Advertisement

ಮೀಸಲಾತಿ ಮುಕ್ತ ಸುಳ್ಯಕ್ಕಾಗಿ ಜನಾಂದೋಲನ 

12:48 PM Jan 07, 2018 | |

ಸುಳ್ಯ: ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಸುಳ್ಯ ವಿಧಾನಸಭೆ ಮೀಸಲಾತಿ ಕ್ಷೇತ್ರವಾಗಿ ಮುಂದುವರಿದಿದ್ದು, ಇದನ್ನು ವರ್ಗಾವಣೆಗೊಳಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಜನಾಂದೋಲನ, ಜನಜಾಗೃತಿ ಮೂಡಿಸಲು ಮೀಸಲು ಮುಕ್ತ ಹೋರಾಟ ಸಮಿತಿ ನಿರ್ಧರಿಸಿದೆ. ಶನಿವಾರ ಸುಳ್ಯ ಯುವಜನ ಮಂಡಳಿ ಸಭಾಂಗಣದಲ್ಲಿ ಸಮಾನ ಮನಸ್ಕರನ್ನೊಳಗೊಂಡ ಸಮಾಲೋಚನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

Advertisement

ಮಲೆನಾಡು ಜಂಟಿ ಹೋರಾಟ ಸಮಿತಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕೆ.ಎಲ್‌. ಮಾತನಾಡಿ, 70 ವರ್ಷದಿಂದ ಸುಳ್ಯದಲ್ಲಿ ಮೀಸಲಾತಿ ಇದ್ದು, ಇದು ಸಂವಿಧಾನದ ಪ್ರಜಾಸತ್ತಾತ್ಮಕ ಕಾಯಿದೆಗೆ ವಿರುದ್ಧವಾದದು. ಇದನ್ನು ಬದಲಾಯಿಸುವ ಅವಕಾಶವಿದ್ದು, ಆಂದೋಲನ ಆರಂಭಗೊಳ್ಳಬೇಕಿದೆ. ಸಹಿ ಸಂಗ್ರಹ, ಜನಜಾಗೃತಿ, ಕಾನೂನು ಹೋರಾಟದ ಮೂಲಕ ಗುರಿ ಮುಟ್ಟಲು ಸಾಧ್ಯವಿದೆ. ಮೀಸಲಾತಿ ರದ್ದತಿಗಾಗಿ ಗ್ರಾಮ, ಹೋಬಳಿ ಮಟ್ಟದಲ್ಲಿ ಹೋರಾಟ ಕೈಗೊಳ್ಳಲಾಗುವುದು. ಕ್ಷೇತ್ರದ ಮತದಾರರ ಅಗತ್ಯ ಸಹಿಯೊಂದಿಗೆ ಬದಲಾವಣೆ ಕುರಿತ ಹೋರಾಟಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಸುಮಾರು 1 ಲಕ್ಷ ಸಹಿ ಸಂಗ್ರಹ ಮಾಡಲಾಗುವುದು ಎಂದರು.

ಎಲ್ಲರಿಗೂ ಅವಕಾಶ ಸಿಗಲಿ
ಸಾಮಾಜಿಕ ಕಾರ್ಯಕರ್ತ ಅಶೋಕ್‌ ಎಡಮಲೆ ಮಾತನಾಡಿ, ಗ್ರಾ.ಪಂ., ಜಿ.ಪಂ.ನಲ್ಲಿ ಇರುವ ಆವರ್ತನ ಪದ್ಧತಿ ವಿಧಾನಸಭೆ, ಲೋಕಸಭೆಗೂ ಅನ್ವಯ ಆಗಬೇಕು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಾತಿ ಬದಲಾಗುತ್ತಿದ್ದರೆ ಆ ಕ್ಷೇತ್ರದಲ್ಲಿರುವ ಎಲ್ಲ ವರ್ಗದ ಜನರಿಗೂ ಅವಕಾಶ ದೊರೆಯುತ್ತದೆ. ಗ್ರಾಮಗಳಲ್ಲಿ ಜನಜಾಗೃತಿ ಸಭೆ, ಸಹಿ ಸಂಗ್ರಹ ಕಾರ್ಯ ಆಗಬೇಕು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಹಿರಿಯರನ್ನು, ಸಂಘ – ಸಂಸ್ಥೆಗಳನ್ನು ಸಂಪರ್ಕಿಸಬೇಕು ಎಂದು ವಿವರಿಸಿದರು. ಸಮಿತಿಯ ಪ್ರವೀಣ್‌ ಮುಂಡೋಡಿ ಮಾತನಾಡಿ, ಈ ಹಿಂದೆಯೂ ಮೀಸಲಾತಿ ವರ್ಗಾವಣೆಗೆ ಪ್ರಯತ್ನ ನಡೆದಿತ್ತು. ಅದರಲ್ಲಿ ತೊಡಗಿಸಿಕೊಂಡವರ ಮಾರ್ಗದರ್ಶನ ಪಡೆದು ಮುಂದಿನ ಹೋರಾಟ ಕೈಗೆತ್ತಿಕೊಳ್ಳಬೇಕಿದೆ ಎಂದರು.

