ತೀರಾ ಅಲ್ಪ ಪ್ರಮಾಣದಲ್ಲಿ ಕಚ್ಚಾ ತೈಲ ಲಭ್ಯವಿರುವುದರಿಂದ ವಿದೇಶಗಳ ಅವಲಂಬನೆ ಅನಿವಾರ್ಯವಾಗಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಭಾರತ
ಕಚ್ಚಾ ತೈಲ ಖರೀದಿಯ ಬದಲಾಗಿ ತೈಲ ಮಾರಾಟ ಕ್ಷೇತ್ರದಲ್ಲಿ ಭಾರೀ ಸದ್ದು ಮಾಡತೊಡಗಿದೆ. ಪ್ರತೀ ದಿನ ಭಾರತ 3.5ಲಕ್ಷ ಬ್ಯಾರಲ್‌ಗಳಿಗೂ ಅಧಿಕ ಅಂದರೆ ಸುಮಾರು 55 ಮಿಲಿಯನ್ ಲೀಟರ್‌ಗಳಷ್ಟು ಸಂಸ್ಕರಿತ ತೈಲವನ್ನು ಯುರೋಪಿಯನ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಈ ಮೂಲಕ ಸಂಸ್ಕರಿತ
ತೈಲ ಮಾರಾಟ ಕ್ಷೇತ್ರದಲ್ಲಿ ತೈಲ ದಿಗ್ಗಜ ರಾಷ್ಟ್ರವಾದ ಸೌದಿ ಅರೇಬಿಯಾವನ್ನೂ ಹಿಂದಿಕ್ಕಿದೆ.
Advertisement
ಗಲ್ಫ್ ದೇಶಗಳಿಂದ ಆಮದುಕಳೆದ ವರ್ಷ ಫೆಬ್ರವರಿ ಕೊನೆಯ ವಾರದಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏಕಾಏಕಿ ಹೆಚ್ಚಾಗಿ ಒಂದು ಬ್ಯಾರಲ್‌ಗೆ 140 ಡಾಲರ್‌ಗಳಿಗೆ ತಲುಪಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯನ್ನು ಕಡಿಮೆಗೊಳಿಸುವ ಸಲುವಾಗಿ ಅಮೆರಿಕ ತನ್ನ ಕಚ್ಚಾ ತೈಲದ ಸಂಗ್ರಹಣೆಯನ್ನು ಬಳಕೆ ಮಾಡಲು ನಿರ್ಧರಿಸಿತು. ಈ ವೇಳೆ ಭಾರತವು ತನ್ನ ಬೇಡಿಕೆಯ ಶೇ. 60ರಷ್ಟು ಕಚ್ಚಾ ತೈಲವನ್ನು ಗಲ್ಫ್ ರಾಷ್ಟ್ರಗಳಿಂದ
ಖರೀದಿಸುತ್ತಿತ್ತು ಹಾಗೂ ಶೇ.2ರಷ್ಟನ್ನು ಮಾತ್ರವೇ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿತ್ತು.
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ 2022ರ ಮಾರ್ಚ್‌ನಲ್ಲಿ ಅಮೆರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ತೈಲವನ್ನು ಖರೀದಿಸುವುದರ ಮೇಲೆ ನಿರ್ಬಂಧ ಹೇರಿದವು. ಆದರೆ ಭಾರತ ಇದನ್ನು ಧಿಕ್ಕರಿಸಿತು. 2022ರ ಎಪ್ರಿಲ್‌ನಲ್ಲಿ ರಷ್ಯಾವು ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ರಷ್ಯಾವು ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸಿತು. 2021-22ರಲ್ಲಿ ಭಾರತವು ರಷ್ಯಾದಿಂದ 18 ಸಾವಿರ ಕೋಟಿ ರೂ. ಹಾಗೂ 2022-23ರ ಮೊದಲಾರ್ಧದಲ್ಲಿ 89 ಸಾವಿರ ಕೋಟಿ ರೂ. ಮೌಲ್ಯದ ಕಚ್ಚಾ ತೈಲವನ್ನು ಖರೀದಿಸಿತ್ತು. ಯುರೋಪ್, ಅಮೆರಿಕ ಹಾಗೂ ಜಿ 7 ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸದಂತೆ ಭಾರತದ ಮೇಲೆ ಎಷ್ಟೇ ಒತ್ತಡ ಹೇರಿದರೂ, ಭಾರತ ಮಾತ್ರ ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿತ್ತು. ರಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾತೈಲ ಸಂಸ್ಕರಿಸಿ ವಿದೇಶಗಳಿಗೆ ತೈಲ ರಫ್ತು
ರಷ್ಯಾದಿಂದ ತೈಲ ಖರೀದಿಯ ಮೇಲೆ ನಿರ್ಬಂಧ ಹೇರಿದ್ದರಿಂದಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ ತೈಲ ಕೊರತೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಪಾಶ್ಚಾತ್ಯ ದೇಶಗಳು ತಮ್ಮ ತೈಲದ ಬೇಡಿಕೆಯನ್ನು ಪೂರೈಸಿಕೊಳ್ಳಲು ಇತರ ದೇಶಗಳತ್ತ ಮುಖ ಮಾಡಿದವು. ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡ ಭಾರತ ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ಖರೀದಿಸಿ, ಅದನ್ನು ಸಂಸ್ಕರಿಸಿ ಯುರೋಪ್ ರಾಷ್ಟ್ರಗಳಿಗೆ ಮಾರಾಟ ಮಾಡಿತು.
