ಕನ್ನಡಕ್ಕೆ ದಿನ ಕಳೆದಂತೆ ಹೊಸಬರು ಕಾಲಿಡುತ್ತಲೇ ಇದ್ದಾರೆ. ಆ ಸಾಲಿಗೆ ಈಗ “ಕ್ರಶ್’ ಚಿತ್ರತಂಡವೂ ಸೇರ್ಪಡೆಯಾಗಿದೆ. ಹೌದು, ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಶೇ.60 ರಷ್ಟು ಶೂಟಿಂಗ್ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಅಭಿ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಇವರಿಗೆ ಇದು ಮೊದಲ ಚಿತ್ರ. ಈ ಹಿಂದೆ “ಕಿರಾತಕ’ ಹಾಗು “ಮಮ್ಮಿ ಸೇವ್ ಮಿ’ ಚಿತ್ರ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಆರ್ಯ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಆರ್ಯ, “ರಂಗ್‌ಬಿರಂಗಿ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ಇವರಿಗೆ ನಾಯಕಿಯಾಗಿ ಪ್ರತಿಭಾ ಎಂಬ ಹೊಸ ಪ್ರತಿಭೆ ಜೋಡಿಯಾಗಿದೆ.
“ಕ್ರಶ್’ ಅಂದಾಕ್ಷಣ, ಇದು ಪಕ್ಕಾ ಲವ್‌ಸ್ಟೋರಿ ಚಿತ್ರ ಅಂತ ಹೇಳುವ ಅಗತ್ಯವಿಲ್ಲ. ಮೊದಲ ಸಲ ಹುಡುಗ ಅಥವಾ ಒಬ್ಬರನ್ನೊಬ್ಬರನ್ನು ನೋಡಿದಾಗ ಆಗುವ ಆಕರ್ಷಣೆಯೇ ಈ “ಕ್ರಶ್’. ಆ ವಿಷಯ ಇಟ್ಟುಕೊಂಡೇ ನಿರ್ದೇಶಕರು ಲವ್‌ಸ್ಟೋರಿ ಹೆಣೆದು ಚಿತ್ರ ಮಾಡಿದ್ದಾರೆ. ಹಾಗಂತ, ಇಲ್ಲಿ ಬರೀ ಪ್ರೀತಿಗೆ ಜಾಗವಿಟ್ಟಿಲ್ಲ. ಇಲ್ಲಿ ತಾಯಿ ಸೆಂಟಿಮೆಂಟ್, ಎಮೋಷನ್ಸ್, ಅಲ್ಲಲ್ಲಿ ಹಾಸ್ಯ ಇತ್ಯಾದಿ ಅಂಶಗಳೂ ಚಿತ್ರದಲ್ಲಿವೆ. ಹುಡುಗಿಯೊಬ್ಬಳನ್ನು ಹುಡುಗ ನೋಡಿದಾಗ, ಆಕೆಯ ಮೇಲೆ “ಕ್ರಶ್’ ಆಗಿ ಹೇಗೆಲ್ಲಾ ಅವಳನ್ನು ಇಂಪ್ರಸ್ ಮಾಡುತ್ತಾನೆ ಎಂಬುದು ಕಥೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಅಭಿ.
ಇನ್ನು, ಚಿತ್ರದಲ್ಲಿ ಮಂಜುನಾಥ ಹೆಗ್ಡೆ ಅವರು ತಂದೆ ಪಾತ್ರ ನಿರ್ವಹಿಸಿದರೆ, ಅಭಿನಯ ಅವರಿಲ್ಲಿ ತಾಯಿಯಾಗಿ ನಟಿಸುತ್ತಿದ್ದಾರೆ. ಅಭಿನಯ ಅವರಿಗೆ ಎರಡು ಶೇಡ್ ಪಾತ್ರವಿದ್ದು, ಅದನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ನಿರ್ದೇಶಕರು, ಈಗಾಗಲೇ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಶೇ.60 ರಷ್ಟು ಚಿತ್ರೀಕರಣ ನಡೆಸಿದ್ದು, ಎರಡನೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಚಿತ್ರೀಕರಿಸುವುದಾಗಿ ಹೇಳುತ್ತಾರೆ.
ಚಿತ್ರಕ್ಕೆ ಸತೀಶ್ ಛಾಯಾಗ್ರಹಣವಿದೆ. “ಮುದ್ದು ಮನಸೇ’ ಚಿತ್ರಕ್ಕೆ ಸಂಗೀತ ನೀಡಿದ್ದ ವಿನೀತ್‌ರಾಜ್ ಮೆನನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ. ಸೆಂಟಿಮೆಂಟ್, ಡ್ಯುಯೆಟ್ ಹಾಗು ಡ್ಯಾನ್ಸಿಂಗ್ ಸಾಂಗ್ ಚಿತ್ರದಲ್ಲಿವೆ. ನಿರ್ದೇಶಕ ಅಭಿ ಕಥೆ, ಚಿತ್ರಕಥೆ ಬರೆದರೆ, ವಸಂತ್ ಎಂಬ ಹೊಸ ಪ್ರತಿಭೆ ಸಂಭಾಷಣೆ ಬರೆದಿದ್ದಾರೆ.