ಮಾಹಿತಿ ಹಕ್ಕು ಹೋರಾಟಗಾರ ಡಿ.ಎಂ. ಶಾರಿಕ್‌ ಮಾತನಾಡಿ, ಮೀಸಲಾತಿ ವರ್ಗಾವಣೆಗೆ ಹಿಂದೆಯೇ ಅವಕಾಶ ಇತ್ತು. ಅದನ್ನು ಮತ್ತೆ 20 ವರ್ಷಕ್ಕೆ ವಿಸ್ತರಿಸಲಾಗಿತ್ತು. 2001ರ ಜನಗಣತಿ ಪರಿಗಣಿಸದೆ, 1970ರ ಜನಗಣತಿ ಆಧಾರ ಇಟ್ಟುಕೊಂಡು ಈ ತೀರ್ಮಾನ ಕೈಗೊಂಡಿರುವುದು ಸರಿಯಾದ ನಡೆಯಲ್ಲ. ಹೀಗಾಗಿ ನಮ್ಮ ಈಗಿನ ಹೋರಾಟಕ್ಕೆ ನ್ಯಾಯಯುತ ಬೆಲೆ ಸಿಗಬೇಕು ಎಂದರು.

ತಾ.ಪಂ. ಸದಸ್ಯ ಅಶೋಕ್‌ ನೆಕ್ರಾಜೆ ಮಾತನಾಡಿ, ಉಡುಪಿ, ದ.ಕ. ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಪರಿಶಿಷ್ಟ ಜಾತಿಯವರು ಇದ್ದಾರೆ. ಸುಳ್ಯದಿಂದ ಇತರ ಕ್ಷೇತ್ರಕ್ಕೆ ವರ್ಗಾಯಿಸಿದರೆ ಅವರಿಗೂ ಒಂದು ಅವಕಾಶ ದೊರೆಯುತ್ತದೆ. ಜತೆಗೆ ಲೋಕಸಭಾ ಕ್ಷೇತ್ರಗಳಿಗೆ ಮೀಸಲಾತಿ ನೀಡಲಿ. ಇಲ್ಲಿ ಸರ್ವರಿಗೂ, ಸಮಪಾಲು ದೊರೆಯಲಿ ಎಂಬುವುದೇ ಮೀಸಲಾತಿ ವರ್ಗಾವಣೆಯ ಉದ್ದೇಶ ಎಂದರು.

Advertisement

ರಶೀದ್‌ ಜಟ್ಟಿಪಳ್ಳ ಮಾತನಾಡಿ, ಮೀಸಲಾತಿ ವರ್ಗಾವಣೆ ಒತ್ತಾಯಕ್ಕೆ ಜನರ ಬೆಂಬಲವೂ ಇದೆ ಎಂದರು. ಗ್ರಾ.ಪಂ. ಸದಸ್ಯ ಬಿ.ಸಿ. ವಸಂತ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಈ ಹೋರಾಟಕ್ಕೆ ಎಲ್ಲರ ಬೆಂಬಲ ಬೇಕಿದೆ ಎಂದರು. ಸಭೆಯಲ್ಲಿ ವಸಂತ ಕಿರಿಭಾಗ, ಹಿತೇಶ್‌ ಬೀರಮಲೆ, ಶರತ್‌ಚಂದ್ರ ಎಂ.ಪಿ. ಉಪಸ್ಥಿತರಿದ್ದರು.

ಮುನ್ನಡೆಯಬೇಕು
ಹರೀಶ್‌ ಕುಮಾರ್‌ ಪೆರಾಜೆ ಮಾತನಾಡಿ, ನಮ್ಮ ಹೋರಾಟ ರಾಜ್ಯ, ಕೇಂದ್ರದ ತನಕ ತಲುಪಬೇಕು. ಹೋರಾಟದ ವಿರುದ್ಧ ಧ್ವನಿ ಕೇಳಿ ಬಂದರೂ, ಅದಕ್ಕೆ ದೃತಿಗೆಡದೇ ಮುನ್ನಡೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next