ಚೆನ್ನೈ: ಕಳೆದ ಸೀಸನ್ ನಲ್ಲಿ ಅರ್ಧಕ್ಕೆ ಕ್ಯಾಪ್ಟನ್ಸಿ ತೊರೆದಿದ್ದ ರವೀಂದ್ರ ಜಡೇಜಾ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಬಾಂಧವ್ಯ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಕಳೆದ ಹಲವು ಸೀಸನ್ ಗಳಿಂದ ಸಿಎಸ್ ಕೆ ತಂಡದ ಅವಿಭಾಜ್ಯ ಅಂಗವಾಗಿದ್ದ ಜಡೇಜಾ ಈ ಬಾರಿ ಬೇರೆ ತಂಡದ ಪರವಾಗಿ ಆಡಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.
ಮೊದಲಿಗೆ, ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ನಿಂದ ಸಿಎಸ್ ಕೆಗೆ ಸಂಬಂಧಿತ ಪೋಸ್ಟ್ ಗಳನ್ನು ಅಳಿಸಿದ್ದರು. ಕೆಲವು ವಾರಗಳ ನಂತರ, ಈ ಹಿಂದೆ ಹಾಕಿದ್ದ ‘ಇನ್ನೊಂದು ದಶಕದವರೆಗೆ ಸಿಎಸ್ ಕೆಗಾಗಿ ಆಡಲು ಬಯಸುತ್ತೇನೆ’ ಎಂಬ ಪೋಸ್ಟನ್ನು ಅಳಿಸಿ ಹಾಕಿದ್ದರು. ಆದರೆ ಇದಕ್ಕೆ ಸಿಎಸ್ ಕೆ ಫ್ರಾಂಚೈಸಿ ಇದೀಗ ತೆರೆ ಎಳೆದಿದೆ.
ಕ್ರಿಕ್‌ಬಜ್ ಪ್ರಕಾರ, ಜಡೇಜಾ ಅವರನ್ನು ಟ್ರೇಡ್ ಮೂಲಕ ಪಡೆಯಲು ಒಂದೆರಡು ತಂಡಗಳು ಸಿಎಸ್ ಕೆ ಬಳಿ ಕೇಳಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಈ ಪ್ರಯತ್ನ ಮಾಡಿತ್ತು ಎಂದು ವರದಿ ದೃಢಪಡಿಸಿದೆ. ಆದರೆ ಸಿಎಸ್ ಕೆ ತನ್ನ ಮಾಜಿ ನಾಯಕನನ್ನು ತಂಡದಿಂದ ಕೈಬಿಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎನ್ನುತ್ತಿದೆ ವರದಿ.
2022ರ ಸೀಸನ್ ಆರಂಭಕ್ಕೆ ಕೆಲವೇ ದಿನಗಳ ಮೊದಲು ಸಿಎಸ್ ಕೆ ತಂಡವು ಜಡೇಜಾ ಅವರನ್ನು ಆಯ್ಕೆ ಮಾಡಿರವುದನ್ನು ಘೋಷಿಸಿತ್ತು. ಆದರೆ ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಎರಡನ್ನು ಗೆದ್ದ ಬಳಿಕ ಜಡೇಜಾ ನಾಯಕತ್ವ ತ್ಯಜಿಸಿದ್ದರು. ಬಳಿಕ ಧೋನಿ ಮತ್ತೆ ನಾಯಕತ್ವ ವಹಿಸಿದ್ದರು. 2023ರ ಸೀಸನ್ ನಲ್ಲಿ ಧೋನಿಯೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್ ಕೆ ಫ್ರಾಂಚೈಸಿ ದೃಢಪಡಿಸಿದೆ.
ಇದನ್ನೂ ಓದಿ:ನನ್ನ ಕೆರಿಯರ್’ಗೆ ಮೈಲೇಜ್ ನೀಡುವ ಸಿನಿಮಾ…; ತೋತಾಪುರಿ ಕುರಿತು ಅದಿತಿ ಮಾತು
ಜಡೇಜಾ ಹೊರತುಪಡಿಸಿ, ಮತ್ತಿಬ್ಬರು ಗುಜರಾತ್ ಆಟಗಾರರಿಗೆ ಇತರ ಫ್ರಾಂಚೈಸಿಗಳು ಟ್ರೇಡ್ ಆಫರ್ ನೀಡಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ ಗುಜರಾತ್ ಟೈಟಾನ್ಸ್ ಸ್ಪಿನ್ನರ್ ಸಾಯಿ ಕಿಶೋರ್ ಮತ್ತು ಆಲ್‌ರೌಂಡರ್ ರಾಹುಲ್ ತೆವಾಟಿಯಾ ಅವರಿಗೆ ಕೆಲವು ತಂಡಗಳು ಟ್ರೇಡ್ ಆಫರ್ ನೀಡಿದೆ. ಆದರೆ ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡವು ಈ ಆಫರ್‌ಗಳನ್ನು ನಿರಾಕರಿಸಿದೆ. ಹೀಗಾಗಿ ಈ ಇಬ್ಬರು ಗುಜರಾತ್ ತಂಡದೊಂದಿಗೆ ಉಳಿಯಲಿದ್ದಾರೆ