Related Articles
ಯುದ್ಧಾರಂಭಕ್ಕೂ ಮುನ್ನ ಯುರೋಪ್ ಭಾರತದಿಂದ ಪ್ರತೀ ದಿನ 1.54 ಲಕ್ಷ ಬ್ಯಾರಲ್‌ಗಳಷ್ಟು ಸಂಸ್ಕರಿತ ತೈಲವನ್ನು ಖರೀದಿಸುತ್ತಿದ್ದರೆ ಅನಂತರ ಇದು ದಿನಕ್ಕೆ 2ಲಕ್ಷ ಬ್ಯಾರಲ್‌ಗೆ ಏರಿಕೆಯಾಗಿತ್ತು. 2023ರ ಮೇಯಲ್ಲಿ ದಿನಕ್ಕೆ 3.60 ಲಕ್ಷ ಬ್ಯಾರಲ್‌ಗೆ ಏರಿಕೆಯಾಗಿದೆ.
Advertisement
ಭಾರತ ತೈಲ ರಫ್ತುದಾರ ರಾಷ್ಟ್ರವಾದುದು ಹೇಗೆ?ಭಾರತ ಮತ್ತು ಚೀನದಂತಹ ದೇಶಗಳು ವಿವಿಧ ದೇಶಗಳಿಂದ ಕಚ್ಚಾ ತೈಲವನ್ನು ಖರೀದಿಸಿ ಅದನ್ನು ಸಂಸ್ಕರಿಸುತ್ತವೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಕಚ್ಚಾ ತೈಲ ಸಂಸ್ಕರಣೆ ಬಲು ಅಗ್ಗ. ರಿಲಯನ್ಸ್, ಬಿಪಿಸಿಎಲ್ ಮತ್ತು ಐಒಸಿಎಲ್‌ನಂತಹ ದೊಡ್ಡ ಕಂಪೆನಿಗಳು ತೈಲ ಸಂಸ್ಕರಣ ಘಟಕಗಳನ್ನು ಹೊಂದಿವೆ. ಚೀನ, ಭಾರತ, ಸಿಂಗಾಪುರ ಮತ್ತು ಯುಎಇ ತೈಲ ಸಂಸ್ಕರಣ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರು ವುದರಿಂದ ಈ ಇವುಗಳನ್ನು “ಲಾಂಡ್ರೊ ಮ್ಯಾಟ್ ದೇಶಗಳು’ ಎಂದು ಕರೆಯಲಾಗುತ್ತದೆ. “ಲಾಂಡ್ರೊ ಮ್ಯಾಟ್’ ಅಂದರೆ ವಾಶಿಂಗ್ ಮಶಿನ್ ಎಂದರ್ಥ. ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ರಷ್ಯಾದ ವಿರುದ್ಧ ನಿರ್ಬಂಧ ಹೇರಿದ ಬಳಿಕ ಚೀನ, ಭಾರತ, ಸಿಂಗಾಪುರ, ಯುಎಇ ಮತ್ತು ಟರ್ಕಿ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣದಲ್ಲಿ ಶೇ.140ರಷ್ಟು ಹೆಚ್ಚಳವಾಗಿದೆ. ಯುರೋಪ್‌ಗೆ ತೈಲ ಮಾರಾಟದಿಂದ ಭಾರತಕ್ಕೇನು ಲಾಭ
ಅತೀ ದೊಡ್ಡ ತೈಲ ಸಂಸ್ಕರಣ ದೇಶವಾಗಿರುವ ಭಾರತಕ್ಕೆ ಯುರೋಪ್ ರಾಷ್ಟ್ರಗಳಿಗೆ ತೈಲವನ್ನು ಮಾರಾಟ ಮಾಡುವುದರಿಂದ ಬಹಳಷ್ಟು ಪ್ರಯೋಜನ ಮತ್ತು ಲಾಭವಿದೆ. 01 ಭಾರತದ ತೈಲ ಸಂಸ್ಕರಣ ಸಾರ್ಮಥ್ಯವು ದೇಶಿಯ ಬೇಡಿಕೆಗಿಂತ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಯುರೋಪಿಯನ್ ರಾಷ್ಟ್ರಗಳಿಗೆ ತೈಲ ಮಾರಾಟ ಮಾಡುವುದರಿಂದ ಭಾರತದ ತೈಲ ಕಂಪೆನಿಗಳು ಅತೀ ಹೆಚ್ಚು ಲಾಭ ಗಳಿಸುತ್ತಿವೆ.
