Advertisement
ಈ ಪ್ರದರ್ಶನಲ್ಲಿ ಬಿಡಿಎ, ಬಿಬಿಎಂಪಿ, ರಕ್ಷಣಾ ಇಲಾಖೆ ಸಂಸ್ಥೆಗಳು, ವಿವಿಧ ಬ್ಯಾಂಕ್‌ಗಳು, ಖಾಸಗಿ ಹೋಟೆಲ್‌ಗಳು, ಕೈಗಾರಿಕಾ ಸಂಸ್ಥೆಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು, ವಿಪ್ರೊ, ಸಿಸ್ಕೊ, ಇನ್ಫೋಸಿಸ್ ರೀತಿಯ ಸಂಸ್ಥೆಗಳ ತೋಟಗಾರಿಕಾ ವಿಭಾಗಗಳು ಭಾಗವಹಿಸಿ ವಿವಿಧ ಹಣ್ಣುಗಳು, ತರಕಾರಿ ಹಾಗೂ ಹೂವುಗಳನ್ನು ಬಳಸಿ ವಿಶೇಷ ಕಲಾಕೃತಿಗಳನ್ನು ಪ್ರದರ್ಶಿಸಿದವು.
Related Articles
Advertisement
ವಾರಾಂತ್ಯ ಹೆಚ್ಚು ಮಂದಿ: ಸರಣಿ ರಜೆ ಹಿನ್ನೆಲೆ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ ಶನಿವಾರ 25 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಅದರಲ್ಲಿ 5 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿದ್ದಾರೆ. ಭಾಗಶಃ ಕರ್ನಾಟಕದಲ್ಲಿ ನೆರೆ ಹಿನ್ನೆಲೆ ಮಲೆನಾಡು, ಕರಾವಳಿ ಭಾಗಗಳಿಗೆ ಪ್ರವಾಸ ತೆರಳಲು ಸಾಧ್ಯವಾಗದ ಹಿನ್ನೆಲೆ ಸಿಲಿಕಾನ್ ಸಿಟಿ ಜನರು ಸ್ಥಳೀಯವಾಗಿಯೇ ಸುತ್ತಾಟ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಹೆಚ್ಚು ಮಂದಿ ಲಾಲ್‌ಬಾಗ್‌ಗೆ ಭೇಟಿ ನೀಡುತ್ತಿದ್ದಾರೆ.
ಜಯಚಾಮರಾಜ ಒಡೆಯರ್ ಅವರ ಸಾಧನೆ ಕುರಿತ ಫಲಪುಷ್ಪ ಪ್ರದರ್ಶನವಾಗಿರುವುದರಿಂದ ಒಡೆಯರ್ ಕುರಿತು ಸಾಕಷ್ಟು ಮಾಹಿತಿಯನ್ನು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ನೀಡಿದೆ. ಹೀಗಾಗಿ ಪ್ರದರ್ಶನಕ್ಕೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
12.62 ಲಕ್ಷ ರೂ. ಶುಲ್ಕ ಸಂಗ್ರಹ: “ಫಲಪುಷ್ಪ ಪ್ರದರ್ಶನ ಉದ್ಘಾಟನೆಯಾದ ದಿನ 6,000 ವಯಸ್ಕರು ಹಾಗೂ 2,000 ಮಕ್ಕಳು ಲಾಲ್‌ಬಾಗ್‌ಗೆ ಭೇಟಿ ಕೊಟ್ಟಿದ್ದು, 3.22 ಲಕ್ಷ ರೂ.ಶುಲ್ಕ ಸಂಗ್ರಹವಾಗಿತ್ತು. ಇನ್ನು ಶನಿವಾರ 20,000 ವಯಸ್ಕರು ಹಾಗೂ 5,000 ಮಕ್ಕಳು ಭೇಟಿ ಕೊಟ್ಟಿದ್ದು, 12.62 ಲಕ್ಷ ರೂ. ಶುಲ್ಕ ಸಂಗ್ರಹವಾಗಿದೆ. ಭಾನುವಾರ ಹಾಗೂ ಸೋಮವಾರವೂ ರಜಾ ದಿನವಾಗಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ತೋಟಗಾರಿಕೆ ಇಲಾಖೆ ಲಾಲ್‌ಬಾಗ್ ಉದ್ಯಾನದ ಉಪನಿರ್ದೇಶಕ ಎಂ.ಆರ್.ಚಂದ್ರಶೇಖರ್ ತಿಳಿಸಿದರು.