ಮಲ್ಪೆ: ಇಲ್ಲಿನ ಕಡಲತೀರದಲ್ಲಿ ರವಿವಾರ ಸಂಜೆ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಜನಸಾಗರ. ದೀಪಾವಳಿ ಹಬ್ಬದ ಪ್ರಯುಕ್ತ ಮಲ್ಪೆ ಬೀಚ್‌ಗೆ ಸ್ಥಳೀಯರು ಸೇರಿದಂತೆ ಪ್ರವಾಸಿಗರ ದಂಡು ಹರಿದು ಬಂದಿದೆ.
ಮಲ್ಪೆ ಕಡಲತೀರದಲ್ಲಿ ಪ್ರವಾಸಿಗರ ಮನೋರಂಜನೆಗೆ ಜೆಟ್‌ಸ್ಕೀ, ಸ್ಪೀಡ್‌ಬೋಟ್, ಬನಾನಾ ರೈಡ್, ವಿಂಚ್ ಪ್ಯಾರಾಸೈಲಿಂಗ್ ಸೇರಿದಂತೆ ವಿವಿಧ ಬಗೆಯ ಜಲಸಾಹಸ ಕ್ರೀಡೆಗಳು ಆರಂಭಗೊಂಡಿರುವುದು ಇಷ್ಟರ ವರೆಗೆ ಕೊರೊನಾ ಭೀತಿಯಿಂದ ಮನೆಯೊಳಗೇ ಕುಳಿತಿದ್ದ ಜನರಲ್ಲಿ ಉಲ್ಲಾಸ ಮೂಡಿಸಿದೆ.
ಲಾಕ್‌ಡೌನ್ ತೆರವಿನ ಬಳಿಕ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತೀ ದಿನ ಸುಮಾರು 3,000 ಜನ, ವಾರಾಂತ್ಯದಲ್ಲಿ 7ರಿಂದ 8 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ. ದೀಪಾವಳಿ ಪಾಡ್ಯದ ಪ್ರಯುಕ್ತ ರವಿವಾರ 25 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ಮಲ್ಪೆ ಸೀವಾಕ್‌ನಲ್ಲೂ ಜನಸಂದಣಿ ಕಂಡು ಬಂದಿದೆ.
ಮಧ್ಯಾಹ್ನದ ಬಳಿಕ ಬೀಚ್ ಸಂಪರ್ಕದ ಪ್ರಮುಖ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರವಾಸಿಗರ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಬೀಚ್ ನಿರ್ವಾಹಕರು ಪತ್ರಿಕೆಗೆ ತಿಳಿಸಿದ್ದಾರೆ.
ಮಟ್ಟು ಬೀಚ್ ಆಕರ್ಷಣೆ
ಕಟಪಾಡಿ: ಪ್ರವಾಸಿಗರ ಆಕರ್ಷ ಣೆಯ ಕೇಂದ್ರವಾಗಿ ಬೆಳೆಯುತ್ತಿರುವ ಪ್ರಕೃತಿಯ ರಮಣೀಯ ಮಟ್ಟು ಬೀಚ್‌ಗೂ ರವಿವಾರ ಪ್ರವಾಸಿಗರ ದಂಡು ಹರಿದು ಬಂದಿತ್ತು.
ಒಂದೆಡೆ ಪಿನಾಕಿನಿ ಹೊಳೆ, ಸೇತುವೆ, ಸಮುದ್ರ ಮತ್ತು ಹೊಳೆಯ ನಡುವಿನ ಪಯಣವು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಮಟ್ಟು ಬೀಚ್‌ನತ್ತ ಸೆಳೆಯುವಂತೆ ಮಾಡಿವೆ.