02 ಒಂದು ತಿಂಗಳಿಗಿಂತ ಹೆಚ್ಚು ಸಮಯದವರೆಗೆ ತೈಲವನ್ನು ಸಂಗ್ರಹಿಸಿಡಲು ಅಗತ್ಯವಾದ ವ್ಯವಸ್ಥೆ ಭಾರತದಲ್ಲಿಲ್ಲ. ಹೀಗಾಗಿ ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಸಂಸ್ಕರಿಸಿ ಯುರೋಪ್ ರಾಷ್ಟ್ರಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಭಾರತದ ತೈಲ ಕಂಪೆನಿಗಳ ಲಾಭ ಬಹಳಷ್ಟು ಹೆಚ್ಚಾಗಿದೆ.
03 ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ದೊರೆಯುತ್ತಿರುವುದರಿಂದ ಭಾರತೀಯ ಕಂಪೆನಿಗಳ ತೈಲ ಸಂಸ್ಕರಣ ಪ್ರಮಾಣವು ಏರಿಕೆ ಕಾಣುತ್ತಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿದ್ದರೂ ರಷ್ಯಾದಿಂದ ಕಚ್ಚಾ ತೈಲ ಖರೀದಿ ಭಾರತಕ್ಕೆ ತುಟ್ಟಿ!?
ರಷ್ಯಾ ಪ್ರತೀ ದಿನಕ್ಕೆ 10.7 ಮಿಲಿಯನ್ ಬ್ಯಾರಲ್‌ಗಳಷ್ಟು ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ. 2022ರ ಫೆಬ್ರವರಿವರೆಗೆ ಇದರ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದ ಕಚ್ಚಾ ತೈಲ ಯುರೋಪಿಯನ್ ದೇಶಗಳಿಗೆ ರಫ್ತಾಗುತ್ತಿತ್ತು. ಭಾರತ ಕೇವಲ ಶೇ.2ರಷ್ಟು ಕಚ್ಚಾ ತೈಲವನ್ನು ಮಾತ್ರ ಖರೀದಿಸುತ್ತಿತ್ತು. ಬೆಲೆ ಅಗ್ಗವಾಗಿದ್ದರೂ ಭಾರತ ರಷ್ಯಾದ ಭೌಗೋಳಿಕ ಕಾರಣದಿಂದಾಗಿ ಇಷ್ಟೊಂದು ಕನಿಷ್ಠ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಯಾಕೆ?
l ರಷ್ಯಾದ ತೈಲ ಉತ್ಪಾದನೆ ಮಾಡುವ ಪ್ರದೇಶವು
ಪೂರ್ವ ಭಾಗದಿಂದ ಒಂದಿಷ್ಟು ದೂರದಲ್ಲಿದೆ. ಈ ಪ್ರದೇಶದಿಂದ ತೈಲವನ್ನು ಭಾರತಕ್ಕೆ ತರುವುದು ಭಾರೀ ವೆಚ್ಚದಾಯಕ.
l ಇನ್ನು ರಷ್ಯಾದ ಉತ್ತರ ಭಾಗದ ಪ್ರದೇಶಗಳು ಆರ್ಕ್‌ಟಿಕ್ ಪ್ರದೇಶಕ್ಕೆ ಹತ್ತಿರವಿರುವುದರಿಂದ ಹೆಚ್ಚಿನ ಸಮಯ ಇಲ್ಲಿ ಹಿಮವು ಹೆಪ್ಪುಗಟ್ಟಿದ ಸ್ಥಿತಿಯಲ್ಲಿರುವುದರಿಂದ ಭಾರತಕ್ಕೆ ತೈಲ ಸಾಗಾಟ ಕಷ್ಟ.
