳೆತಕ್ಕೆ ಒಳಗಾಗಿದ್ದ ಮಿಲ್ನೆ ಇನ್ನೂ ಗುಣಮುಖರಾಗದ ಕಾರಣ ಮತೀಶ ಪತಿರಣ ಅವರನ್ನು ಸಿಎಸ್ ಕೆ ಕ್ಯಾಂಪ್ ಆಯ್ಕೆ ಮಾಡಿದೆ.
ಹಾಲಿ ಚಾಂಪಿಯನ್ ಸಿಎಸ್ ಕೆ ತಂಡವು ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಜಯಿಸಿದೆ.