Advertisement
ಸಿಆರ್‌ಝಡ್ ವಲಯದಲ್ಲಿ ಆರು ತಿಂಗಳುಗಳಿಂದ ಮರಳುಗಾರಿಕೆ ಸ್ಥಗಿತಗೊಂಡಿತ್ತು. ಕೆಸಿಝಡ್‌ಎಂ ಪರಿಸರ ವಿಮೋಚನ ಪತ್ರ (ಇಸಿ ಕ್ಲಿಯರೆನ್ಸ್ ) ಅವಧಿ 2021ರ ಸೆ. 16ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮರಳುಗಾರಿಕೆಯನ್ನು ನಿಲ್ಲಿಸಲಾಗಿತ್ತು.
ಸಿಆರ್‌ಝಡ್ ವಲಯದ ನೇತ್ರಾವತಿಯಲ್ಲಿ 9 ಮತ್ತು ಫಲ್ಗುಣಿ ನದಿಯಲ್ಲಿ 5 ಬ್ಲಾಕ್‌ಗಳು ಸೇರಿದಂತೆ ಒಟ್ಟು 14 ಬ್ಲಾಕ್ (ದಿಬ್ಬ)ಗಳಲ್ಲಿ ಮರಳು ತೆರವಿಗೆ ಈ ಬಾರಿ ಕೆಸಿಝಡ್‌ಎಂ ಪರಿಸರ ವಿಮೋಚನ ಪತ್ರ (ಇಸಿ ಕ್ಲಿಯರೆನ್ಸ್) ನೀಡಿದೆ. ಕಳೆದ ಬಾರಿ ನೇತ್ರಾವತಿ ನದಿಯಲ್ಲಿ 8, ಫಲ್ಗುಣಿ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ 1 ಬ್ಲಾಕ್ ಸೇರಿದಂತೆ 13 ಬ್ಲಾಕ್ (ದಿಬ್ಬ)ಗಳಲ್ಲಿ ಮರಳು ತೆರವಿಗೆ ಎರಡು ಹಂತಗಳಲ್ಲಿ 105 ಮಂದಿ ಗುತ್ತಿಗೆದಾರರಿಗೆ ಪರವಾನಿಗೆ ನೀಡಲಾಗಿತ್ತು. ಸುಮಾರು 2,35,414 ಮೆ. ಟನ್ ಮರಳು ತೆರವುಗೊಳಿಸಲಾಗಿತ್ತು. ಮರಳುಗಾರಿಕೆಗೆ ಅನುವು ದೊರಕಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಸಂಬಂಧ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ಸೇರಿ ಮರಳುಗಾರಿಕೆಗೆ ಗುತ್ತಿಗೆದಾರರಿಗೆ ಪರವಾನಿಗೆ ಕುರಿತಂತೆ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಿದೆ. ಎಪ್ರಿಲ್ ಮೊದಲ ವಾರದಲ್ಲಿ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಆರಂಭಗೊಳ್ಳುವ ನಿರೀಕ್ಷೆಗಳಿವೆ.
Related Articles
Advertisement
ಪ್ರಸ್ತುತ ನಾನ್‌ಸಿಆರ್‌ಝಡ್ ವಲಯದ 17 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ಚಾಲನೆಯಲ್ಲಿದ್ದು, ಇಲ್ಲಿಂದ ಮರಳು ಕಾಮಗಾರಿಗಳಿಗೆ ಪೂರೈಕೆಯಾ ಗುತ್ತಿದೆ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಪ್ರಕಾರ ನಾನ್ ಸಿಆರ್‌ಝಡ್ ವಲಯದಲ್ಲಿ 50 ಸಾವಿರ ಮೆ. ಟನ್ ಮರಳು ಲಭ್ಯತೆ ಇದೆ.
ಪರವಾನಿಗೆಗಳ ಸಂಖ್ಯೆ ಹೆಚ್ಚಳಎರಡು ವರ್ಷಗಳಲ್ಲಿ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ನೀಡುತ್ತಿದ್ದ ಪರವಾನಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಕಳೆದ ಬಾರಿ ಎರಡು ಹಂತಗಳಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದ ಒಟ್ಟು 105 ಮಂದಿಗೆ ಪರವಾನಿಗೆ ನೀಡಲಾಗಿತ್ತು. ಕರಾವಳಿಯಲ್ಲಿ ಮರಳು ಸಮಸ್ಯೆ ತಲೆದೋರದಂತಾಗಲು 2017ರಲ್ಲಿ ಸಿಆರ್‌ಝಡ್ ಹಾಗೂ ನಾನ್‌ಸಿಆರ್‌ಝಡ್ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ಮರಳು ನೀತಿಯನ್ನು ಅನುಸರಿಸಲು ಕ್ರಮ ಕೈಗೊಳ್ಳಬೇಕು ಮತ್ತು ಆಗ ಇದ್ದಂತೆ ಹೆಚ್ಚಿನ ಮಂದಿಗೆ ಪರವಾನಿಗೆ ನೀಡಬೇಕು ಎಂದು ಕರಾವಳಿ ಭಾಗದ ಶಾಸಕರು ಭೂವಿಜ್ಞಾನ ಮತ್ತು ಗಣಿಗಾರಿಕೆ ಸಚಿವ ಹಾಲಪ್ಪ ಆಚಾರ್ ಅವರಿಗೆ ಮನವಿ ಮಾಡಿದ್ದರು. ಸಿಆರ್‌ಝಡ್ ವಲಯದಲ್ಲಿ ಮರಳುದಿಬ್ಬ ತೆರವಿಗೆ ಕೆಸಿಝಡ್‌ಎಂನಿಂದ ಪರಿಸರ ವಿಮೋಚನಾ ಪತ್ರ ಲಭಿಸಿದೆ. ಕಳೆದ ಬಾರಿ ಇದ್ದ ಪರವಾನಿಗೆಗಳಲ್ಲದೆ ಹೊಸದಾಗಿಯೂ ಪರವಾನಿಗೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಶೀಘ್ರದಲ್ಲೆ ಸಭೆ ಸೇರಿ ಪರಿಶೀಲಿಸಿ ಕ್ರಮಗಳನ್ನು ಕೈಗೊಳ್ಳಲಿದೆ.
-ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ,
ದ. ಕನ್ನಡ