l ಕಪ್ಪು ಸಮುದ್ರದ ಮೂಲಕ ತೈಲವನ್ನು ಭಾರತಕ್ಕೆ ತರಬಹುದಾದರೂ ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶದ ಸನಿಹದಲ್ಲಿರುವುದರಿಂದ ಯುದ್ಧದ ಹಿನ್ನೆಲೆಯಲ್ಲಿ ಈ ಜಲಮಾರ್ಗವನ್ನು ಮುಚ್ಚಲಾಗಿದೆ.
l ಗಲ್ಫ್ ರಾಷ್ಟ್ರಗಳಿಂದ ಸಮುದ್ರ ಮಾರ್ಗವಾಗಿ ಕಚ್ಚಾ ತೈಲವನ್ನು ಕೇವಲ ಮೂರು ದಿನಗಳಲ್ಲಿ ಭಾರತಕ್ಕೆ ತರಬಹುದು ಮಾತ್ರವಲ್ಲದೆ ಸಾಗಾಟ ವೆಚ್ಚವೂ ಕಡಿಮೆಯಾಗಿರುವುದರಿಂದ ಭಾರತ ಕಚ್ಚಾ ತೈಲಕ್ಕಾಗಿ ರಷ್ಯಾದ ಬದಲು ಈ ರಾಷ್ಟ್ರಗಳನ್ನೇ ಹೆಚ್ಚಾಗಿ ಅವಲಂಬಿಕೊಂಡು ಬಂದಿದೆ. ಭಾರತಕ್ಕೆ ವರದಾನವಾಗಿ ಪರಿಣಮಿಸಿದ್ದು ಹೇಗೆ?
ರಷ್ಯಾ-ಉಕ್ರೇನ್ ಯುದ್ಧಾರಂಭದ ಬಳಿಕ ಗಲ್ಫ್ ರಾಷ್ಟ್ರಗಳಲ್ಲಿನ ಕಚ್ಚಾ ತೈಲಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದರಿಂದ ಸಹಜವಾಗಿಯೇ ಕಚ್ಚಾ ತೈಲದ ಬೆಲೆಯಲ್ಲಿಯೂ ಭಾರೀ ಹೆಚ್ಚಳ ವಾಯಿತು. ಜತೆಯಲ್ಲಿ ಒಪೆಕ್ ರಾಷ್ಟ್ರ ಗಳು ಪದೇಪದೆ ಕಚ್ಚಾತೈಲ ಉತ್ಪಾದನೆಯ ಪ್ರಮಾಣದಲ್ಲಿ ಕಡಿತ ಮಾಡಲಾ ರಂಭಿಸಿದ್ದರಿಂದ ಭಾರತ ಸಹಿತ ಬಹುತೇಕ ಕಚ್ಚಾತೈಲ ಆಮದು ರಾಷ್ಟ್ರಗಳು ಇಕ್ಕಟ್ಟಿಗೆ ಸಿಲುಕುವಂತಾಯಿತು. ಹೀಗಾಗಿ ಪರ್ಯಾಯ ಮಾರ್ಗವಾಗಿ ಭಾರತ ಕಚ್ಚಾತೈಲಕ್ಕಾಗಿ ರಷ್ಯಾವನ್ನು ಹೆಚ್ಚು ಅವಲಂಬಿಸತೊಡಗಿತು. ಅಲ್ಲದೆ ಯುದ್ಧದ ಹಿನ್ನೆಲೆಯಲ್ಲಿ ಯುರೋ ಪಿಯನ್ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿದ್ದರಿಂದಾಗಿ ರಷ್ಯಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲವನ್ನು ಭಾರತಕ್ಕೆ ಮಾರಾಟ ಮಾಡಲು ಸಮ್ಮತಿಸಿದುದು ಭಾರತಕ್ಕೆ ವರದಾನವಾಗಿ ಪರಿಣಮಿಸಿತಲ್ಲದೆ ತೈಲ ಸಂಸ್ಕರಣ ಕಂಪೆನಿಗಳಿಗೂ ಭಾರೀ ಲಾಭವನ್ನು ತಂದುಕೊಟ್ಟಿದೆ. ~ ವಿಧಾತ್ರಿ ಭಟ್, ಉಪ್ಪುಂದ