ವಾಷಿಂಗ್ಟನ್/ನ್ಯೂಯಾರ್ಕ್: ಆರ್ಥಿಕ ಜಗತ್ತಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚಿದ ಆಘಾತ ಅನುಭವಿಸುತ್ತಿರುವಂತೆಯೇ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಿಗ್ನೇಚರ್ ಬ್ಯಾಂಕ್ ತನ್ನ ವಹಿವಾಟು ಸ್ಥಗಿತಗೊಳಿಸಿದೆ.
ಕ್ರಿಪ್ಟೋ ಕರೆನ್ಸಿ ಕ್ಷೇತ್ರದ ವಹಿವಾಟಿನಲ್ಲಿ ಅದು ಪ್ರಧಾನ ಪಾತ್ರ ವಹಿಸುತ್ತಿತ್ತು. ವಹಿವಾಟಿನ ಅಂತ್ಯದಲ್ಲಿ ಕ್ರಿಪ್ಟೋ ಎಕ್ಸ್‌ಚೇಂಜ್ “ಕಾಯಿನ್ ಬೇಸ್’ ಬ್ಯಾಂಕ್‌ನಲ್ಲಿ 240 ಮಿಲಿಯನ್ ಡಾಲರ್ ಠೇವಣಿ ಹೊಂದಿತ್ತು.
ಬ್ಯಾಂಕ್‌ನಲ್ಲಿ ಗ್ರಾಹಕರು ಇರಿಸಿರುವ ಠೇವಣಿ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಫ್ಡಿಐಸಿ) ನಿಯಂತ್ರಣಕ್ಕೆ ಬಂದಿದೆ. ಜತೆಗೆ ನ್ಯೂಯಾರ್ಕ್‌ನ ವಿತ್ತೀಯ ಸೇವೆಗಳ ವಿಭಾಗದ ಸುಪರ್ದಿಗೆ ಬಂದಿದೆ. 2008ರ ಬಳಿಕ ಮತ್ತೊಂದು ಬ್ಯಾಂಕಿಂಗ್ ಕುಸಿತಕ್ಕೆ ಅಮೆರಿಕದಲ್ಲುಂಟಾಗಲಿದೆಯಾ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.
ಕಠಿಣ ಕ್ರಮ ನಿಶ್ಚಿತ- ಬೈಡೆನ್: ಅಮೆರಿಕದಲ್ಲಿ ಉಂಟಾಗಿರುವ ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟಿಗೆ ಕಾರಣರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧ್ಯಕ್ಷ ಜೋ ಬೈಡೆನ್ ವಾಗ್ಧಾನ ಮಾಡಿದ್ದಾರೆ.
Related Articles
ಸಿಗ್ನೇಚರ್ ಬ್ಯಾಂಕ್ ಮತ್ತು ಎಸ್‌ವಿಬಿ ಬಿಕ್ಕಟ್ಟಿಗೆ ಕಾರಣವಾದ ಅಂಶಗಳ ಬಗ್ಗೆ ವಿತ್ತ ಖಾತೆಯ ಜತೆಗೆ ಚರ್ಚಿಸಿದ್ದೇನೆ ಎಂದರು. ಜತೆಗೆ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಅರ್ಥ ವ್ಯವಸ್ಥೆ ಸುಭದ್ರವಾಗಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಜತೆಗೆ ಠೇವಣಿದಾರರಿಗೆ ಕೂಡ ಆತಂಕ ಬೇಡ ಎಂದು ಭರವಸೆ ನೀಡಿದ್ದಾರೆ.
99.52 ರೂ.ಗೆ ಎಸ್‌ವಿಬಿ ಖರೀದಿ!
ಬ್ಯಾಂಕ್ ಖರೀದಿ ಎಂದರೆ ಸಾವಿರಾರು ಕೋಟಿ ವಹಿವಾಟಿನ ಡೀಲ್. ಆದರೆ, ಸದ್ಯ ಬಾಗಿಲು ಮುಚ್ಚಿರುವ ಎಸ್‌ವಿಬಿಯ ಇಂಗ್ಲೆಂಡ ಸಹವರ್ತಿಯನ್ನು ಎಚ್‌ಎಸ್‌ಬಿಸಿ ಬ್ಯಾಂಕ್, ಸಾಂಕೇತಿಕವಾಗಿ 99.52 ರೂ. ನೀಡಿ ಖರೀದಿಸಿದೆ! ಬ್ರಿಟನ್‌ನ ತಾಂತ್ರಿಕ ಸ್ಟಾರ್ಟಪ್ ಗಳಿಗಾಗಿ ಪ್ರಮುಖ ಬ್ಯಾಂಕನ್ನು ಉಳಿಸುವುದು, ಬ್ಯಾಂಕ್ ಭಾರೀ ಕುಸಿತ ತಡೆಯಲು ಸಹಾಯ ಮಾಡುವುದು ಇದರ ಉದ್ದೇಶ. ಬ್ರಿಟನ್ ಸರ್ಕಾರ ಕೂಡ ಕ್ಯಾಲಿಫೋರ್ನಿಯದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಇಂಗ್ಲೆಂಡ್ ಶಾಖೆಯನ್ನು ಖರೀದಿ ಮಾಡುವವರಿಗಾಗಿ ಶೋಧ ನಡೆಸುತ್ತಿತ್ತು.
ಚಿಲ್ಲರೆ ಕ್ಷೇತ್ರದ ಹಣದುಬ್ಬರ ಇಳಿಕೆ
ದೇಶದಲ್ಲಿ ಪ್ರಸಕ್ತ ವರ್ಷ ಫೆಬ್ರವರಿಗೆ ಸಂಬಂಧಿಸಿದಂತೆ ಚಿಲ್ಲರೆ ಹಣದುಬ್ಬರ ದರ ಶೇ.6.44 ಇಳಿಕೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ದತ್ತಾಂಶಗಳಲ್ಲಿ ಉಲ್ಲೇಖಿಸಲಾಗಿದೆ.
ಜನವರಿಯಲ್ಲಿ ಅದರ ಪ್ರಮಾಣ, ಶೇ.6.52 ಆಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣ ಶೇ.6.7 ಆಗಿದ್ದರೆ, ನಗರ ಪ್ರದೇಶಗಳಲ್ಲಿ ಶೇ.6.1 ಎಂದು ಸರ್ಕಾರ ತಿಳಿಸಿದೆ.
ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಣದುಬ್ಬರ ಕೂಡ ಜನವರಿಯಲ್ಲಿ ಶೇ.6 ಇದ್ದದ್ದು ಕಳೆದ ತಿಂಗಳಿಗೆ ಶೇ.5.95ಕ್ಕೆ ಇಳಿಕೆಯಾಗಿದೆ. 2022 ನವೆಂಬರ್ ಮತ್ತು ಡಿಸೆಂಬರ್ ಅನ್ನು ಹೊರತುಪಡಿಸಿ, ಹಣದುಬ್ಬರ ಪ್ರಮಾಣ ಆರ್‌ಬಿಐ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಾಗಿಯೇ ಮುಂದುವರಿದಿತ್ತು.