Advertisement

ಸಿಆರ್‌ಝಡ್‌ ಮರಳು: ಟಾಸ್ಕ್ಪೋರ್ಸ್‌ ನಿರ್ಧಾರಕ್ಕೆ ಉಚ್ಚ ನ್ಯಾಯಾಲಯ ಒಪ್ಪಿಗೆ

12:19 AM Mar 27, 2019 | sudhir |

ಮಂಗಳೂರು: ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ 2011-12ರ ಆರ್ಥಿಕ ವರ್ಷದ ಮಾನದಂಡ ಅನುಸರಿಸಿಕೊಂಡು ಮರಳು ದಿಬ್ಬ ತೆರವುಗೊಳಿಸುವುದಕ್ಕೆ ಪರವಾನಿಗೆ ನೀಡಲು ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯ “ಜಿಲ್ಲಾ ಮರಳು ಕಾರ್ಯಪಡೆ ಸಮಿತಿ’ ತೆಗೆದುಕೊಂಡ ನಿರ್ಧಾರವನ್ನು ಹೈಕೋರ್ಟ್‌ ಇದೀಗ ಎತ್ತಿಹಿಡಿದಿದೆ.

Advertisement

2011-12ರ ಮಾನದಂಡ ಅನುಸರಿಸಿಕೊಂಡು 2018ರ ಸೆ. 20ರಂದು ಜಿಲ್ಲಾ ಮರಳು ಕಾರ್ಯಪಡೆ ಸಮಿತಿ ಮರಳು ತೆರವುಗೊಳಿಸಲು ಸಿಆರ್‌ಝಡ್‌ ವಲಯದಲ್ಲಿ ಪರವಾನಿಗೆ ನೀಡಿತ್ತು. ಆದರೆ ಸಮಿತಿಯ ಅಂದಿನ ತೀರ್ಮಾನವನ್ನು ಪ್ರಶ್ನಿಸಿ ಮಂಗಳೂರು ತಾಲೂಕಿನ ಅಬ್ದುಲ್‌ ಮಜೀದ್‌ ಹಾಗೂ ಅಬ್ದುಲ್‌ ಗಫೂರ್‌ ರಾಜ್ಯ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಜಿಲ್ಲಾ ಮರಳು ಕಾರ್ಯಪಡೆ ಸಮಿತಿ ಅನುಸರಿಸಿದ್ದ ಮಾನದಂಡದ ಪ್ರಕಾರ 2011-12ರಲ್ಲಿದ್ದ ಸಾಂಪ್ರಾದಾಯಿಕ ಮರಳುಗಾರಿಕೆ ನಡೆಸುವ 53 ಮಂದಿಗೆ ಮಾತ್ರ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ನಡೆಸಲು ಅನುಮತಿ
ನೀಡಲಾಗಿತ್ತು. ಇದರ ಸಂಖ್ಯೆ ಮುಂದಿನ 5 ವರ್ಷಗಳಲ್ಲಿ ಸುಮಾರು 538ಕ್ಕೇರಿತ್ತು. ಅದನ್ನು ಪರಿಗಣಿಸಿ ಸಾಂಪ್ರದಾ ಯಿಕ ಮರಳುಗಾರಿಕೆದಾರರ ಹಿತವನ್ನು ರಕ್ಷಿಸುವ ನಿಟ್ಟಿನಲ್ಲಿ 2018ರಲ್ಲಿ ಸಮಿತಿಯು ಮರಳುಗಾರಿಕೆಗೆ ಅನುಮತಿ ನೀಡಲು 2011-12 ರ ಮಾನದಂಡವನ್ನು ಅನುಸರಿಸುವ ನಿರ್ಣಯ ಕೈಗೊಂಡಿತ್ತು. ಆದರೆ ಸಮಿತಿಯ ತೀರ್ಮಾನ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿದಾರರು ದಾವೆ ಹೂಡಿದ್ದರು.

ಅರ್ಜಿದಾರರ ಪರ ವಾದಿಸಿದ್ದ ನ್ಯಾಯವಾದಿಗಳು 2012ರಿಂದ 2017ರ ವರೆಗೆ ಮರಳು ಗಾರಿಕೆಗೆ ಅನುಮತಿ ಪಡೆದಿದ್ದರು. ಆದರೆ 2018ರಲ್ಲಿ ಮರಳುಗಾರಿಕೆಗೆ ಅನುಮತಿ ನೀಡಲು 2011-12ರ ಮಾನದಂಡವನ್ನು ಅನುಸರಿಸುವ ಸಮಿತಿಯ ನಿರ್ಧಾರದಿಂದ ಅರ್ಜಿದಾರರು ಪರವಾನಿಗೆಯಿಂದ ವಂಚಿತರಾಗಿದ್ದು, ಜೀವನೋಪಾಯ ಹಕ್ಕಿನಿಂದ ವಂಚಿತರಾಗಿದ್ದಾರೆ. ಹೀಗಾಗಿ 2018ರ ಸಮಿತಿಯ ನಿರ್ಣಯವನ್ನು ರದ್ದುಪಡಿಸಬೇಕೆಂದು ನ್ಯಾಯಾಲಯವನ್ನು ಕೋರಿದ್ದರು.

ಇನ್ನು ಕಾರ್ಯಪಡೆ ಸಮಿತಿ ಪರ ವಾದ ಮಂಡಿಸಿದ್ದ ನ್ಯಾಯವಾದಿಗಳು, ನೀರಿನ ಸರಾಗ ಹರಿಯವಿಕೆಯನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವವರನ್ನು ದೃಷ್ಟಿಯಲ್ಲಿಟ್ಟುಕೊಂಡು 2018ರ ನಿರ್ಣಯವನ್ನು ಅಂಗೀಕರಿಸಲಾಗಿದೆ. 2011- 12ರಲ್ಲಿ ಸ್ಥಳೀಯ 53 ಸಾಂಪ್ರದಾಯಿಕ ಮರಳುಗಾರಿಕೆ ಕುಟುಂಬಗಳಿಗೆ ಪರವಾನಿಗೆ ನೀಡಲಾಗಿತ್ತು.

Advertisement

ಆದರೆ 2014ರಲ್ಲಿ ಅರ್ಜಿದಾರರ ಸಂಖ್ಯೆ 240ಕ್ಕೇರಿತ್ತು. ಈ ಏರಿಕೆ
ಮನಗಂಡು 2011-12ರ ಆರ್ಥಿಕ ವರ್ಷವನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಸ್ಥಳೀಯ ಸಾಂಪ್ರದಾಯಿಕ ಮರಳುಗಾರರ ಹಿತವನ್ನು ಪರಿಗಣಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ವಾದ ಮಂಡಿಸಿದ್ದರು.
ಪ್ರತಿವಾದಿ ದ.ಕ. ಜಿಲ್ಲಾ ಮರಳು ಕಾರ್ಯಪಡೆ ಸಮಿತಿಯ ವಾದವನ್ನು ಪರಿಗಣಿಸಿ ನ್ಯಾಯಾಲಯವು ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next