ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೆ ಅಲೆ ಅಬ್ಬರ ಜೋರಾಗಿರುವ ನಡುವೆಯೂ ಸೋಮವಾರ ನಗರದಲ್ಲಿ ಎಲ್ಲೆಡೆ ಜನಜಂಗುಳಿ ಕಂಡು ಬಂತು. ಪ್ರಮುಖ ಸಾರ್ವಜನಿಕ ಸ್ಥಳ, ರಸ್ತೆಗಳು, ಜನರು, ವಾಹನಗಳಿಂದ ತುಂಬಿ ಗಿಜಿಗುಡುತ್ತಿದ್ದವು. ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂವಿನಿಂದ ಶುಕ್ರವಾರ ರಾತ್ರಿಯಿಂದಲೇ ಮಹಾನಗರ ಸಂಪೂರ್ಣ ಸ್ತಬ್ಧವಾಗಿತ್ತು.
ಶನಿವಾರ ಮತ್ತು ರವಿವಾರ ಜನ ಸಂಚಾರ, ವಾಹನ ಓಡಾಟ ತೀರ ವಿರಳವಾಗಿತ್ತು. ಎಲ್ಲೆಡೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ, ಸೋಮವಾರ ಬೆಳಗ್ಗೆಯಿಂದ ಕರ್ಫ್ಯೂ ನಿಯಮಗಳ ಸಡಿಲಿಕೆ ಕಾರಣ ಎಲ್ಲ ಕಡೆಗಳಲ್ಲೂ ಜನ ಸೇರಿದ್ದರು. ವಾಣಿಜ್ಯ ವಹಿವಾಟಿಗೆ ಕಡಿವಾಣ ಹೊರತುಪಡಿಸಿ ಯಾವುದೇ ಬಿಗಿ ಕ್ರಮ ಇಲ್ಲದೇ ಇರುವುದರಿಂದ ಕೊರೊನಾ ಭಯ, ಪೊಲೀಸರ ಹೆದರಿಕೆ ಬಿಟ್ಟು , ಮೈಮರೆತು ಜನರು ರಸ್ತೆಗಳಿಗೆ ಬಂದಿದ್ದರು.
ಇಡೀ ನಗರ ಪೂರ್ತಿಯಾಗಿ ಕೊರೊನಾ ತೊಲಗಿದೆ ಎಂಬಂತೆ ಜನ-ಜೀವನ ಸಹಜ ಸ್ಥಿತಿಗೆ ಬಂದಿದೆ ಎನ್ನುವಂತೆ ಭಾಸವಾಗುತ್ತಿತ್ತು. ನಗರದ ಬಹುತೇಕ ರಸ್ತೆಗಳಲ್ಲಿ ಬೆಳಗ್ಗೆಯಿಂದಲೇ ಬೈಕ್‌ಗಳು, ಕಾರುಗಳು, ಆಟೋಗಳು, ಸರಕು ವಾಹನಗಳ ಸಂಚಾರ ದಟ್ಟಣೆ ಇತ್ತು. ಈಶಾನ್ಯ ಸಾರಿಗೆ ಬಸ್‌ಗಳು ಮತ್ತು ನಗರ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಕಂಡು ಬಂತು. ಕರ್ಫ್ಯೂ ದಿನಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಅಧಿಕವಾಗಿ ಪ್ರಯಾಣಿಕರು ಕಂಡು ಬಂದರು.
ಸೂಪರ್ ಮಾರ್ಕೆಟ್, ಕಿರಾಣಾ ಬಜಾರ್, ಚಪ್ಪಲ್ ಬಜಾರ್, ನೆಹರು ಗಂಜ್, ಹುಮನಾಬಾದ್ ಬೇಸ್, ಆಳಂದ ನಾಕಾ, ಜಗತ್ ವೃತ್ತ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಿಲ್ಲಾ ನ್ಯಾಯಾಲಯದ ರಸ್ತೆ, ಶರಣಬಸವೇಶ್ವರ ದೇವಸ್ಥಾನ ರಸ್ತೆ, ಜೇವರ್ಗಿ ರಸ್ತೆ, ರಾಷ್ಟ್ರಪತಿ ವೃತ್ತ, ರಾಮ ಮಂದಿರ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಜನಜಂಗುಳಿ ಇತ್ತು. ಸೂಪರ್ ಮಾರುಕಟ್ಟೆ ಸೇರಿದಂತೆ ಹಲವೆಡೆ ಬೀದಿ ಬದಿ ವ್ಯಾಪಾರ ಜೋರಾಗಿತ್ತು. ರಾತ್ರಿ 9ಗಂಟೆ ವರೆಗೆ ಮಾತ್ರ ಹೋಟೆಲ್, ಖಾನಾವಳಿಗಳಲ್ಲಿ ಪಾರ್ಸೆಲ್‌ಗೆ ಅನುಮತಿ ನೀಡಿದ್ದರೆ, ಹಲವು ಹೋಟೆಲ್‌ಗಳ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದರು. ಅಗತ್ಯ ವಸ್ತುಗಳ ಅಂಗಡಿ-ಮುಂಗಟ್ಟುಗಳ ಮುಂದೆಯೂ ಅಧಿಕ ಸಂಖ್ಯೆಯಲ್ಲಿ ಜಮಾವಣೆಯಾಗಿ ಖರೀದಿಯಲ್ಲಿ ತೊಡಗಿದ್ದರು.
ಮಧ್ಯಹ್ನದ ಹೊತ್ತಿಗೆ ಮಂಗಳವಾರದಿಂದ 14 ದಿನ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಹೊರ ಬೀಳುತ್ತಿದ್ದಂತೆ ಅಗತ್ಯ ವಸ್ತುಗಳು, ದಿನ ಬಳಕೆ ಸಾಮಗ್ರಿಗಳ ಖರೀದಿಗಾಗಿ ಇನ್ನೂ ಹೆಚ್ಚಿನ ಜನರು ಹೊರ ಬಂದರು. ಕೆಲವೆಡೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಅಡ್ಡಾಡುತ್ತಿದ್ದರು.
ಈ ನಡುವೆ ಪೊಲೀಸರು ಆಗಾಗ್ಗೆ ಗಸ್ತು ತಿರುಗಿ ಎಚ್ಚರಿಸುತ್ತಲೇ ಇದ್ದರು. ಆದರೂ, ಜನ ದಟ್ಟಣೆ ಕಂಡು ಬಂತು. ರಾತ್ರಿ 9 ಗಂಟೆಗೆ ನೈಟ್ ಕರ್ಫ್ಯೂ ಜಾರಿಯಾದ ನಂತರ ಜನ ಸಂಚಾರ ಮತ್ತು ವಾಹನಗಳ ಓಡಾಟ ನಿಯಂತ್ರಣಕ್ಕೆ ಬಂತು.