ಕಲಾದಗಿ: ಕಳೆದೊಂದು ವಾರದಿಂದ ಘಟಪ್ರಭೆ ನದಿ ಭೋರ್ಗರೆಯುತ್ತಿದ್ದು ಸುತ್ತಮುತ್ತಲಿನ ಗ್ರಾಮಗಳ ನೂರಾರು ಯುವಕರು ಬಡೇ(ದೊಡ್ಡ) ಮೀನುಗಳ ಭರ್ಜರಿ ಭೇಟೆಯಲ್ಲಿ ತೊಡಗಿದ್ದಾರೆ.
ಪ್ರತಿ ವರ್ಷ ಆಲಮಟ್ಟಿ ಹಿನ್ನೀರು ಘಟಪ್ರಭಾ ನದಿಗೆ ಬರುವ ವೇಳೆ ಗ್ರಾಮದ ಸೈಪುದ್ದೀನ ಗುಡ್ಡದ ಸಮೀಪವಿರುವ ಬಾಂದಾರ ಬಳಿ ನೂರಾರು ಯುವಕರು ಕೂಡಿಕೊಂಡು ನಾಲಾಗಳಿಗೆ ಬಲೆ ಹಾಕಿ ದೊಡ್ಡ ದೊಡ್ಡ ಗಾತ್ರದ ಮೀನುಗಳನ್ನು ಹಿಡಿದು ಸಂಭ್ರಮಿಸುತ್ತಾರೆ.
40-50 ಕೆಜಿ ಮೀನುಗಳು: ಬಾಂದಾರ ಬ್ಯಾರೇಜ್ ಬಳಿ ಬಲೆಗೆ ಬೀಳುವ ಮೀನುಗಳು ಸಣ್ಣವು ಅಲ್ಲ. ಬರೊಬ್ಬರಿ 40ರಿಂದ 50 ಕೆಜಿ ತೂಕ ಹೊಂದುವ ಬಡೇ(ದೊಡ್ಡ) ಗಾತ್ರದ ಮೀನುಗಳು. ದಿನ ಒಂದಕ್ಕೆ 6 ರಿಂದ 8 ಮೀನುಗಳು ಬಲೆಗೆ ಬೀಳುತ್ತಿವೆ. ಕಟ್ಲೆ ಮೀನು, ಬಾಳೆಮೀನು, ಹಾವು ಮೀನು ಇನ್ನಿತರ ದೊಡ್ಡ ದೊಡ್ಡ ಗಾತ್ರದ ಮೀನುಗಳು ಬಲೆಗೆ ಬೀಳುತ್ತಿವೆ. ಆಲಮಟ್ಟಿ ಹಿನ್ನೀರು ಘಟಪ್ರಭಾ ನದಿಗೆ ಬರುವ ವೇಳೆ ಈ ಮೀನುಗಳು ಘಟಪ್ರಭಾ ನದಿಗೆ ಬರುತ್ತಿವೆ ಎಂದು ಮೀನು ಪ್ರಿಯರು ಹೇಳುತ್ತಾರೆ.
ನದಿ ಬಳಿಯೇ ವ್ಯಾಪಾರ: ವ್ಯಾಪಾರಸ್ಥರು ನದಿ ಬಳಿಯೇ ಬಂದು ವ್ಯಾಪಾರ ವಹಿವಾಟು ಮಾಡುತ್ತಾರೆ, ಮೀನು ಆಹಾರ ಪ್ರಿಯರು ಸಹಿತ ನದಿ ಬಳಿಯೇ ಬಂದು ತಾಜಾ ಮೀನು ಖರೀದಿಸುತ್ತಾರೆ. ಇದೆಲ್ಲವೂ ನಡೆಯುವುದು ವಾರ ಮಾತ್ರ. ಬಾಂದಾರ ಬ್ಯಾರೇಜ್ ನೀರು ತುಂಬಿಕೊಂಡ ನಂತರ ಈ ಮೀನು ಹಿಡಿಯುವ, ವ್ಯವಹಾರ ನಡೆಯಲ್ಲ. ಹಿನ್ನೀರು ಬಂದು ಬ್ಯಾರೇಜ್ ತುಂಬಿಕೊಳ್ಳುವ ಮುನ್ನ ಒಂದು ವಾರ ಮಾತ್ರ ಮೀನು ಸಂತೆ ಸಂಭ್ರಮ.
ಇವರ್ಯಾರೂ ಮೀನುಗಾರರಲ್ಲ: ಮೀನು ಹಿಡಿಯುವ ಇವರ್ಯಾರು ಮೀನುಗಾರರಲ್ಲ. ಬದಲಿಗೆ ಕಾತರಕಿ, ಶಿರಗುಂಪಿ ನಿಂಗಾಪುರ, ಕಲಾದಗಿ ಗ್ರಾಮಗಳ ಮೀನುಪ್ರಿಯ ರೈತರು. ಯುವಕರು.